ಕಳೆದ 58 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸು ತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ಪ್ರತಿಭಟಿಸಿದರು.

ಅರಣ್ಯ ಇಲಾಖೆ, ಕಂದಾಯ ಇಲಾಖೆ ಅಧಿಕಾರಿಗಳ ಕಿರುಕುಳ । ಕಚೇರಿ ಮುಂಭಾಗ ಸಂತ್ರಸ್ಥರ ಧರಣಿ, ಆಕ್ರೋಶ

ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ

ಸಿಂಗಾಡಿ ಕದಿರೇನಹಳ್ಳಿ 14 ದಲಿತ ಕುಟುಂಬಗಳ ಸಾಗುವಳಿ ಭೂಮಿಗೆ ಸಂಬಂಧಿಸಿದಂತೆ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ಕಿರುಕುಳ ಖಂಡಿಸಿ ಜಿಲ್ಲಾ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ನಡೆಯುತ್ತಿರುವ ಹೋರಾಟವು 58 ದಿನ ಪೂರೈಸಿದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಬಾಗಿಲಿಗೆ ಅಡ್ಡಕುಳಿತ ಸಂತ್ರಸ್ಥರು, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಕಳೆದ 58 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸು ತ್ತಿರುವ ಅನಿರ್ಧಿಷ್ಠಾವಧಿ ಹೋರಾಟವು ಯಾವುದೇ ಫಲ ನೀಡದ ಹಿನ್ನೆಲೆಯಲ್ಲಿ ಅಧಿಕಾರಿಗಳು ಕಚೇರಿಗೆ ತೆರಳದಂತೆ ಬಾಗಿಲಿಗೆ ಅಡ್ಡಕುಳಿತು ಪ್ರತಿಭಟಿಸಿದರು.

ದಸಂಸ ಹಿರಿಯ ಮುಖಂಡ ಕೆ.ಸಿ.ರಾಜಾಕಾಂತ್ ಮಾತನಾಡಿ , ಚಿಕ್ಕಬಳ್ಳಾಪುರದ ಆಗಿನ ತಹಸೀಲ್ದಾರ್ ರವರು 1972-73 ರಲ್ಲಿ ತಾಲೂಕಿನ ಸಿಂಗಾಟಕದಿರೇನಹಳ್ಳಿ ಹಳೇ ಸರ್ವೆ ನಂಬರ್-67 ಹೊಸ ನಂಬರ್ 81, 82, 83, 84, 85, 86 ಮತ್ತು ಹಳೇ ನಂ 67ರ ಪೈಕಿ ಬಡ ದಲಿತರಿಗೆ ಸಾಗುವಳಿ ಚೀಟಿ ಪಹಣಿ ನೀಡಿ ದುರಸ್ತಿ ಸಹ ಆಗಿರುತ್ತದೆ. ಅಂದಿನಿಂದಲೂ ಈಗಿನವರೆಗೆ ಉಳುಮೆ ಮಾಡುತ್ತಾ ದಲಿತರು ಬಂದಿರುತ್ತಾರೆ. ಇತ್ತೀಚಿಗೆ ಈ ಭೂಮಿಗೂ ಸಂಬಂಧವೇ ಇಲ್ಲದೆ ಇರುವ ಅರಣ್ಯ ಇಲಾಖೆಯವರು ಬಡ ದಲಿತರ ಮೇಲೆ ದೌರ್ಜನ್ಯ ಮಾಡಿ ಉಳುಮೆ ಮಾಡಲು ಹೋದ ಬಡವರ ಮೇಲೆ ತೊಂದರೆ ನೀಡಿ ಭಯದ ವಾತಾವರಣ ನಿರ್ಮಾಣ ಮಾಡುತ್ತಿದ್ದಾರೆ.

