ಸಾರಾಂಶ
ಕನ್ನಡಪ್ರಭ ವಾರ್ತೆ ಶಿವಮೊಗ್ಗ ಶಿವಮೊಗ್ಗ ವೈದ್ಯಕೀಯ ವಿಜ್ಞಾನಗಳ ಮಹಾವಿದ್ಯಾಲಯವನ್ನು ಮೇಲ್ದರ್ಜೆಗೇರಿಸಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯನ್ನಾಗಿ ಪರಿವರ್ತಿಸಲು ಎಲ್ಲ ರೀತಿ ಪ್ರಯತ್ನ ಮಾಡಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧುಬಂಗಾರಪ್ಪ ಹೇಳಿದರು.
ನಗರದ ಸಿಮ್ಸ್‌ನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅವರು ಮಾತನಾಡಿ, ಹೃದಯ, ಕಿಡ್ನಿ, ಮೆದುಳು ಮುಂತಾದ ಗಂಭೀರ ಸ್ವರೂಪದ ಕಾಯಿಲೆಗಳಿಗೆ ಜನಸಾಮಾನ್ಯರು ಖರ್ಚುಗಳಿಗೆ ಹೆದರಿ ಚಿಕಿತ್ಸೆ ತೆಗೆದುಕೊಳ್ಳದೇ ನರಳಾಡುತ್ತಿದ್ದಾರೆ. ಅಂತಹವರಿಗೆ ಸುಲಭವಾಗಿ ಚಿಕಿತ್ಸೆ ದೊರೆಯುವಂತಾಗಬೇಕು ಎಂದರು.ಸಿಮ್ಸ್‌ಗೆ ಅಗತ್ಯವಿರುವ ಬಹುತೇಕ ಸೌಲಭ್ಯಗಳನ್ನು ಈಗಾಗಲೇ ಒದಗಿಸಲಾಗಿದೆ. ಅಗತ್ಯವಿರುವ ಇನ್ನಷ್ಟು ಭೌತಿಕ ಕಟ್ಟಡಗಳು, ಮಾನವ ಸಂಪನ್ಮೂಲ ಸೌಲಭ್ಯಗಳ ಒದಗಿಸುವುದರ ಜೊತೆಗೆ ಇನ್ನಷ್ಟು ಅತ್ಯಾಧುನಿಕ ಯಂತ್ರಗಳನ್ನು ಅಳವಡಿಸಿ, ಜನಸಾಮಾನ್ಯರಿಗೆ ಉತ್ತಮ ದರ್ಜೆಯ ಹಾಗೂ ಗುಣಮಟ್ಟದ ಸೇವೆಗಳನ್ನು ಒದಗಿಸುವಂತೆ ಮಾಡುವ ಆಶಯ ತಮ್ಮದಾಗಿದೆ. ಆದ್ದರಿಂದ ಸಿಮ್ಸ್‌ನ ಆಡಳಿತಾಧಿಕಾರಿಗಳು ಅಗತ್ಯವಿರುವ ಕಟ್ಟಡಗಳು, ಮಾನವ ಸಂಪನ್ಮೂಲ ಹಾಗೂ ಯಂತ್ರಗಳನ್ನು ಕಲ್ಪಿಸಿಕೊಳ್ಳಲು ಕ್ರಿಯಾಯೋಜನೆಯನ್ನು ರೂಪಿಸಿ, ಸರ್ಕಾರಕ್ಕೆ ಸಲ್ಲಿಸಬೇಕು. ಜನರಿಗೆ ಕಡಿಮೆ ದರದಲ್ಲಿ ಉತ್ತಮ ಸೇವೆ ದೊರೆಯುವುದು ಹಾಗೂ ಸಿಮ್ಸ್‌ನ ಆದಾಯ ಮೂಲವೂ ಹೆಚ್ಚಳವಾಗಿ ನಿರ್ವಹಣೆ ಸುಲಭವಾಗಲಿದೆ. ಈ ವಿಷಯದಲ್ಲಿ ಸಿಮ್ಸ್ ಆಡಳಿತಾಧಿಕಾರಿಗಳು ಹಾಗೂ ಸಿಬ್ಬಂದಿ ವಿಶೇಷ ಗಮನಹರಿಸಬೇಕಾದ ಅಗತ್ಯವಿದೆ ಎಂದರು.
