ಸಾರಾಂಶ
ಕಾಂಗ್ರೆಸ್ ಮುಖಂಡರಿಂದ ಸಂಸದರಿಗೆ ಅಭಿನಂದನೆ
ಕನ್ನಡಪ್ರಭ ವಾರ್ತೆ ಯಳಂದೂರುಚಾಮರಾಜನಗರ ಲೋಕಸಭಾ ಕ್ಷೇತ್ರದ ಅಭಿವೃದ್ಧಿಗೆ ನಾನು ಪ್ರಾಮಾಣಿಕವಾಗಿ ಪ್ರಯತ್ನ ಮಾಡುತ್ತೇನೆ. ಈಗಾಗಲೇ ಕ್ಷೇತ್ರ ವ್ಯಾಪ್ತಿಯಲ್ಲಿ ನಾನು ಪ್ರವಾಸ ಮಾಡುತ್ತಿದ್ದೇನೆ ಎಂದು ಸಂಸದ ಸುನೀಲ್ ಬೋಸ್ ಹೇಳಿದರು.
ಸಂತೆಮರಹಳ್ಳಿ ಬಳಿ ಗುರುವಾರ ಸಂಜೆ ಸಂಸದ ಸುನೀಲ್ ಬೋಸ್‌ರವರಿಗೆ ಕಾಂಗ್ರೆಸ್ ಪಕ್ಷದ ಮುಖಂಡರು ಹಮ್ಮಿಕೊಂಡಿದ್ದ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.ನನ್ನ ಕ್ಷೇತ್ರ ವ್ಯಾಪ್ತಿಯಲ್ಲಿ ಜನರು ನನ್ನ ಮೇಲೆ ಭರವಸೆ ಇಟ್ಟು ಗೆಲ್ಲಿಸಿದ್ದಾರೆ. ಇದನ್ನು ಹುಸಿಗೊಳಿಸದೆ ನಾನು ಕೆಲಸ ಮಾಡುತ್ತೇನೆ. ಮೈಸೂರಿನಲ್ಲಿ ಸಂಸದರ ಕಚೇರಿಯನ್ನು ತೆರೆದಿದ್ದು ಈಗ ಚಾಮರಾಜನಗರದ ಜಿಲ್ಲಾಡಳಿತ ಭವನದಲ್ಲೂ ಕಚೇರಿಯನ್ನು ತೆರೆಯಲಾಗಿದೆ. ಸಾರ್ವಜನಿಕರು ಇಲ್ಲಿಗೆ ಸಂಪರ್ಕಿಸಲು ತಮ್ಮ ಆಹವಾಲುಗಳನ್ನು ಸಲ್ಲಿಸಲು ಅನುಕೂಲ ಮಾಡಲಾಗಿದೆ. ಕ್ಷೇತ್ರದಲ್ಲಿನ ಮೂಲ ಸಮಸ್ಯೆಗಳ ನಿವಾರಣೆ ಹಾಗೂ ಶೈಕ್ಷಣಿವಾಗಿ ಇದನ್ನು ಮುಂದುವರಿಯಲು ಬೇಕಾದ ಎಲ್ಲಾ ಸವಲತ್ತುಗಳನ್ನು ತರಲು ಪ್ರಾಮಾಣಿಕವಾಗಿ ಯತ್ನಿಸುತ್ತೇನೆ. ಕೇಂದ್ರ ಸರ್ಕಾರದಿಂದ ಬರುವ ಅನುದಾನಗಳನ್ನು ಸದ್ಬಳಕೆ ಮಾಡಿಕೊಂಡು ಇದನ್ನು ಮಾದರಿಯಾಗಿಸುವ ಯತ್ನ ನಡೆಸುತ್ತೇನೆ. ಹೆಚ್ಚಿನ ಅನುದಾನಗಳನ್ನು ತಂದು ಇದರ ಅಭಿವೃದ್ಧಿಗೆ ಪ್ರಯತ್ನಿಸುತ್ತೇನೆ ಎಂದರು.
ಕಾಂಗ್ರೆಸ್ ಮುಖಂಡ ಡಿ.ಎನ್.ನಟರಾಜು ಕೊಳ್ಳೇಗಾಲ ನಗರಸಭಾ ಮಾಜಿ ಸದಸ್ಯ ಮುಡಿಗುಂಡ ಶಾಂತರಾಜು, ತಾಪಂ ಮಾಜಿ ಸದಸ್ಯ ವೈ.ಕೆ.ಮೋಳೆ ನಾಗರಾಜು, ಪ್ರಭುಶಂಕರ, ವೆಂಕಟೇಶ್, ಶಿವನಂಜಶೆಟ್ಟಿ, ತಮ್ಮಣ್ಣ, ರಾಜಶೇಖರ್ ಸಂಸದರ ಆಪ್ತ ಕಾರ್ಯದರ್ಶಿ ಲಕ್ಷ್ಮಿನಾರಾಯಣ ಸೇರಿ ಅನೇಕರು ಇದ್ದರು.