ಸಾರಾಂಶ
ಗದಗ: ಮಾಜಿ ಪ್ರಧಾನಿ ಡಾ. ಮನಮೋಹನ ಸಿಂಗ್ ಕೇವಲ ರಾಜಕಾರಣಿಯಾಗಿರಲಿಲ್ಲ. ಉಪನ್ಯಾಸಕ, ಆರ್ಥಿಕ ಸಲಹೆಗಾರ, ಆರ್‌ಬಿಐ ಗವರ್ನರ್ ಆಗಿ ಸೇವೆ ಸಲ್ಲಿಸಿ ದೇಶದ ಆರ್ಥಿಕ ಸ್ಥಿತಿಯನ್ನು ಸದೃಢಗೊಳಿಸಿದ ಧೀಮಂತ ನಾಯಕನಾಗಿದ್ದರು ಎಂದು ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ ಕೃಷ್ಣಗೌಡ ಎಚ್.ಪಾಟೀಲ ಹೇಳಿದರು. ನಗರದ ದಿ.ಕಾಟನ್ ಸೇಲ್ ಸೊಸೈಟಿಯ ಆವರಣದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶಹರ ಕಾಂಗ್ರೆಸ್ ಸಮಿತಿ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ಸಮಿತಿ ನೇತೃತ್ವದಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ ಸಿಂಗ್ ನಿಧನ ಹಿನ್ನೆಲೆ ಆಯೋಜಿಸಲಾಗಿದ್ದ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಪ್ರಧಾನ ಮಂತ್ರಿ ಹುದ್ದೆ ಪ್ರತಿಯೊಬ್ಬರು ನಾಯಕತ್ವದ ಸ್ಥಾನ,ರಾಜಕೀಯದ ಅತೀ ದೊಡ್ಡ ಸ್ಥಾನ ಎಂದು ಭಾವಿಸುತ್ತಾರೆ. ಆದರೆ ಡಾ.ಮನಮೋಹನ ಸಿಂಗ್ ಅದೊಂದು ಸರ್ಕಾರಿ ನೌಕರಿ ಎಂದು ಭಾವಿಸಿ ಸಮರ್ಪಕ ಆಡಳಿತ ನಡೆಸಿದ್ದರು. ದೇಶ ಸೇರಿದಂತೆ ವಿದೇಶದಲ್ಲೂ ಪ್ರಧಾನಿ ಹುದ್ದೆಗೆ ಒಂದು ಗೌರವ ತಂದುಕೊಟ್ಟಿದ್ದರು. ರಾಜಕಾರಣ ಬದಿಗಿಟ್ಟು ದೇಶಕ್ಕಾಗಿ ಸೇವೆ ಸಲ್ಲಿಸಿದ್ದರು. ಅಂದಿನ ರಾಜಕೀಯದಲ್ಲಿ ಮನಮೋಹನ್ ಸಿಂಗ್ ಬಗ್ಗೆ ವಿರೋಧ ಪಕ್ಷದವರು ಹಲವಾರು ಟೀಕೆ ಮಾಡಿದರೂ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೇ ದೇಶದ ಕಾಯಕದಲ್ಲಿ ತೊಡಗಿದ್ದರು ಎಂದರು.ಶಹರ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಿ.ಬಿ.ಅಸೂಟಿ ಮಾತನಾಡಿ, ಮಾಜಿ ಪ್ರಧಾನಮಂತ್ರಿ ಡಾ. ಮನಮೋಹನ ಸಿಂಗ್ ದೇಶ ಕಂಡ ಮಹಾನ್ ಚೇತನರಾಗಿದ್ದಾರೆ. ಅವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ಉದ್ಯೋಗ ಖಾತ್ರಿ ಯೋಜನೆ,ವಿಶೇಷ ಆರ್ಥಿಕ ವಲಯ, ಆಹಾರ ಭದ್ರತೆ ಕಾಯ್ದೆ, ಶಿಕ್ಷಣ ಹಕ್ಕು ಕಾಯ್ದೆ ಸೇರಿದಂತೆ ಹತ್ತು ಹಲವಾರು ಯೋಜನೆ ಜಾರಿ ಮೂಲಕ ದೇಶ ಅಭಿವೃದ್ಧಿ ಪಥದತ್ತ ಕೊಂಡೊಯ್ದಿದ್ದರು ಎಂದು ತಿಳಿಸಿದರು.
