ಕೆಕೆಆರ್‌ಡಿಬಿ ನಿಯಮಗಳಲ್ಲಿ ಸರಳೀಕರಣ: ಡಾ.ಅಜಯ್‌ ಸಿಂಗ್‌

| Published : Feb 03 2024, 01:45 AM IST

ಸಾರಾಂಶ

ಕಾಮಗಾರಿ ಎಸ್ಟಿಮೇಟ್‌ ಮರು ತಪಾಸಣೆ ಇಲ್ಲ. ಆಯಾ ಜಿಲ್ಲೆ ಡಿಸಿ, ಸಿಇಒಗಳಿಗೆ ಕಾಮಗಾರಿ, ಏಜೆನ್ಸಿ ಬದಲಾವಣೆ ಅಧಿಕಾರ: ಕೆಕೆಆರ್‌ಡಿಬಿ ಅಧ್ಯಕ್ಷ

ಕನ್ನಡಪ್ರಭ ವಾರ್ತೆ ಕಲಬುರಗಿ

ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿಯ ಕಾಮಗಾರಿಗಳ ಅನುಷ್ಠಾನಕ್ಕೆ ವೇಗ ನೀಡುವ ಉದ್ದೇಶದಿಂದ ಮಂಡಳಿಯ ಅಧ್ಯಕ್ಷ ಡಾ. ಅಜಯ್‌ ಸಿಂಗ್‌ ಅವರು ಹಲವು ಸರಳೀಕರಣ ಕ್ರಮಗಳನ್ನು ಘೋಷಿಸಿದ್ದಾರೆ.

ಡಾ. ಅಜಯ್‌ ಸಿಂಗ್‌ ಕೆಕೆಆರ್‌ಡಿಬಿ ಅಧ್ಯಕ್ಷರಾದ ನಂತರ ಇದೇ ಮೊದಲ ಬಾರಿಗೆ ಬಳ್ಳಾರಿಯಲ್ಲಿ ಶುಕ್ರವಾರ ಕೆಕೆಆರ್‌ಡಿಬಿ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಈಗಿರುವ ಸುತ್ತು ಬಳಸುವ ನಿಯಮಗಳನ್ನೆಲ್ಲ ಹೆಕ್ಕಿ ತೆಗೆದು ಸರಳ ಮಾಡಲಾಗುತ್ತಿದೆ. ಇದರಿಂದ ಕಾಮಗಾರಿ ಕ್ರಿಯಾ ಯೋಜನೆಗಳಿಗೆ ಬೇಗ ಅನುಮೋದನೆ, ಅವುಗಳ ಅನುಷ್ಠಾನಕ್ಕೆ ಅನುಕೂಲವಾಗಲಿದೆ. ಇಂತಹ ಸರಳೀಕರಣ ಕ್ರಮವೂ ಇದೇ ಮೊದಲ ಬಾರಿಗೆ ಚಿಂತಿಸಿ ಜಾರಿಗೆ ತರಲಾಗುತ್ತಿದೆ ಎಂದರು.

ಬಳ್ಳಾರಿ ಜಿಲ್ಲೆಯಲ್ಲಿ 2020- 21 ನೇ ಸಾಲಿನಲ್ಲಿ ಕಾಮಗಾರಿಗಳು ನನೆಗುದಿಗೆ ಬಿದ್ದಿರೋದು ಗಮನಕ್ಕೆ ಬಂದಿದೆ. ತಕ್ಷಣ ಕಾಮಗಾರಿಗಳು ಮುಗಿಸದೆ ಹೋದಲ್ಲಿ ಅವನ್ನೆಲ್ಲ ವಾಪಸ್‌ ಪಡೆಯೋದಾಗಿ ಹೇಳಿದರು.

ಗಡವಿನೊಳಗೆ ಆಗದೆ ಹೋದರೆ ಅನುಷ್ಠಾನ ಅಧಿಕಾರಿಗಳು, ಸಂಬಂಧಪಟ್ಟಂತಹ ಏಜೆನ್ಸಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುತ್ತದೆ ಎಂದು ಸೂಚಿಸಿದರು.

2.50 ಕೋಟಿ ರು.ಗೆ ಮೇಲ್ಪಟ್ಟು ಇರುವ ಕಾಮಗಾರಿಗಳಿಗೆ ಆಡಳಿತಾತ್ಮಕ ಅನುಮೋದನೆ ನೀಡಲು ಮಾತ್ರ ಕೆಕೆಆರ್‌ಡಿಬಿಗೆ ಕಡತ ಕಳುಹಿಸಬೇಕು. ಕಾಮಗಾರಿ ಅಂದಾಜನ್ನು ಮತ್ತೆ ನಾವು ಮರು ತಪಾಸಣೆ ಮಾಡೋದನ್ನ ತಕ್ಷಣದಿಂದಲೇ ಕೈಬಿಡುತ್ತೇವೆ. ಇಷ್ಟೇ ಅಲ್ಲದೆ ಕಾಮಗಾರಿಯ ಏಜೆನ್ಸಿ ಬದಲಾವಣೆ, ಕಾಮಗಾರಿ ಬದಲಾಣೆ ಯಾವುದೇ ಇದ್ದರೂ ಮೊದಲೆಲ್ಲಾ ಕೆಕೆಆರ್‌ಡಿಬಿಗೆ ಬರಬೇಕಿತ್ತು. ಅದರೀಗ ಈ ಅಧಿಕಾರ ಆಯಾ ಜಿಲ್ಲೆಗಳ ಡಿಸಿ, ಸಿಇಒಗಳಿಗೇ ನೀಡಲಾಗಿದೆ. ತಕ್ಷಣ ಇಂತಹ ಬದಲಾವಣೆಗಳಿದ್ದಲ್ಲಿ ಮಾಡಿ ನಮ್ಮ ಧೃಢೀಕರಣಕ್ಕೆ ಮಾತ್ರ ಮಾಹಿತಿ ನೀಡಿರಿ, ಅದನ್ನು ನಾವು ನಮ್ಮ ಆನ್‌ಲೈನ್‌ನಲ್ಲಿ ಅಪಲೋಡ್‌ ಮಾಡುತ್ತೇವೆಂದು ಅಧಿಕಾರಿಗಳಿಗೆ ಸರಳೀಕರಣವಾಗುತ್ತಿರುವ ನಿಯಮಗಳ ಬಗ್ಗೆ ಹೇಳಿದರು.

