ಮಾ. 23ರಂದು ಸಾಯಂಕಾಲ 5 ಗಂಟೆಗೆ ವೀರಭದ್ರೇಶ್ವರ ಮಹಾರಥೋತ್ಸವ ಜರುಗಲಿದೆ. ನಂತರ 7 ಗಂಟೆಗೆ ಧರ್ಮಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಮುಂಡರಗಿ: ತಾಲೂಕಿನ ಸುಕ್ಷೇತ್ರ ಸಿಂಗಟಾಲೂರು ವೀರಭದ್ರಶ್ವರ ಜಾತ್ರಾ ಮಹೋತ್ಸವ ಮಾ. 23ರಿಂದ 25ರವರೆಗೆ ಮೂರು ದಿನಗಳ ಕಾಲ ಅದ್ಧೂರಿಯಾಗಿ ಜರುಗಲಿದೆ ಎಂದು ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ತಿಳಿಸಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಮಾ. 23ರಂದು ಸಾಯಂಕಾಲ 5 ಗಂಟೆಗೆ ವೀರಭದ್ರೇಶ್ವರ ಮಹಾರಥೋತ್ಸವ ಜರುಗಲಿದೆ. ನಂತರ 7 ಗಂಟೆಗೆ ಧರ್ಮಸಭೆ ಹಾಗೂ ದಾನಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ. ಕಲಕೇರಿ ವಿರುಪಾಪುರದ ಮುದುಕೇಶ್ವರ ಶಿವಾಚಾರ್ಯ ಸ್ವಾಮೀಜಿ, ಬನ್ನಿಕೊಪ್ಪದ ಡಾ. ಸುಜ್ಞಾನದೇವ ಶಿವಾಚಾರ್ಯ ಸ್ವಾಮೀಜಿ, ಸೋಗಿಯ ಅಭಿನವ ಸಿದ್ದವೀರ ಶಿವಾಚಾರ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸುವರು. ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷ ಕರಬಸಪ್ಪ ಹಂಚಿನಾಳ ಅಧ್ಯಕ್ಷತೆ ವಹಿಸಲಿದ್ದಾರೆ.

ಮುಖ್ಯ ಅತಿಥಿಗಳಾಗಿ ಶಾಸಕ ಡಾ. ಚಂದ್ರು ಲಮಾಣಿ, ತಾಲೂಕು ಕಸಾಪ ಅಧ್ಯಕ್ಷ ಎಂ.ಜಿ. ಗಚ್ಚಣ್ಣವರ ಆಗಮಿಸಲಿದ್ದಾರೆ. ರಾಷ್ಟ್ರಪ್ರಶಸ್ತಿ ಪುರಸ್ಕೃತ ಶಿಕ್ಷಕ ಸಾಹಿತಿ ಡಾ. ನಿಂಗು ಸೊಲಗಿ ಉಪನ್ಯಾಸ ನೀಡುವರು. ಉತ್ತಂಗಿಯ ಸಂಗೀತಾ ಅಬ್ಬಿಗೇರಿಮಠ ಅವರಿಂದ ಸಂಗೀತ ಕಾರ್ಯಕ್ರಮ ಜರುಗಲಿದೆ.

ದೇವರ ಹುಬ್ಬಳ್ಳಿಯ ಮಿಮಿಕ್ರಿ ಕಲಾವಿದ ಮೊಬೈಲ್ ಮಲ್ಲ ಖ್ಯಾತಿಯ ಮಲ್ಲಪ್ಪ ಹೊಂಗಲ್ ಹಾಗೂ ಯಮನೂರಿನ ಹಾಸ್ಯ ಕಲಾವಿದ ಶರಣು ಯಮನೂರ ಅವರಿಂದ ಹಾಸ್ಯೋತ್ಸವ ಮತ್ತು ಇಂಗಳಗಿಯ ಪ್ರಶಾಂತಕುಮಾರ ತಡಸದ ಅವರಿಂದ ಜನಪದ ಕಾರ್ಯಕ್ರಮ ಜರುಗಲಿವೆ.

ನಾನು ವೀರಭದ್ರೇಶ್ವರ ದೇವಸ್ಥಾನ ಟ್ರಸ್ಟ್ ಕಮಿಟಿ ಅಧ್ಯಕ್ಷನಾದ ಮೇಲೆ ಕಮಿಟಿಯ ಎಲ್ಲ ಸದಸ್ಯರ ಹಾಗೂ ದೇವಸ್ಥಾನದ ಭಕ್ತರ ಸಹಕಾರ ಹಾಗೂ ಸಲಹೆ, ಸೂಚನೆ ಮೇರೆಗೆ ದೇವಸ್ಥಾನವನ್ನು ಸಂಪೂರ್ಣವಾಗಿ ಕಲ್ಲಿನಿಂದ ನಿರ್ಮಾಣ ಮಾಡಲಾಗಿದೆ. ಜತೆಗೆ ಆವರಣದಲ್ಲಿರುವ ಭದ್ರಕಾಳಮ್ಮ ಹಾಗೂ ಈಶ್ವರ ದೇವಸ್ಥಾನವನ್ನು ಸಹ ನಿರ್ಮಿಸಲಾಗಿದೆ. ದೇವಸ್ಥಾನಕ್ಕೆ ಬರುವ ಭಕ್ತರಿಗೆ ವಸತಿ ವ್ಯವಸ್ಥೆಗಾಗಿ ಸುಸಜ್ಜಿತವಾದ ಸುಮಾರು 60ಕ್ಕೂ ವಸತಿ ಕೊಠಡಿಗಳನ್ನು ನಿರ್ಮಿಸಲಾಗಿದೆ.

ಅಲ್ಲದೆ ಗೊಟಗೋಡಿ ರಾಕ್ ಗಾರ್ಡನ್ ಮಾದರಿಯಲ್ಲಿ ವೀರಭದ್ರೇಶ್ವರ ಸ್ವಾಮಿ ಉದ್ಯಾನವನ ನಿರ್ಮಿಸಲಾಗಿದೆ. ಅಲ್ಲಿ ವೀರಭದ್ರೇಶ್ವರ ದೇವರ ಸಂಪೂರ್ಣ ಇತಿಹಾಸ ಹಾಗೂ ಹಿಂದಿನ ಕಾಲದ ವ್ಯಾಪಾರ ವಹಿವಾಟುಗಳನ್ನು ಚಿತ್ರಿಸಿ ಮುಂದಿನ ಪೀಳಿಗೆಗೆ ದೇವರ ಇತಿಹಾಸ ತಿಳಿಸಿ ಕೊಡುವ ಕಾರ್ಯ ಮಾಡಲಾಗಿದೆ ಎಂದರು.

ಪರಿಸರ ಕಾಳಜಿ ವಹಿಸುವ ಮೂಲಕ ದೇವಸ್ಥಾನದ ಆವರಣ ಹಾಗೂ ಸುತ್ತಮುತ್ತ ಮತ್ತು ದೇವಸ್ಥಾನದ ಮುಂದೆ ಇರುವ ಉದ್ಯಾನವನದಲ್ಲಿ ಸಾವಿರಾರು ಸಸಿಗಳನ್ನು ನೆಟ್ಟು ಬೆಳೆಸಲಾಗಿದೆ. ದೇವಸ್ಥಾನದ ಸಮೀಪದಲ್ಲಿದ್ದ ಪುರಾತನ ನಾಗದೇವಸ್ಥಾನವನ್ನು ಬಳ್ಳಾರಿ ಡಾ. ಶಿದ್ದಲಿಂಗಪ್ಪ ಕರ್ಜಗಿ ಜೀರ್ಣೋದ್ಧಾರ ಮಾಡಿಸಿದ್ದಾರೆ. ಅಲ್ಲದೇ ದೇವಸ್ಥಾನ ಆವರಣದಲ್ಲಿ ವಿಘ್ನನಾಶಕ ಗಣೇಶನ ದೇವಸ್ಥಾನವನ್ನೂ ನಿರ್ಮಾಣ ಮಾಡಲಾಗಿದೆ.

ಸುಮಾರು ₹5 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವೀರಭದ್ರೇಶ್ವರ ಕಲ್ಯಾಣಮಂಟಪ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದ್ದು, ಮುಕ್ತಾಯದ ಹಂತದಲ್ಲಿದೆ. ಅದಕ್ಕೆ ಪ್ರವಾಸೋಧ್ಯಮ ಇಲಾಖೆಯಿಂದ ಸಚಿವ ಎಚ್.ಕೆ. ಪಾಟೀಲ ಅವರು ₹1 ಕೋಟಿ ಅನುದಾನ ನೀಡಿದ್ದಕ್ಕಾಗಿ ಅಭಿವಂದಿಸುವೆ. ಮುಂಬರುವ ದಿನಗಳಲ್ಲಿ ತುಂಗಭದ್ರಾ ನದಿಗೆ ತೂಗುಸೇತುವೆ ನಿರ್ಮಾಣ ಮಾಡಲು ಯೋಚಿಸಲಾಗುತ್ತಿದೆ ಎಂದರು.

ದೇವಸ್ಥಾನ ಟ್ರಸ್ಟ್ ಕಮಿಟಿ ಉಪಾಧ್ಯಕ್ಷ ಶೇಖಣ್ಣ ಬಾಲೇಹೊಸೂರು ಹಾಗೂ ಸದಸ್ಯ ಕೊಟ್ರೇಶ ಬಳ್ಳೊಳ್ಳಿ ಮಾತನಾಡಿ, ಈ ಭಾಗದಲ್ಲಿ ನವಿಲುಗಳ ಸಂಖ್ಯೆ ಹೆಚ್ಚಾಗಿರುವುದರಿಂದ ಇಲ್ಲೊಂದು ನವಿಲುಧಾಮ ನಿರ್ಮಾಣ ಮಾಡಬೇಕು ಎಂದು ಪ್ರವಾಸೋದ್ಯಮ ಸಚಿವ ಎಚ್.ಕೆ. ಪಾಟೀಲ ಅವರಿಗೆ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ರಜನೀಕಾಂತ ದೇಸಾಯಿ, ಸೋಮಶೇಖರ ಹಕ್ಕಂಡಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.