ಸಾರಾಂಶ
ಕನ್ನಡಪ್ರಭ ವಾರ್ತೆ ಗೌರಿಬಿದನೂರು
ತಾಲೂಕು ಕೃಷಿಕ ಸಮಾಜದ ಅಧ್ಯಕ್ಷರಾಗಿ ಚಿಗಟಗೆರೆ ಪ್ರಭಾಕರರೆಡ್ಡಿ, ಉಪಾಧ್ಯಕ್ಷರಾಗಿ ಎನ್.ಸಿ.ಶ್ರೀರಾಮಯ್ಯ ಮತ್ತು ಜಿಲ್ಲಾ ಪ್ರತಿನಿಧಿಯಾಗಿ ಆ.ಮುನಿಲಕ್ಷ್ಮಮ್ಮ ಚುನಾವಣೆಯ ಮೂಲಕ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಘೋಷಣೆ ಮಾಡಿದ್ದಾರೆ.ನಗರದ ಸಹಾಯಕ ಕೃಷಿ ನಿರ್ದೇಶಕರ ಕಚೇರಿಯಲ್ಲಿ ತಾಲೂಕು ಕೃಷಿಕ ಸಮಾಜದ ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಜಿಲ್ಲಾಪ್ರತಿನಿಧಿ ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಪ್ರಭಾಕರರೆಡ್ಡಿ ಮತ್ತು ಸಿ.ಎಸ್.ವಿಜಯ ರಾಘವರೆಡ್ಡಿ, ಉಪಾಧ್ಯಕ್ಷ ಸ್ಥಾನಕ್ಕೆ ಎನ್.ಸಿ.ಶ್ರೀರಾಮಯ್ಯ ಮತ್ತು ಎಸ್.ಆರ್.ಮನೋಹರ್, ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಆರ್.ಮುನಿಲಕ್ಷ್ಮಮ್ಮ ಮತ್ತು ಎಚ್.ಬಸಪ್ಪ ರೆಡ್ಡಿ ಸ್ಪರ್ಧಿಸಿದ್ದರು. ಅಧ್ಯಕ್ಷರಾಗಿ ಪ್ರಭಾಕರ ರೆಡ್ಡಿ(10 ಮತ), ಉಪಾಧ್ಯಕ್ಷರಾಗಿ ಎನ್.ಸಿ.ಶ್ರೀರಾಮಯ್ಯ(10 ಮತ), ಜಿಲ್ಲಾ ಪ್ರತಿನಿಧಿಯಾಗಿ ಆರ್.ಮುನಿಲಕ್ಷ್ಮಮ್ಮ(09 ಮತ) ಪಡೆದು ಆಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಪಿ.ಎನ್.ನಾಗರಾಜ ಮತ್ತು ಖಜಾಂಚಿಯಾಗಿ ಕೆ.ವಿ.ವೆಂಕಟಾಚಲ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿಯಾದ ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಮೋಹನ್ ಎಸ್.ಎಂ. ತಿಳಿಸಿದರು.
ನೂತನ ಅಧ್ಯಕ್ಷ ಪ್ರಭಾಕರರೆಡ್ಡಿ ಮಾತನಾಡಿ, ಕಳೆದ 20 ವರ್ಷಗಳಿಂದ ಕೃಷಿಕ ಸಮಾಜದ ಚುನಾವಣೆ ನಡೆದಿರಲಿಲ್ಲ. ಇಷ್ಟು ದಿನ ಕೃಷಿಕ ಸಮಾಜ ನಿಷ್ಕ್ರಿಯವಾಗಿತ್ತು. ಕೃಷಿಕ ಸಮಾಜ ಎಂಬುವುದು ರೈತರಿಗೆ ತಿಳಿದೇ ಇರಲಿಲ್ಲ. ಮುಂದಿನ ದಿನಗಳಲ್ಲಿ ರೈತರ ಕಷ್ಟ ಮತ್ತು ಸಮಸ್ಯೆಗಳನ್ನು ಅರಿತು, ಹಿರಿಯರ ಮಾರ್ಗದರ್ಶನ ಪಡೆದು ರೈತರ ಸರ್ವತೋಮುಖ ಬೆಳವಣಿಗೆಗೆ ಹಾಗೂ ಅಭಿವೃದ್ಧಿಗೆ ಶ್ರಮಿಸುತ್ತೇನೆ. ನನ್ನ ಆಯ್ಕೆಗೆ ಶ್ರಮಿಸಿದ ಕೆ.