ಹೊನಲು ಬೆಳಕಿನ ಸಿಂದಗಿ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಾವಳಿಯನ್ನು ತಾಲೂಕು ಕ್ರೀಡಾಂಗಣದಲ್ಲಿ ಡಿ.6ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಎಸ್‌ಪಿಎಲ್ ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.

ಕನ್ನಡಪ್ರಭ ವಾರ್ತೆ ಸಿಂದಗಿ

ಡಾ.ಬಿ.ಆರ್.ಅಂಬೇಡ್ಕರ್‌ ಮಹಾ ಪರಿನಿರ್ವಾಣದ ನಿಮಿತ್ತ ಅರಿವೇ ಅಂಬೇಡ್ಕರ್‌ ಅಮರ ಅಂಬೇಡ್ಕರ್‌ ಕಾರ್ಯಕ್ರಮದಡಿ ಹೊನಲು ಬೆಳಕಿನ ಸಿಂದಗಿ ಪ್ರೀಮಿಯರ್ ಲೀಗ್‌ ಕ್ರಿಕೆಟ್ ಪಂದ್ಯಾವಳಿಯನ್ನು ತಾಲೂಕು ಕ್ರೀಡಾಂಗಣದಲ್ಲಿ ಡಿ.6ರಂದು ಸಂಜೆ 5 ಗಂಟೆಗೆ ಉದ್ಘಾಟನೆಗೊಳ್ಳಲಿದೆ ಎಂದು ಎಸ್‌ಪಿಎಲ್ ಮುಖ್ಯ ಸಂಯೋಜಕ ರಾಜಶೇಖರ ಕೂಚಬಾಳ ಹೇಳಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಡಿ.6ರಿಂದ ಕ್ರಿಕೆಟ್ ಪಂದ್ಯಾವಳಿ ಪ್ರಾರಂಭವಾಗಿ ಡಿ.23 ರವರೆಗೆ ಅಂತಿಮ ಪಂದ್ಯಾವಳಿ ನಡೆಯಲಿದೆ. ಒಟ್ಟು 9 ತಂಡಗಳು ಈ ಕ್ರೀಡಾಕೂಟದಲ್ಲಿ ಭಾಗವಹಿಸಲಿವೆ. ಜಿಲ್ಲಾ ಪೊಲೀಸ್‌ ತಂಡ ಭಾಗವಹಿಸುತ್ತಿರುವುದು ವಿಶೇಷವಾಗಿದೆ. ಡಿ.6ರಂದು ಸಂಜೆ 4ಕ್ಕೆ ಪಟ್ಟಣದಲ್ಲಿರುವ ಅಂಬೇಡ್ಕರ್ ಪುತ್ಥಳಿಗೆ ಪೂಜೆ ಸಲ್ಲಿಸಿ ವಿವಿಧ ಮಾರ್ಗಗಳಿಂದ ಕ್ರೀಡಾಜ್ಯೋತಿ ಕ್ರೀಡಾಂಗಣಕ್ಕೆಆಗಮಿಸಲಿದೆ. ಅಲ್ಲಿ ವಿವಿಧ ಶಾಲಾ ಮಕ್ಕಳಿಂದ ಜ್ಯೋತಿ ನಮನ ನಂತರ ಕ್ರೀಡಾಕೂಟದ ಉದ್ಘಾಟನೆ ನೆರವೇರಲಿದೆ ಎಂದರು.

ಸಿಂದಗಿ ಬುದ್ಧ ವಿಹಾರದ ಪೂಜ್ಯ ಸಂಘಪಾಲ ಬಂತೇಜಿ, ಹುಬ್ಬಳಿಯ ಧರ್ಮಗುರು ಶ್ರೀ ಮಹ್ಮದಲಿ ಮೌಲಾನಾ ಸಾನ್ನಿಧ್ಯ ವಹಿಸಲಿದ್ದಾರೆ. ಶಾಸಕ ಅಶೋಕ ಮನಗೂಳಿ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕಾಂಗ್ರೆಸ್ ಮುಖಂಡ ರಾಜು ಆಲಗೂರ ಕ್ರೀಡಾ ಬಲೂನ್‌ ಆರೋಹಣ, ಎಸ್‌ಪಿಎಲ್‌ ಅಧ್ಯಕ್ಷ ಶಾಂತವೀರ ಬಿರಾದಾರ ಅಧ್ಯಕ್ಷತೆ ವಹಿಸಲಿದ್ದಾರೆ. ಮಾಜಿ ಶಾಸಕರಾದ ಶರಣಪ್ಪ ಸುಣಗಾರ, ರಮೇಶ ಭೂಸನೂರ, ಮಾಜಿ ಸಚಿವ ರಾಜುಗೌಡ ನಾಯಕ, ಡಾ.ಶಾಂತವೀರ ಮನಗೂಳಿ, ಪ್ರಥಮ ದರ್ಜೆ ಗುತ್ತಿಗೆದಾರ ಮುತ್ತು ಮುಂಡೇವಾಡಗಿ, ಬಿಜೆಪಿ ಮುಖಂಡ ಶ್ರೀಶೈಲಗೌಡ ಬಿರಾದಾರ ಮಾಗಣಗೇರಿ, ಪೊಲೀಸ್‌ ಅಧಿಕಾರಿ ಟಿ.ಎಸ್.ಸುಲ್ಪಿ, ಕಾಂಗ್ರೆಸ್ ಮುಖಂಡ ರಾಕೇಶ ಕಲ್ಲೂರ, ಉದ್ದಿಮೆದಾರ ಅರುಣ ಮಾಚಪ್ಪನವರ ಸೇರಿದಂತೆ ಅನೇಕ ರಾಜಕೀಯ ಮುಖಂಡರು ಭಾಗವಹಿಸಲಿದ್ದಾರೆ.

