ಬಡವರಲ್ಲಿ ಭಗವಂತ ಕಂಡವರು ಸಿಂದಗಿ ಪಟ್ಟಾಧ್ಯಕ್ಷರು

| Published : Apr 07 2024, 01:47 AM IST

ಬಡವರಲ್ಲಿ ಭಗವಂತ ಕಂಡವರು ಸಿಂದಗಿ ಪಟ್ಟಾಧ್ಯಕ್ಷರು
Share this Article
  • FB
  • TW
  • Linkdin
  • Email

ಸಾರಾಂಶ

ಬಾದಾಮಿ: ಮನುಕುಲದ ಒಳತಿಗಾಗಿ ಶ್ರಮಿಸಿದ ಸಿಂದಗಿ ಪಟ್ಟಾಧ್ಯಕ್ಷರು ಯಾವುದೆ ಜಾತಿ - ಮತ - ಪಂಥಕ್ಕೆ ಸೀಮಿತವಾಗಿರದೆ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತ ಬಡವರಲ್ಲಿ ಭಗವಂತನನ್ನು ಕಂಡವರು ಎಂದು ಭೈರನಹಟ್ಟಿ ಹಾಗೂ ಶಿರೋಳ ಮಠದ ಪೂಜ್ಯ ಶಾಂತಲಿಂಗ ಶ್ರೀಗಳು ನುಡಿದರು.

ಕನ್ನಡಪ್ರಭ ವಾರ್ತೆ ಬಾದಾಮಿ

ಮನುಕುಲದ ಒಳತಿಗಾಗಿ ಶ್ರಮಿಸಿದ ಸಿಂದಗಿ ಪಟ್ಟಾಧ್ಯಕ್ಷರು ಯಾವುದೆ ಜಾತಿ - ಮತ - ಪಂಥಕ್ಕೆ ಸೀಮಿತವಾಗಿರದೆ ಭಕ್ತರ ಕಷ್ಟಗಳಿಗೆ ಸ್ಪಂದಿಸುತ್ತ ಬಡವರಲ್ಲಿ ಭಗವಂತನನ್ನು ಕಂಡವರು ಎಂದು ಭೈರನಹಟ್ಟಿ ಹಾಗೂ ಶಿರೋಳ ಮಠದ ಪೂಜ್ಯ ಶಾಂತಲಿಂಗ ಶ್ರೀಗಳು ನುಡಿದರು.

ಭೈರನಹಟ್ಟಿ ಶ್ರೀದೊರೆಸ್ವಾಮಿ ವಿರಕ್ತಮಠದಲ್ಲಿ ಶ್ರೀಗುರು ಬ್ರಹ್ಮಾನಂದ ಶಿವಾನುಭವ ಧರ್ಮಸಂಸ್ಥೆ ಹಾಗೂ ಶ್ರೀದೊರೆಸ್ವಾಮಿ ವಿವಿಧೋದ್ದೇಶ ಟ್ರಸ್ಟ್ ಇವರ ಆಶ್ರಯದಲ್ಲಿ ಹಮ್ಮಿಕೊಂಡಿದ್ದ ಸಿಂದಗಿ ಶಾಂತವೀರ ಪಟ್ಟಾಧ್ಯಕ್ಷರ 44ನೇ ಸ್ಮರಣೋತ್ಸವ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು, ಕನ್ನಡದ ಕುಲಗುರು, ಪುಸ್ತಕದ ಜಗದ್ಗುರು ಡಾ.ತೋಂಟದ ಸಿದ್ಧಲಿಂಗ ಶ್ರೀಗಳನ್ನು ಈ ನಾಡಿಗೆ ಸಮರ್ಪಿಸಿದ ಕೀರ್ತಿ ಪಟ್ಟಾಧ್ಯಕ್ಷರಿಗೆ ಸಲ್ಲುತ್ತದೆ. ಸಿಂದಗಿ ಶ್ರೀಗಳ ಹಾಗೂ ಸಿದ್ಧಲಿಂಗ ಶ್ರೀಗಳು ಗುರು ಶಿಷ್ಯ ಪರಂಪರೆಗೆ ಮಾದರಿಯಾಗಿದ್ದಾರೆ. ನುಡಿದಂತೆ ನಡೆದ ಅವರು ಆಚಾರ ಅನುಭಾವದಿಂದ ಮಾನವ ಬದುಕಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.