ಎಚ್.ಪಿ.ಬಣ, ಬಿಜೆಪಿ, ಜೆಡಿಎಸ್ ನ ಮುಖಂಡರಿಗೆ ಮತ್ತು ಎಲ್ಲಾ ನಿರ್ದೇಶಕರಿಗೆ ಧನ್ಯವಾದಗಳು ತಿಳಿಸುತ್ತೇನೆ ಎಂದು ಹೇಳಿದರು.ಬಿಜೆಪಿ ಮುಖಂಡ ಎನ್.ಎಂ.ರವಿನಾರಾಯಣರೆಡ್ಡಿ ಮಾತನಾಡಿ, ರಾಜಕೀಯಕ್ಕೆ ಬಂದಾಗಿನಿಂದ ನನಗೆ ತಿಳಿದಮಟ್ಟಿಗೆ ತಾಲೂಕಿನ ಕೃಷಿಕ ಸಮಾಜಕ್ಕೆ ಚುನಾವಣೆ ನಡೆಯದೇ ಪದಾಧಿಕಾರಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಈ ಬಾರಿಯೂ ಕೂಡ 15 ನಿರ್ದೇಶಕರನ್ನು ಬಿಜೆಪಿ, ಕೆ.ಎಚ್.ಪಿ., ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ಸೇರಿ ಅವಿರೋಧವಾಗಿ ಆಯ್ಕೆ ಮಾಡಿದ್ದೇವೆ. ಅಧ್ಯಕ್ಷ ಸೇರಿದಂತೆ ಇನ್ನಿತರ ಸ್ಥಾನಗಳ ಚುನಾವಣೆಗೆ ಕೆಲವು ತಲೆ ಹರಟೆಗಳಿಂದ ಹೋಗಬೇಕಾಯಿತು. ಆದರೂ, ಎಲ್ಲರ ಸಹಕಾರದಿಂದ ಚುನಾವಣೆಯಲ್ಲಿ ನಮ್ಮ ಅಭ್ಯ ರ್ಥಿಗಳು ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ರೈತರ ಸಮಗ್ರಅಭಿವೃದ್ಧಿಗೆ ಶ್ರಮಿಸಿ ಮತ್ತು ಸೌಲಭ್ಯ ತಲುಪಿಸಿ:ಕೆ.ಎಚ್.ಪಿ.ಫೌಂಡೇಷನ್ ಕಾರ್ಯನಿರ್ವಾಹಕ ಶ್ರೀನಿವಾಸಗೌಡ ಮೊದಲಿಗೆ ತಾಲೂಕಿನ ಕೃಷಿಕ ಸಮಾಜದ ಎಲ್ಲರಿಗೂ ಅಭಿನಂದನೆ ತಿಳಿಸುತ್ತಾ, ತಾಲೂಕಿನ ಅಭಿವೃದ್ಧಿಗಾಗಿ ನಿರ್ದೇಶಕರು ಶ್ರಮಿಸಬೇಕು, ಕೃಷಿಕ ಸಮಾಜ ರೈತರ ನೆರವಿಗೆ ಬರಬೇಕು. ರೈತರ ಯೋಜನೆಗಳನ್ನು ಸಮರ್ಪಕವಾಗಿ ತಿಳಿಸಿ, ಕೃಷಿ ಚಟುವಟಿಕೆಗಳಿಗೆ ಮತ್ತಷ್ಟು ಉತ್ತೇಜನ ನೀಡಬೇಕು. ರೈತರಿಗೆ ಸಿಗುವ ಸೌಲಭ್ಯಗಳನ್ನು ಸಮರ್ಪಕವಾಗಿ ತಲುಪಿಸುವ ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಚುನಾವಣಾ ವೀಕ್ಷಕರಾಗಿ ಜಿಲ್ಲಾ ಉಪ ಕೃಷಿ ನಿರ್ದೇಶಕಿ ದೀಪಶ್ರೀ ಮತ್ತು ಮುಖಂಡರಾದ ಸಿ.ಆರ್.ನರಸಿಂಹಮೂರ್ತಿ,ತಾರಿದಾಳು ಚಿಕ್ಕಣ್ಣ ಜಯಣ್ಣ,ವೆಂಕಟರಾಮರೆಡ್ಡಿ, ಬೊಮ್ಮಣ್ಣ ಹಾಗೂ ಕೃಷಿಕ ಸಮಾಜದ ನಿರ್ದೇಶಕರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.