ರಂಗಾಯಣ ಕಟ್ಟಲು ಪ್ರಾಮಾಣಿಕ ಪ್ರಯತ್ನ: ರಾಜು ತಾಳಿಕೋಟೆ

| Published : Oct 25 2024, 12:46 AM IST

ಸಾರಾಂಶ

ಧಾರವಾಡ ರಂಗಾಯಣವು ೭ ಜಿಲ್ಲೆ ವ್ಯಾಪಿಯಲ್ಲಿ ಹೊಂದಿದ್ದು, ಇದರಡಿ ಬರುವ ಗ್ರಾಮೀಣ ಪ್ರತಿಭೆ ಮತ್ತು ಕಲಾವಿದರ ಬಳಿ ತೆರಳಿ, ಅವರ ಸಮಸ್ಯೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ನಿರ್ಧರಿಸಲಾಗಿದೆ.

ಶಿರಸಿ: ಗುಬ್ಬಿ ಗೂಡು ಕಟ್ಟುವ ರೀತಿಯಲ್ಲಿ ಒಂದೊಂದು ಎಳೆಯನ್ನು ತಂದು ರಂಗಾಯಣ ಕಟ್ಟುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಧಾರವಾಡ ರಂಗಾಯಣದ ನಿರ್ದೇಶಕ ರಾಜು ತಾಳಿಕೋಟೆ ತಿಳಿಸಿದರು.ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಧಾರವಾಡ ರಂಗಾಯಣವು ೭ ಜಿಲ್ಲೆ ವ್ಯಾಪಿಯಲ್ಲಿ ಹೊಂದಿದ್ದು, ಇದರಡಿ ಬರುವ ಗ್ರಾಮೀಣ ಪ್ರತಿಭೆ ಮತ್ತು ಕಲಾವಿದರ ಬಳಿ ತೆರಳಿ, ಅವರ ಸಮಸ್ಯೆ ಮತ್ತು ಅವಶ್ಯಕತೆಗಳನ್ನು ಪೂರೈಸಲು ನಿರ್ಧರಿಸಲಾಗಿದೆ. ಅಲ್ಲದೇ, ನಾಟಕ ಸಂಸ್ಥೆಗಳಿಗೆ ನೆರವು ನೀಡಲು ತೀರ್ಮಾನಿಸಲಾಗಿದೆ. ಹಾವೇರಿ ಜಿಲ್ಲೆ ಪ್ರವಾಸ ಮಾಡಿದ್ದು, ಇದೀಗ ಉತ್ತರಕನ್ನಡ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದೇನೆ. ನಿರಂತರ ರಂಗ ಚಟುವಟಿಕೆಗಳನ್ನು ನಡೆಸಲು ರಂಗಾಯಣ ನಿರ್ಧರಿಸಿದೆ ಎಂದರು.ಪೌರಾಣಿಕ ನಾಟಕ ಹಾಗೂ ಇತಿಹಾಸ ಪೂರಕ ನಾಟಕಗಳನ್ನು ಜನರಿಗೆ ತಲುಪಿಸುವ ಕಾರ್ಯ ಆಗಬೇಕಿದೆ. ರಂಗಾಯಣದ ಕೆಲಸಗಳು ಎಲ್ಲ ಜಿಲ್ಲೆಗಳ ಕಲಾವಿದರಿಗೂ ತಲುಪಬೇಕು. ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ರಂಗ ಸಂಸ್ಥೆಯವರು ಮತ್ತು ರಂಗ ಕಲಾವಿದರು ತಮ್ಮ ಸಮಸ್ಯೆಯನ್ನು ರಂಗಾಯಣ ಗಮನಕ್ಕೆ ತಂದರೆ ಅವುಗಳನ್ನು ಪರಿಹರಿಸಲು ಕ್ರಮ ತೆಗೆದುಕೊಳ್ಳುವುದರ ಜತೆ ಮೈಸೂರಿನ ರಂಗಾಯಣದಂತೆ ಧಾರವಾಡ ರಂಗಾಯಣಕ್ಕೂ ಪ್ರಮುಖ್ಯತೆ ನೀಡಲು, ರಂಗ ಶಿಕ್ಷಕರು ಮತ್ತು ರಂಗಶಾಲೆಗಳನ್ನು ಮಂಜೂರು ಮಾಡುವಂತೆ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ಸಚಿವರ ಬಳಿ ವಿನಂತಿಸಲಾಗಿದೆ. ಒಳ್ಳೆಯ ತಂಡಗಳನ್ನು ಆಯ್ಕೆ ಮಾಡಿಕೊಂಡು ಪ್ರೇಕ್ಷಕರ ಸಂಖ್ಯೆ ಅಧಿಕ ಮಾಡುವುದು ರಂಗಾಯಣದ ಉದ್ದೇಶವಾಗಿದೆ ಎಂದರು.ರಂಗಾಯಣದ ಆಡಳಿತಾಧಿಕಾರಿ ಶಶಿಕಲಾ ಹುಡೇದ್ ಮಾತನಾಡಿ, ರಂಗಭೂಮಿಯ ಕಲಾವಿದರನ್ನು ಒಂದೆಡೆ ಸೇರಿಸಿ, ರಂಗ ಚಟುವಟಿಕೆಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಜಿಲ್ಲಾ ಪ್ರವಾಸವನ್ನು ನಡೆಸುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆ ರಂಗ ಚಟುವಟಿಕೆಗಳಿಂದ ದೂರವಿದೆ. ರಂಗ ಚಟುವಟಿಕೆಗಳು ನಿರಂತರವಾಗಿ ನಡೆಯುತ್ತಿರಬೇಕು. ಆ ನಿಟ್ಟಿನಲ್ಲಿ ರಂಗಾಯಣದಿಂದ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದ್ದೇವೆ. ನಾಟಕ ಶಿಬಿರವನ್ನು ಮಾಡಿ ಯುವಕರನ್ನು ರಂಗ ಚಟುವಟಿಕೆಯತ್ತ ಒಲುವು ಮೂಡಿಸಲು ಯೋಜನೆ ರೂಪಿಸಿದ್ದೇವೆ. ಉತ್ತರ ಕನ್ನಡ ಜಿಲ್ಲೆಯಲ್ಲೂ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದ್ದೇವೆ ಎಂದರು.ರಂಗಕಲಾವಿದ ಚಂದ್ರು ಉಡುಪಿ ಮತ್ತಿತರರು ಇದ್ದರು.