ಬಡ ದಲಿತರ ಪರವಾಗಿ ನಿಲ್ಲಬೇಕಾದ ಚಿಕ್ಕಬಳ್ಳಾಪುರದ ಇಂದಿನ ತಹಸೀಲ್ದಾರ್ ರವರು ಉಳ್ಳವರ ಪರವಾಗಿ ಕೆಲಸ ಮಾಡುತ್ತಿದ್ದಾರೆ. ಇವರ ಭೂಮಿ ಹಕ್ಕಿಗಾಗಿ ಹಾಗೂ ಬಡ ದಲಿತರಿಗೆ ತೊಂದರೆ ನೀಡುತ್ತಿರುವ ಕಂದಾಯ ಹಾಗೂ ಅರಣ್ಯ ಅಧಿಕಾರಿಗಳ ಮೇಲೆ ಪರಿಶಿಷ್ಟ ಜಾತಿ, ಪರಿಶಿಷ್ಠ ವರ್ಗಗಳ ಕಾಯ್ದೆ ಮೂಲಕ ಕಾನೂನು ಕ್ರಮ ಜರುಗಿಸಲು ನಿರ್ಲಕ್ಷ್ಯ ಮತ್ತು ತಟಸ್ಥ ಧೋರಣೆ ಅನುಸರಿಸುತ್ತಿರುವ ಅಧಿಕಾರಿಗಳ ವಿರುದ್ಧ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ (ಆಟ್ರಾಸಿಟಿ) ಕಾಯ್ದೆಯಡಿ ಪ್ರಕರಣ ದಾಖಲಿಸುವಂತೆ ಆಗ್ರಹಿಸಿ ಜಿಲ್ಲಾ ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯಕ್ಕೆ ದೂರು ನೀಡಿದ್ದರೂ ಕ್ರಮವಾಗಿಲ್ಲ. ಅದೇ ರೀತಿ ಉಪ ಮುಖ್ಯ ಮಂತ್ರಿ ಡಾ.ಜಿ.ಪರಮೇಶ್ವರ್ ಮತ್ತು ಮಾಜಿ ಸಚಿವರ ಗಮನಕ್ಕೆ ಸಮಸ್ಯೆ ತಂದಿದ್ದರೂ ಸಹಾ ಇದುವರೆಗೂ ಪರಿಹಾರ ಸಿಕ್ಕಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ವೇಳೆ ದಸಂಸ ತಾಲೂಕು ಸಂಚಾಲಕ ಪರಮೇಶ್ ಮಾತನಾಡಿ, ತಾಲೂಕಿನ ನಂದಿ ಹೋಬಳಿಯ ಸಿಂಗಾಡಿ–ಕದಿರೇನಹಳ್ಳಿ ಭೂ ವಿವಾದಕ್ಕೆ ಕಾರಣವಾಗಿರುವ ಅರಣ್ಯ ಇಲಾಖೆಯೇ ಈ ಸಮಸ್ಯೆಯನ್ನು ಶೀಘ್ರ ಬಗೆಹರಿಸಬೇಕು. 1972ರಲ್ಲಿ ಕಂದಾಯ ಇಲಾಖೆಯೇ ಕೊಟ್ಟಿರುವ ದಾಖಲಾತಿಗಳನ್ನು ಇಟ್ಟುಕೊಂಡು ರೈತರು ಸಾಗುವಳಿ ಮಾಡುತ್ತಿದ್ದರೂ ದುರುದ್ದೇಶದಿಂದ ಡೀಮ್ಡ್ ಫಾರೆಸ್ಟ್ ಹೆಸರಿನಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ತೊಂದರೆ ನೀಡುತ್ತಿರುವುದು ಸರಿಯಲ್ಲ.

ಈ ವಿಚಾರದಲ್ಲಿ ಅರಣ್ಯ ಇಲಾಖೆ ಮತ್ತು ಕಂದಾಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಹಾಗೂ ತಟಸ್ಥ ಧೋರಣೆ ಸರಿಯಲ್ಲ, ನಿಯಮಗಳಿರು ವುದು ನಾಗರೀಕರಿಗೆ ಸಹಾಯ ಮಾಡುವುದಕ್ಕಾಗಿಯೇ ಹೊರತು ತೊಂದರೆ ಕೊಡುವುದಕ್ಕಲ್ಲ. ಸಂವಿಧಾನದ ನಿಯಮಗಳನ್ನು ಗಾಳಿಗೆ ತೂರಿ ಅಮಾಯಕ ದಲಿತರಿಗೆ ಅನ್ಯಾಯ ಮಾಡುವುದು ಸರಿಯಲ್ಲ ಎಂದು ದೂರಿದರು.

ಸಿಂಗಾಡಿ–ಕದರೆನಹಳ್ಳಿ ಗ್ರಾಮದ ದಲಿತ ಕುಟುಂಬಗಳ ಭೂ ಸಮಸ್ಯೆ ಐವತ್ತು ದಿನಗಳು ಪೂರೈಸು ತ್ತಿದ್ದರೂ ಜಿಲ್ಲಾಧಿಕಾರಿಗಳಾಗಲಿ, ಕಂದಾಯ ಅರಣ್ಯ ಇಲಾಖೆ ಅಧಿಕಾರಿಗಳಾಗಲಿ ಸಮಸ್ಯೆ ಪರಿಹಾರ ಮಾಡುವುದಕ್ಕಿಂತ ಅದು ಇನ್ನಷ್ಟು ಬಿಗಡಾಯಿಸುವಂತೆ ಮಾಡುತ್ತಿರುವುದು ಸರಿಯಲ್ಲ ಎಂದರು.

ಪ್ರತಿಭಟನೆಯಲ್ಲಿ ಸಿಂಗಾಡಿ ಕದಿರೇನಹಳ್ಳಿ ಸಂತ್ರಸ್ಥ ದಲಿತರು, ದಸಂಸ ತಾಲೂಕು ಸಂಚಾಲಕ ಪರಮೇಶ್, ಜಿಲ್ಲಾ ಸಂಘಟನಾ ಸಂಚಾಲಕ ಎನ್. ವೆಂಕಟೇಶ್, ಕಲಾಮಂಡಳಿ ಜಿಲ್ಲಾ ಸಂಚಾಲಕ ಇಸ್ಕೂಲಪ್ಪ ಸೇರಿದಂತೆ ನೂರಾರು ಕಾರ್ಯಕರ್ತರು, ಸಿಂಗಾಡಿ ಕದಿರೇನಹಳ್ಳಿಯ ನೊಂದ ರೈತ ಕುಟುಂಭಗಳ ಸದಸ್ಯರು ಇದ್ದರು.

ಸಿಕೆಬಿ-1 ನಗರ ಹೊರವಲಯದ ಸೂಲಾಲಪ್ಪನ ದಿನ್ನೆಯ ಬಳಿಯಿರುವ ಜಿಲ್ಲಾ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಕಚೇರಿ ಎದುರು ಕಳೆದ 58 ದಿನಗಳಿಂದ ದಲಿತ ಸಂಘರ್ಷ ಸಮಿತಿ ನೇತೃತ್ವದಲ್ಲಿ ನಡೆಸು ತ್ತಿರುವ ಅನಿರ್ಧಿಷ್ಠಾವಧಿ ಪ್ರತಿಭಟನೆ