ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲವನ್ನು ಸಿಂಗಾಪುರ ಸರ್ಕಾರದ ವಿಶ್ವದ ಶ್ರೇಷ್ಠ ವೈದ್ಯ ವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಮಾನ್ಯತೆಯು ಫೆ.1ರಿಂದ ಜಾರಿಗೆ ಬರುತ್ತದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಘೋಷಿಸಿದೆ.
ಮಣಿಪಾಲ: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಇದರ ಅಂಗಸಂಸ್ಥೆ ಕಸ್ತೂರ್ಬಾ ಮೆಡಿಕಲ್ ಕಾಲೇಜು ಮಣಿಪಾಲವನ್ನು ಸಿಂಗಾಪುರ ಸರ್ಕಾರದ ವಿಶ್ವದ ಶ್ರೇಷ್ಠ ವೈದ್ಯ ವಿದ್ಯಾಲಯಗಳ ಪಟ್ಟಿಯಲ್ಲಿ ಸೇರಿಸಿದೆ. ಈ ಮಾನ್ಯತೆಯು ಫೆ.1ರಿಂದ ಜಾರಿಗೆ ಬರುತ್ತದೆ ಎಂದು ಸಿಂಗಾಪುರ ಆರೋಗ್ಯ ಸಚಿವಾಲಯ ಘೋಷಿಸಿದೆ.
ಈ ಮಾನ್ಯತೆಯೊಂದಿಗೆ ಮಣಿಪಾಲ ಕೆಎಂಸಿಯು ಆಸ್ಟ್ರೇಲಿಯಾ, ಯುಕೆ, ಚೀನಾ, ಅಮೆರಿಕಗಳಂತಹ ದೇಶಗಳ ೧೨೦ ವಿಶ್ವ ಪ್ರಸಿದ್ಧ ವೈದ್ಯಕೀಯ ಕಾಲೇಜುಗಳ ಪಟ್ಟಿಯಲ್ಲಿ ಸ್ಥಾನ ಪಡೆದಿದೆ. ಸಿಂಗಾಪುರ ಮೆಡಿಕಲ್ ಕೌನ್ಸಿಲ್ ಕಾಲಕಾಲಕ್ಕೆ ವಿದೇಶಿ ವೈದ್ಯಕೀಯ ಕಾಲೇಜುಗಳ ಶೈಕ್ಷಣಿಕ ಗುಣಮಟ್ಟ, ಬೋಧನಾ ಭಾಷೆ, ಕ್ಲಿನಿಕಲ್ ಅನುಭವ ಹಾಗೂ ಪದವೀಧರರ ವೃತ್ತಿಪರ ಕಾರ್ಯಕ್ಷಮತೆ ಮೊದಲಾದ ಅಂಶಗಳನ್ನು ಪರಿಗಣಿಸಿ ಈ ಪಟ್ಟಿ ಸಿದ್ದಪಡಿಸುತ್ತದೆ.ಸಿಂಗಾಪುರದಲ್ಲಿ ವೈದ್ಯಕೀಯ ವೃತ್ತಿ ನಡೆಸಲು ಅರ್ಜಿ ಸಲ್ಲಿಸುವ ಬೇರೆ ದೇಶಗಳಲ್ಲಿ ಶಿಕ್ಷಣ ಪಡೆದ ವೈದ್ಯರು, ಸಿಂಗಪೂರಕ್ಕೆ ಸರಿದೂಗುವ ಸೂಕ್ತ ಗುಣಮಟ್ಟದ ಶಿಕ್ಷಣ ಹಾಗೂ ಉತ್ಕೃಷ್ಟ ತರಬೇತಿ ಪಡೆದಿರಬೇಕು, ಅದನ್ನು ಖಚಿತಪಡಿಸುವ ಉದ್ದೇಶದಿಂದ ತನ್ನ ನೋಂದಾಯಿತ ವೈದ್ಯಕೀಯ ಅರ್ಹತೆಗಳ ಪಟ್ಟಿಯನ್ನು ನಿಯಮಿತವಾಗಿ ಪರಿಶೀಲಿಸುತ್ತದೆ.
ಈ ಗೌರವವನ್ನು ಸ್ವಾಗತಿಸಿದ ಮಾಹೆ ಸಹ ಕುಲಾಧಿಪತಿ ಡಾ. ಎಚ್.ಎಸ್. ಬಲ್ಲಾಳ್ ಅವರು, ಕೆಎಂಸಿ ಮಣಿಪಾಲಕ್ಕೆ ಸಿಂಗಾಪುರ ಸರ್ಕಾರದ ಮಾನ್ಯತೆ ದೊರೆತಿರುವುದು ನಮ್ಮ ಗುಣಮಟ್ಟದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ ಹಾಗೂ ನಮ್ಮ ಸಂಸ್ಥಾಪಕರಾದ ಡಾ. ಟಿ.ಎಂ.ಎ. ಪೈ ಅವರ ದೂರದೃಷ್ಟಿಯ ಪರಂಪರೆಯನ್ನು ಗೌರವಿಸುತ್ತದೆ. ಅವರ ಆದರ್ಶಗಳು ಇಂದಿಗೂ ನಮ್ಮನ್ನು ಮಾರ್ಗದರ್ಶನ ಮಾಡುತ್ತಿವೆ ಎಂದು ಹೇಳಿದ್ದಾರೆ.ಉಪಕುಲಪತಿ ಲೆ.ಜ. (ಡಾ.) ಎಂ.ಡಿ. ವೆಂಕಟೇಶ್, ‘ಕೆಎಂಸಿ ಮಣಿಪಾಲದ ಶೈಕ್ಷಣಿಕ ಶಿಸ್ತು, ಕಟ್ಟುನಿಟ್ಟಿನ ನಿಗಾ, ಆಳವಾದ ಕ್ಲಿನಿಕಲ್ ತರಬೇತಿ ಹಾಗೂ ಜಾಗತಿಕ ಪ್ರಸ್ತುತತೆಯನ್ನು ಈ ಗೌರವ ಬಲವಾಗಿ ದೃಢಪಡಿಸುತ್ತದೆ. ಈ ಮಾನ್ಯತೆಯು ಸಂಸ್ಥೆಯ ಪದವೀಧರರಿಗೆ ಜಾಗತಿಕ ಅವಕಾಶಗಳ ಹೊಸ ದಾರಿಗಳನ್ನು ತೆರೆಯುತ್ತದೆ’ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.ಮಾಹೆ ಆರೋಗ್ಯ ವಿಜ್ಞಾನಗಳ ಸಹ ಉಪಕುಲಪತಿ ಡಾ. ಶರತ್ ರಾವ್, ‘ಸಿಂಗಾಪುರ ಮೆಡಿಕಲ್ ಕೌನ್ಸಿಲ್‌ನಿಂದ ಹೊಸದಾಗಿ ಮಾನ್ಯತೆ ಪಡೆದ ಸಂಸ್ಥೆಗಳ ಪೈಕಿ ಭಾರತದ ಏಕೈಕ ವೈದ್ಯಕೀಯ ಕಾಲೇಜಾಗಿ ಕೆಎಂಸಿ ಮಣಿಪಾಲ ಸ್ಥಾನ ಪಡೆದಿರುವುದು, ಜಾಗತಿಕ ಮಟ್ಟದಲ್ಲಿ ವಿಶ್ವಾಸಾರ್ಹ ಸಂಸ್ಥೆಯಾಗಿ ಕೆಎಂಸಿ ಮಣಿಪಾಲದ ಸ್ಥಾನವನ್ನು ಇದು ಮತ್ತಷ್ಟು ಬಲಪಡಿಸುತ್ತದೆ’ ಎಂದು ಹೇಳಿದ್ದಾರೆ.