ಸಿಮ್ಸ್‌ನಲ್ಲಿ ಚಿಕಿತ್ಸೆಗೆ ಆಗಮಿಸುವ ವಿವಿಧ ಕಾಯಿಲೆಗಳನ್ನು ಗುರುತಿಸುವ ಅನೇಕ ಯಂತ್ರಗಳು, ಪರೀಕ್ಷಾ ಲ್ಯಾಬ್‌ಗಳನ್ನು ಇನ್ನಷ್ಟು ಉನ್ನತೀಕರಿಸುವುದರ ಜೊತೆಗೆ ಸಿಬ್ಬಂದಿಯನ್ನು ನಿಯೋಜಿಸಬೇಕಾದ ಅಗತ್ಯವಿದೆ. ಕೊರೋನಾ ಮಾದರಿಯಲ್ಲಿಯೇ ಕೆ.ಎಫ್.ಡಿ.ಯಂಥ ಮಾರಣಾಂತಿಕ ಕಾಯಿಲೆಗಳ ಪ್ರಾಥಮಿಕ ಸಂಶೋಧನೆಗಳು ಇಲ್ಲಿಯೇ ನಡೆಯುವಂತಾಗಬೇಕು. ಮುಂದಿನ 20 ವರ್ಷಗಳ ದೂರದೃಷ್ಠಿ ಇಟ್ಟುಕೊಂಡು ಕಾರ್ಯಯೋಜನೆ ರೂಪಿಸುವಂತೆ ಅವರು ಸಲಹೆ ನೀಡಿದರು.ತುರ್ತು ಅಗತ್ಯಗಳು:
ಸಿಮ್ಸ್‌ನಲ್ಲಿ ಸೇವೆ ಸಲ್ಲಿಸುತ್ತಿರುವ ವೈದ್ಯಾಧಿಕಾರಿಗಳು, ಪ್ರಶಿಕ್ಷಣಾರ್ಥಿಗಳು, ಆರೋಗ್ಯ ಸಿಬ್ಬಂದಿ ಇನ್ನಷ್ಟು ವಸತಿ ಗೃಹಗಳ ಅಗತ್ಯವಿದೆ. ಅದಕ್ಕಾಗಿ ಹೊಸದೊಂದು ವಸತಿ ಸಮುಚ್ಛಯ ನಿರ್ಮಿಸುವ ಅಗತ್ಯವಿದೆ. ಇನ್ನೂ ಹಲವು ವೈದ್ಯಕೀಯ ವಿಭಾಗಗಳಿಗೆ ಪ್ರತ್ಯೇಕ ಹಾಗೂ ಹೆಚ್ಚುವರಿ ಕಟ್ಟಡಗಳ ಅಗತ್ಯವಿದೆ. ಡಿ.ಗ್ರೂಪ್ ನೌಕರರ ಸೇವೆ ತುರ್ತಾಗಿ ಬೇಕಾಗಿದೆ ಎಂದು ಸಿಮ್ಸ್ ಆಡಳಿತಾಧಿಕಾರಿಗಳು ಸಭೆಯಲ್ಲಿ ಸಚಿವರ ಗಮನ ಸೆಳೆದರು. ಆಗ ಈ ಎಲ್ಲ ಸೌಲಭ್ಯವನ್ನು ಆದ್ಯತೆಯ ಮೇರೆಗೆ ಒದಗಿಸಲು ಕ್ರಮ ವಹಿಸುವುದಾಗಿ ತಿಳಿಸಿದರು.ಮೆಗ್ಗಾನ್‌ನಲ್ಲಿ ದಾಖಲಾಗುವ ಸಿಬ್ಬಂದಿ ಜೊತೆಗೆ ಆರೈಕೆಗೆಂದು ಬರುವವರಿಗಾಗಿ ಅತ್ಯಂತ ಕಡಿಮೆ ಹಾಗೂ ಸುಸಜ್ಜಿತ ವಸತಿ ಸೌಲಭ್ಯವನ್ನು ಒದಗಿಸಲು ಪ್ರತ್ಯೇಕ ಕೊಠಡಿಗಳ ಅಗತ್ಯವಿರುವುದು ತಿಳಿದಿದ್ದು, ಅದಕ್ಕಾಗಿ ತಾತ್ಕಾಲಿಕ ವ್ಯವಸ್ಥೆ ಒದಗಿಸಲು ಹಾಗೂ ಜನರ ಅನುಕೂಲಕ್ಕಾಗಿ ಗ್ರಂಥಾಲಯ ಸೌಲಭ್ಯವನ್ನು ಕಲ್ಪಿಸಬೇಕು ಎಂದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಡಾ. ಆರ್.ಸೆಲ್ವಮಣಿ, ಸಿಮ್ಸ್‌ನ ನಿರ್ದೇಶಕ ಡಾ.ವಿರೂಪಾಕ್ಷಪ್ಪ, ಮೆಗ್ಗಾನ್ ಜಿಲ್ಲಾ ಅಧೀಕ್ಷಕ ತಿಮ್ಮಪ್ಪ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಶ್ ಸುರಗೀಹಳ್ಳಿ ಮತ್ತಿತರರು ಇದ್ದರು.- - - -8ಎಸ್‌ಎಂಜಿಕೆಪಿ05:
ಶಿವಮೊಗ್ಗದ ಸಿಮ್ಸ್‌ನ ಸಭಾಂಗಣದಲ್ಲಿ ಬುಧವಾರ ಏರ್ಪಡಿಸಿದ್ದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಮಾತನಾಡಿದರು.