ಮಂಗಳೂರಲ್ಲಿ ಸಿಂದೂರ ವಿಜಯೋತ್ಸವ ಯಾತ್ರೆ

| Published : May 20 2025, 11:58 PM IST

ಸಾರಾಂಶ

ಆಪರೇಶನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಸಿಂದೂರ ವಿಜಯೋತ್ಸವ ಸಮಿತಿ ವತಿಯಿಂದ ಮಂಗಳವಾರ ಸಿಂದೂರ ವಿಜಯೋತ್ಸವ ಯಾತ್ರೆ ನಡೆಯಿತು. ನಗರದ ಪಿವಿಎಸ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ನಡೆದ ಯಾತ್ರೆಯಲ್ಲಿ ನೂರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಪಾಲ್ಗೊಂಡಿದ್ದರು.

ಕನ್ನಡಪ್ರಭ ವಾರ್ತೆ ಮಂಗಳೂರು

ಇತ್ತೀಚೆಗೆ ನಡೆದ ಆಪರೇಶನ್ ಸಿಂದೂರ ಯಶಸ್ಸಿನ ಹಿನ್ನೆಲೆಯಲ್ಲಿ ಸಿಂದೂರ ವಿಜಯೋತ್ಸವ ಸಮಿತಿ ವತಿಯಿಂದ ಮಂಗಳವಾರ ಸಿಂದೂರ ವಿಜಯೋತ್ಸವ ಯಾತ್ರೆ ನಡೆಯಿತು.

ನಗರದ ಪಿವಿಎಸ್ ವೃತ್ತದಿಂದ ಮಹಾನಗರ ಪಾಲಿಕೆ ಕಚೇರಿವರೆಗೆ ನಡೆದ ಯಾತ್ರೆಯಲ್ಲಿ ನೂರಾರು ಮಂದಿ ತ್ರಿವರ್ಣ ಧ್ವಜ ಹಿಡಿದು ಪಾಲ್ಗೊಂಡಿದ್ದರು. ಭಾರತ ಮಾತೆ, ಭಾರತೀಯ ಸೇನೆಗೆ ಘೋಷಣೆ ಕೂಗುತ್ತಾ ಸಾಗಿದರು.

ನಗರದ ಲಾಲ್ ಭಾಗ್ ವೃತ್ತದ ಬಳಿ ನಡೆದ ಸಭಾ ಕಾರ್ಯಕ್ರಮದಲ್ಲಿ ಮಾತನಾಡಿದ ನೌಕಾದಳದ ನಿವೃತ್ತ ಅಧಿಕಾರಿ ಸುಧೀರ್ ಪೈ, ಭಾರತೀಯ ಸೇನೆಯ ಬಲಾಢ್ಯ ತಾಂತ್ರಿಕತೆ ಹಾಗೂ ತಂತ್ರಗಾರಿಕೆಯಿಂದ ಆಪರೇಷನ್ ಸಿಂದೂರ ಗೆಲುವು ಸಾಧ್ಯವಾಗಿದೆ. ನಮ್ಮ ಸೇನಾ ಕಾರ್ಯಾಚರಣೆ ಅತ್ಯಂತ ಹೆಮ್ಮೆ ತಂದಿದೆ ಎಂದು ಹೇಳಿದರು.ನಮ್ಮ ದೇಶದ ಹೊರಗಡೆಯ ಶತ್ರುಗಳಿಗಿಂತ ದೇಶದೊಳಗಿನ ಶತ್ರುಗಳು ಅಪಾಯಕಾರಿಯಾಗಿದ್ದು, ಈ ಬಗ್ಗೆ ಎಚ್ಚರ ವಹಿಸಬೇಕಿದೆ ಎಂದರು.