ಜಿಲ್ಲಾ ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷ ಅಶೋಕ ಮಂದಾಲಿ ಮಾತನಾಡಿ, ದೇಶ ಕಂಡ ಅತ್ಯಂತ ಮುಗ್ಧ ಮನಸ್ಸಿನ ರಾಜಕಾರಣಿಗಳಲ್ಲಿ ಡಾ.ಮನಮೋಹನ್ ಸಿಂಗ್ ಒಬ್ಬರಾಗಿದ್ದರು, ರೈತರ ಬಗ್ಗೆ ಅಪಾರ ಕಾಳಜಿ ಹೊಂದಿದ್ದ ಅವರು ₹ 72 ಸಾವಿರ ಕೋಟಿ ಸಾಲ ಮನ್ನಾ ಮಾಡುವ ಮೂಲಕ ರೈತರ ಬೆನ್ನೆಲುಬಾಗಿ ನಿಂತಿದ್ದರು. ದೇಶದಲ್ಲಿ ನರ್ಮ್ ಯೋಜನೆ, ಸರ್ವಶಿಕ್ಷಣ ಅಭಿಯಾನಕ್ಕೆ ಶಕ್ತಿ, ಮೊಬೈಲ್ ಸಂಖ್ಯೆ ಪೋರ್ಟ ಬಿಲಿಟಿ, ಚಂದ್ರಯಾನ, ಮಂಗಳಯಾನದ ಕನಸು ಸೇರಿ ಆಧಾರ್ ಕಾರ್ಡ್ ವ್ಯವಸ್ಥೆ ಜಾರಿಗೆ ತಂದ ಕೀರ್ತಿ ಡಾ.ಮನಮೋಹನ್ ಸಿಂಗ್ ಅವರಿಗೆ ಸಲ್ಲುತ್ತದೆ ಎಂದರು.ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ನೀಲಮ್ಮ ಬೋಳನವರ, ಮುಳಗುಂದ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಬಸವರಾಜ ಸುಂಕಾಪೂರ, ಶ್ರೀನಿವಾಸ ಹುಯಿಲಗೋಳ ಹಾಗೂ ಎಸ್.ಎನ್. ಬಳ್ಳಾರಿ ಮಾತನಾಡಿದರು.
ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಉಮರ್ ಫಾರೂಕ್ ಹುಬ್ಬಳ್ಳಿ, ಮಹಮ್ಮದ್ ಶಾಲಗಾರ, ಮಹಮ್ಮದಸಾಬ್ ಬೆಟಗೇರಿ, ಮಾರ್ತಾಂಡಪ್ಪ ಹಾದಿಮನಿ, ದ್ರಾಕ್ಷಾಯಿಣಿ ಹಾಸಿಲಕರ, ಯಲ್ಲಮ್ಮ ಜಡಿ, ವನಜಾಕ್ಷಿ ಜಡಿ, ವಿನೋದ ಸಿದ್ಲಿಂಗ್, ಎಚ್.ಕೆ. ಭೂಮಕ್ಕನವರ, ಮೋಹನ ದೊಡಕುಂಡಿ, ಸೋಮು ಲಮಾಣಿ, ಸೋಮರೆಡ್ಡಿ ರಾಮೇನಹಳ್ಳಿ, ಶಿವಾನಂದ ಮಾದಣ್ಣವರ, ರಮೇಶ ರೋಣದ, ಉಮೇಶ ಹೂಗಾರ, ಅನಿಲ ಗರಗ, ವಿಜಯ ನೀಲಗುಂದ, ಶಿವರಾಜ ಕೊಟಿ, ಇರ್ಫಾನ ಡಂಬಳ, ಅಜ್ಜಪ್ಪ ಹುಗ್ಗೆಣ್ಣವರ, ಚಂದ್ರು ಹಿರೇಮಠ, ಲಕ್ಷ್ಮಣ ವಡ್ಡರಕಲ್ಲ, ಆಂಜನೇಯ ಕಟಗಿ, ಹನುಮಂತಪ್ಪ ಕಕ್ಕೇರಿ, ನಂದರಗಿ, ಚನ್ನವೀರ ಮಳಗಿ, ಶಾಂತಣ್ಣ ಮುಳವಾಡ, ರವಿಕುಮಾರ ರೆಡ್ಡಿ ಸೇರಿ ಪಕ್ಷದ ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಇದ್ದರು.