ಸಾರಾಂಶ
ಕನ್ನಡಪ್ರಭ ವಾರ್ತೆ, ಚಾಮರಾಜನಗರಚಾಮರಾಜನಗರದ ಮೆಡಿಕಲ್ ಆಸ್ಪತ್ರೆಯ ಸಾಮಾನ್ಯ ಶಸ್ತ್ರ ಚಿಕಿತ್ಸಾ ವಿಭಾಗದ ಮುಖ್ಯಸ್ಥರಾಗಿರುವ ಡಾ.ಟಿ.ಕಿರಣ್ ಅವರನ್ನು ಕರ್ತವ್ಯದಿಂದ ವಜಾ ಮಾಡಬೇಕು ಎಂದು ಭೀಮ್ ರಾವ್ ಅಂಬೇಡ್ಕರ್ ಸೇನೆ ರಾಜ್ಯಾಧ್ಯಕ್ಷ ಗಣೇಶ್ ಪ್ರಸಾದ್ ಆಗ್ರಹಿಸಿದರು.ನಗರದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಭಾಂಗಣದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಡಾ.ಕಿರಣ್ ಆಸ್ಪತ್ರೆಗೆ ಬಂದು ನಾಲ್ಕು ವರ್ಷವಾಗಿದ್ದು, ಬಂದ ದಿನದಿಂದಲೂ ಸರಿಯಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲ, ಅವರು ಸರಿಯಾದ ಸಮಯಕ್ಕೆ ಆಸ್ಪತ್ರೆಗೆ ಹಾಜರಾಗುತ್ತಿಲ್ಲ. ಇದರಿಂದ ರೋಗಿಗಳಿಗೆ ತೊಂದರೆಯಾಗುತ್ತಿದ್ದು ಈ ಸಂಬಂಧ ಡೀನ್ ಅವರಿಗೂ ದೂರು ನೀಡಲಾಗಿದೆ ಎಂದರು.ಶಸ್ತ್ರ ಚಿಕಿತ್ಸಾ ವಿಭಾಗಕ್ಕೆ ಆಧುನಿಕ ಉಪಕರಣಗಳನ್ನು ನೀಡಲಾಗಿದ್ದು ಇದನ್ನು ಡಾ.ಕಿರಣ್ ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ. ಈ ಸಂಬಂಧ ಡೀನ್ ಅವರು ಕೂಡ ನೋಟಿಸ್ ನೀಡಿದ್ದಾರೆ. ಅಲ್ಲದೇ ರೋಗಿಗಳನ್ನು ನೋಡದೇ ಸುಮ್ಮನೇ ಅಡ್ಡಾಡುತ್ತಿರುವ ಕಿರಣ್ ಅವರು ಆಸ್ಪತ್ರೆಗೆ ಅವಶ್ಯಕತೆ ಇರುವುದಿಲ್ಲ ಎಂದರು.ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವರಿಗೂ ಮನವಿ ಸಲ್ಲಿಸಲಾಗಿದ್ದು ಕೂಡಲೇ ಸಂಬಂಧಪಟ್ಟವರು ಡಾ.ಕಿರಣ್ ಅವರನ್ನು ಸೇವೆಯಿಂದ ವಜಾ ಮಾಡಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಸೇನೆ ವತಿಯಿಂದ ಆಸ್ಪತ್ರೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು. ಪತ್ರಿಕಾಗೋಷ್ಠಿಯಲ್ಲಿ ಜಯಶಂಕರ್, ಅಮಿತ್ , ಶೇಷ, ನವೀನ್ ಇದ್ದರು.