ಸಾಮಾಜಿಕ ಕಾರ್ಯಕರ್ತೆ ರಶ್ಮಿ ಸಾಮಂತ್ ಮಾತನಾಡಿ, ಉಗ್ರರು ಭಾಷೆ, ಜಾತಿ ಕೇಳದೆ ಧರ್ಮದ ಆಧಾರದಲ್ಲಿ ಕೊಲೆ ಮಾಡಿದರು. ನಾವೆಲ್ಲ ನಮ್ಮೊಳಗಿನ ಆಂತರಿಕ ಕಚ್ಚಾಟವನ್ನು ಬಿಟ್ಟು ಸನಾತನ ಧರ್ಮಕ್ಕಾಗಿ ಒಂದಾಗುವ ಕಾಲ ಬಂದಿದೆ. ನಮ್ಮ ದೇಶದಲ್ಲಿ ಅದೆಷ್ಟೋ ಲೋಹಿಂಗ್ಯಾ, ಪಾಕಿಸ್ತಾನಿಯರು, ಬಾಂಗ್ಲಾದವರಿದ್ದು ಇದನ್ನು ಗಂಭೀರವಾಗಿ ಪರಿಗಣಿಸಬೇಕಿದೆ. ಇಂತಹವರನ್ನು ದೇಶದಿಂದ ಹೊರಗಟ್ಟಬೇಕಾದರೆ ಸಿಎಎ- ಎನ್‌ಆರ್‌ಸಿ ಪರವಾಗಿ ಬೆಂಬಲ ಸೂಚಿಸಬೇಕಾಗಿದೆ ಎಂದರು.

ಕಾರ್ಯಕ್ರಮ ಸಂಚಾಲಕ ಕೇಶವ ನಂದೋಡಿ ಅಧ್ಯಕ್ಷತೆ ವಹಿಸಿದ್ದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಶ್ರೀ ಗುರುದೇವಾನಂದ ಸ್ವಾಮೀಜಿ, ಗುರುಪುರ ವಜ್ರದೇಹಿ ಮಠದ ಶ್ರೀ ರಾಜಶೇಖರನಾನಂದ ಸ್ವಾಮೀಜಿ, ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ, ಶಂಕರಪುರದ ಶ್ರೀ ಸಾಯಿ ಈಶ್ವರ್ ಗುರೂಜಿ, ಮಂಗಳೂರಿನ ಓಂ ಶ್ರೀ ಮಠದ ವಿದ್ಯಾನಂದ ಸರಸ್ವತಿ ಸ್ವಾಮೀಜಿ, ಮಾತಾಜಿ ಶಿವಜ್ಞಾನಮಹಿ ಸರಸ್ವತಿ, ಆರೆಸ್ಸೆಸ್‌ ಮುಖಂಡ ಡಾ. ಕಲ್ಲಡ್ಕ ಪ್ರಭಾಕರ ಭಟ್, ಕಮಲಾ ಪ್ರಭಾಕರ ಭಟ್, ವಿಶ್ವಹಿಂದು ಪರಿಷತ್ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ. ಪುರಾಣಿಕ್, ವಿಹಿಂಪ ಜಿಲ್ಲಾಧ್ಯಕ್ಷ ಎಚ್.ಕೆ. ಪುರುಷೋತ್ತಮ, ಶಾಸಕರಾದ ಡಿ. ವೇದವ್ಯಾಸ ಕಾಮತ್, ಡಾ. ವೈ. ಭರತ್ ಶೆಟ್ಟಿ, ಉಮಾನಾಥ ಕೋಟ್ಯಾನ್, ರಾಜೇಶ್ ನಾಯ್ಕ್, ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಪುತ್ತೂರು, ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ್ ಕಾರ್ಣಿಕ್, ಮಾಜಿ ಶಾಸಕ ಸಂಜೀವ ಮಠಂದೂರು, ಪ್ರಮುಖರಾದ ಗೋಪಾಲ ಕುತ್ತಾರ್, ಭರತ್ ಕುಮ್ಡೇಲು, ಸೂರಜ್ ಕುಮಾರ್ ಮತ್ತಿತರರು ಇದ್ದರು.