ಕಾಮಗಾರಿಗಳಿಗೆ ಮಂಜೂರಾತಿ ಕೊಟ್ಟು ಹಣ ಇಟ್ಟರೂ ಕೆಲಸವಾಗುತ್ತಿಲ್ಲ. ಭೂಮಿ ಸಿಗೋದಿಲ್ಲವೆಂದು ದೂರುಗಳಿವೆ. ಆಯಾ ಇಲಾಖೆಯವರು ಕಾಮಗಾರಿಗಳಿಗೆ ಭೂಮಿ ಮೀಸಲಿಡೋ ಹೊಣೆಗಾರಿಕೆ ನಿಭಾಯಿಸಬೇಕು. ಸಭೆಯಲ್ಲಿ ಪಿಡಬ್ಲೂಡಿ, ಆರ್‌ಡಿಪಿಆರ್‌, ನಿರ್ಮಿತಿ ಕೇಂದ್ರ, ಲ್ಯಾಂಡ್‌ ಆರ್ಮಿ, ಗ್ರಾಮೀಣ ನೀರು ಪೂರೈಕೆ, ಶಿಕ್ಷಣ ಇಲಾಖೆ, ಆರೋಗ್ಯ ಸೇವೆಗಳ ಬಗ್ಗೆಯೂ ಸಭೆಯಲ್ಲಿ ಕಾಮಗಾರಿಗಳ ಚರ್ಚೆ ನಡೆಸಲಾಯಿತು.

ಬಳ್ಳಾರಿ ಉಸ್ತುವಾರಿ ಸಚಿವ ಬಿ. ನಾಗೇಂದ್ರ, ಶಾಸಕ ಗಣೇಶ, ತುಕಾರಾಮ, ಜಿಲ್ಲಾಧಿಕಾರಿ ಪ್ರಶಾಂತ ಕುಮಾರ್‌ ಮಿಶ್ರಾ, ಜಿಪಂ ಸಿಇಒ ರಾಹುಲ್‌ ಸಂಕನೂರ್‌, ಕೆಕೆಆರ್‌ಡಿಬಿ ಕಾರ್ಯದರ್ಶಿ ಸುಂದರೇಶ ಬಾಬು, ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ರೆಡ್ಡಿ, ಕೆಕೆಆರ್‌ಡಿಬಿ ಎಂಜಿನಿಯರ್‌ಗಳು, ಉಪ ಕಾರ್ಯದರ್ಶಿ ಸೇರಿದಂತೆ ಜಿಲ್ಲಾಮಟ್ಟದ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು. ನಿವೇಶನವಿಲ್ಲ ಎಂದರೆ ಹೇಗೆ?

ಹಣ ತ್ವರಿತವಾಗಿ ವೆಚ್ಚವಾಗಬೇಕು, ಕಾಮಗಾರಿಗಳೂ ಸಮಯಕ್ಕೆ ಸರಿಯಾಗಿ ಮುಗಿದು ಜನರಿಗೆ ಅನುಕೂಲವಾಗಬೇಕು, ಅಂಗನವಾಡಿ ಕಟ್ಟಲು ಹಣ ನೀಡಿದರೆ 3 ವರ್ಷವಾದರೂ ನಿವೇಶನವಿಲ್ಲವೆಂಬ ರಾಗ ಹೇಳಿದರೆ ಹೇಗೆಂದು ಅಸಮಾಧಾನ ಹೊರಹಾಕಿದರು. ಕೆಕೆಆರ್‌ಡಿಬಿ ಕಾರ್ಯದರ್ಶಿಗಳು ಸಹ 2021ರಿಂದ ಇಲ್ಲಿಯವರೆಗೆ ಯಾವ ಕಾಮಗಾರಿ ಇನ್ನೂ ಶುರುವಾಗಿಲ್ಲವೋ ಅದನ್ನು ಶುರು ಮಾಡಲು ವಾರದ ಗಡವು ನೀಡುತ್ತೇವೆ. ಆಗದೆ ಹೋದಲ್ಲಿ ಅವೆಲ್ಲ ಕಾಮಗಾರಿ ಪಟ್ಟಿ ಕೆಕೆಆರ್‌ಡಿಬಿ ತರಿಸಿಕೊಂಡು ಕಾಮಗಾರಿಗಳನ್ನು ಕೈಬಿಡುವ ಬಗ್ಗೆ ನಿರ್ಣಯಿಸುತ್ತದೆ. ಅನುಷ್ಠಾನ ಅಧಿಕಾರಿಗಳು ಮುತುವರ್ಜಿಯಿಂದ ಕೆಲಸ ಮಾಡದೆ ಹೋದಲ್ಲಿ ಇದು ಕ್ರಮ ನಿಶ್ಚಿತ ಎಂದರು.