ಎಸ್‌ಪಿಎಲ್ ಪ್ರೇರಣೆಯಿಂದ ರಾಜ್ಯ ಮಟ್ಟದಲ್ಲಿ ವಿವಿಧ ಕ್ರೀಡೆಗಳಲ್ಲಿ ಗುರುತಿಸಿಕೊಂಡಿರುವ ರಾಜ್ಯ ಕ್ರಿಕೆಟ ಪಟು ಜಯಶ್ರೀ ಕೂಚಬಾಳ, ಕಬಡ್ಡಿ ಆಟಗಾರ ಗಣೇಶ ಆಸಂಗಿಹಾಳ, ಪ್ರಮೋದ ಮಾಣಸುಣಗಿಯನ್ನು ಸನ್ಮಾನಿಸಿ ಗೌರವಿಸಲಾಗುವುದು. ಪ್ರಥಮ ಸ್ಥಾನ ಪಡೆದ ವಿಜೇತ ತಂಡಕ್ಕೆ ಉದ್ದಿಮೆದಾರ ವೆಂಕಟೇಶ ಗುತ್ತೇದಾರರೂ ₹2 ಲಕ್ಷ, ದ್ವಿತೀಯ ಸ್ಥಾನ ಪಡೆದ ತಂಡಕ್ಕೆ ಬಿಜೆಪಿ ಮುಖಂಡ ರವಿ ನಾಯ್ಕೋಡಿ ₹1 ಲಕ್ಷ, ತೃತೀಯ ಸ್ಥಾನ ಪಡೆದ ತಂಡಕ್ಕೆ ಬಿಜೆಪಿ ಮುಖಂಡ ಪೀರುಕೆರೂರ ₹50 ಸಾವಿರ, ನಾಲ್ಕನೇ ಸ್ಥಾನ ಪಡೆದ ತಂಡಕ್ಕೆ ಕಾಂಗ್ರೆಸ್ ಮುಖಂಡ ಇರ್ಫಾನ ಬಾಗವಾನ ₹25 ಸಾವಿರ ಮತ್ತು ಮ್ಯಾನ್‌ ಆಫ್ ಸಿರೀಜ್ ತಂಡಕ್ಕೆ ಹಂಚಿನಾಳ ಜ್ಯೂವಲೇರಿ ಮಾಲೀಕ ವಿನೋದ ಹಂಚಿನಾಳ ₹5 ಗ್ರಾಂ ಚಿನ್ನ ಕೊಡಮಾಡಲಿದ್ದಾರೆ. ಜಿಲ್ಲೆ ಸೇರಿದಂತೆ ಸಿಂದಗಿ ತಾಲೂಕಿನ ಜನತೆ ಈ ಕ್ರೀಡಾಕೂಟಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕು ಎಂದು ಕೋರಿದರು.

ದಲಿತ ಸೇನೆ ರಾಜ್ಯಾಧ್ಯಕ್ಷ ಬನಶಂಕರಿ ನಾಗಣ್ಣಗೆ ಗೌರವಿಸಲಾಯಿತು. ತಂಡಗಳಿಗೆ ವಿತರಿಸುವ ಟಿಶರ್ಟ್‌ ಬಿಡುಗಡೆಗೊಳಿಸಲಾಯಿತು. ಪತ್ರಿಕಾ ಗೋಷ್ಠಿಯಲ್ಲಿ ಎಸ್‌ಪಿಎಲ್‌ ಅಧ್ಯಕ್ಷ ಶಾಂತವೀರ ಬಿರಾದಾರ, ರವಿ ಹೊಳಿ, ಪರುಶುರಾಮ ಕೂಚಬಾಳ, ದತ್ತು ನಾಲ್ಕಮಾನ, ಶ್ರೀಶೈಲ ಜಾಲವಾದಿ, ರಾಕೇಶ ಕಾಂಬಳೆ, ಜಿಲಾನಿ ನಾಟಿಕಾರ, ಅಶೋಕ ಕಾಂಬಳೆ, ಮಲ್ಲು ಕೂಚಬಾಳ, ಶಿವಾನಂದ ಆಲಮೇಲ, ಶಮ್ಮಾ ಮಂದ್ರೂಪ, ಸಂತೋಷ ಜಾಧವ ಸೇರಿದಂತೆ ಇತರರು ಇದ್ದರು.