ಪ್ರತಿ ಮನೆಯೂ ಮಠವಾಗಬೇಕು, ಪ್ರತಿ ಮಠವೂ ಶಿವಯೋಗವಾಗಬೇಕು ಎನ್ನುವ ನಿಟ್ಟಿನಲ್ಲಿ ಭಕ್ತರಿಗೆ ಶಿವಯೋಗದ ಮಹತ್ವ ತಿಳಿಸಿದರು. ಈ ನಾಡಿನಲ್ಲಿ ಸಂಸ್ಕೃತಿ, ಸಂಸ್ಕಾರವನ್ನು ಬಿತ್ತಿದ ಮಹಿಮಾತೀತರು. ಪಾಠಶಾಲೆಯ ಮೂಲಕ ಯುವ ಜನತೆಗೆ ಸಂಸ್ಕಾರಯುತ ಜೀವನ ಕಲಿಸುತ್ತಿರುವ ಸಿಂದಗಿ ಮಠದ ಸೇವೆ ಅನನ್ಯ ಮತ್ತು ಅನುಕರಣೀಯವಾಗಿದೆ ಎಂದು ಹೇಳಿದರು.

ನಿವೃತ್ತ ಮುಖ್ಯೋಪಾಧ್ಯಾಯ ವೀರಯ್ಯ ಸಾಲಿಮಠ ಮಾತನಾಡಿ, ಭಕ್ತರ ಮನೆಯಂಗಳಕ್ಕೆ ಹೋಗಿ ಅವರ ಕಷ್ಟಗಳನ್ನು ಆಲಿಸಿ ಅವರ ಬದಕನ್ನು ಬಂಗಾರವಾಗಿಸಿದ ಸಿಂದಗಿ ಪಟ್ಟಾಧ್ಯಕ್ಷರ ಸೇವೆ ಅಮೋಘವಾದುದು. ಹಾನಗಲ್ ಕುಮಾರ ಶಿವಯೋಗಿಗಳ ಕರಕಮಲ ಸಂಜಾತರಾದ ಸಿಂದಗಿ ಪಟ್ಟಾಧ್ಯಕ್ಷರು ಈ ನಾಡಿನಲ್ಲಿ ಆಧ್ಯಾತ್ಮಿಕ ಲೋಕದ ದೃವತಾರೆಯಾಗಿ ಮಿಂಚುತ್ತಿದ್ದಾರೆ. ಸ್ವಾಮಿಗಳಾದವರು ಸಮಾಜದ ಹಿತಬಯಸುವುದೇ ಮುಖ್ಯ. ಆಸ್ತಿಗೆ ಸ್ವಾಮಿಗಳಾಗಬಾರದು. ಸ್ವಾಮಿಗಳೇ ಸಮಾಜದ ಆಸ್ತಿಯಾಗಬೇಕು. ಅಂತಹ ಬದುಕನ್ನು ಬದುಕಿದ ಸಿಂದಗಿ ಪಟ್ಟಾಧ್ಯಕ್ಷರ ತತ್ವಾದರ್ಶಗಳು ಸರ್ವಕಾಲಿಕವಾಗಿವೆ ಎಂದು ಹೇಳಿದರು.

ಈ ವೇಳೆ ತೋಂಟದಾರ್ಯ ಶಾಲೆಯ ಮುಖ್ಯಶಿಕ್ಷಕ ಈರಣ್ಣ ಸೋನಾರ, ದಿಲೀಪ್‌ ನದಾಫ್, ದೇವರಾಜ ಜಂಗವಾಡ, ರಮೇಶ ಐನಾಪೂರ, ಪುಟ್ಟರಾಜ ಹಿರೇಮಠ, ದಾವಲಬಿ ನದಾಫ್, ಡಾ.ವಿ. ವಿ ಹಿರೇಮಠ, ಪ್ರೊ.ಪ್ರೇಮಲತಾ ಹಿರೇಮಠ, ಶಿವಲೀಲಾ ವಸ್ತ್ರದ, ಗುರುಬಾಯಿ ಶಾನವಾಡಮಠ, ಪದ್ಮಾವತಿ ಗಾಣಿಗೇರ, ಮಹಾಂತೇಶ ಹಿರೇಮಠ ಪ್ರಮುಖರು ಇದ್ದರು.