ಹಾಡುಗಾರಿಕೆ, ಮೃದಂಗ ಕಾರ್ಯಾಗಾರ ಸಮಾರೋಪ

| Published : May 17 2025, 02:43 AM IST

ಸಾರಾಂಶ

ಕಾಸರಗೋಡು ಸಮೀಪ ಬದಿಯಡ್ಕದ ವೀಣಾವಾದಿನಿ ಸಂಗೀತ ಹಾಗೂ ವೈದಿಕ - ತಾಂತ್ರಿಕ ವಿದ್ಯಾಪೀಠದ ವತಿಯಿಂದ ನಡೆದ ಮೂರು ದಿನಗಳ ಸಂಗೀತ ಹಾಗೂ ಮೃದಂಗ ಕಾರ್ಯಾಗಾರವು ಮೇ 9ರಿಂದ 11ರವರೆಗೆ ನೆರವೇರಿತು.

ಕನ್ನಡಪ್ರಭ ವಾರ್ತೆ ಮಂಗಳೂರುಕಾಸರಗೋಡು ಸಮೀಪ ಬದಿಯಡ್ಕದ ವೀಣಾವಾದಿನಿ ಸಂಗೀತ ಹಾಗೂ ವೈದಿಕ - ತಾಂತ್ರಿಕ ವಿದ್ಯಾಪೀಠದ ವತಿಯಿಂದ ನಡೆದ ಮೂರು ದಿನಗಳ ಸಂಗೀತ ಹಾಗೂ ಮೃದಂಗ ಕಾರ್ಯಾಗಾರವು ಮೇ 9ರಿಂದ 11ರವರೆಗೆ ನೆರವೇರಿತು.

ಈ ಕಾರ್ಯಾಗಾರದಲ್ಲಿ ವಿದ್ಯಾರ್ಥಿಗಳಿಗೆ ಸಂಗೀತಶಿಕ್ಷಕ, ವೀಣಾವಾದಿನಿಯ ನಿರ್ದೇಶಕ ಹಾಗೂ ಗುರು ಯೋಗೀಶ ಶರ್ಮ ಬಳ್ಳಪದವು ಗಾಯನದಲ್ಲಿ ಮಾರ್ಗದರ್ಶನ ನೀಡಿದರು. ಅವರ ಪಾಠಗಳು ಕೇವಲ ಶಾಸ್ತ್ರೀಯತೆಗಷ್ಟೇ ಸೀಮಿತವಾಗಿರದೆ, ರಾಗದ ಆಂತರಿಕ ಭಾವವನ್ನೂ, ಭಕ್ತಿಯನ್ನೂ, ಕೃತಿಗಳ ಒಳಗಿರುವ ಭಾವ ಶ್ರೀಮಂತಿಕೆಯನ್ನೂ ಸ್ಪಷ್ಟವಾಗಿ ಹರಡಿದವು. ಮೃದಂಗ ವಿಭಾಗದಲ್ಲಿ ಇಬ್ಬರು ಪರಿಣಿತ ಕಲಾವಿದರು ತರಬೇತಿ ನೀಡಿದರು. ಕಲಾವಿದರಾದ ಕೃಷ್ಣಕುಮಾರ್ ಚೇರ್ತಲ ಮತ್ತು ಕಲ್ಲೆಕುಳಂಗರ ಉಣ್ಣಿಕೃಷ್ಣನ್ ಅವರ ತಾಳಸಾಧನೆ ಮತ್ತು ಮಾರ್ಗದರ್ಶನ ಮೃದಂಗ ವಿದ್ಯಾರ್ಥಿಗಳಿಗೆ ಅಪರೂಪದ ಅನುಭವವನ್ನಿತ್ತವು.ಮುಸ್ಸಂಜೆಯ ಸಂಗೀತಾಭ್ಯಾಸ ತರಗತಿಗಳು, ಮುಂಜಾನೆಯ ಸಾಧನಾ ತರಗತಿಗಳು ವಿದ್ಯಾರ್ಥಿಗಳ ಕಲಿಕೆಗೆ ಪೂರಕವಾಗಿದ್ದವು.

ಬೆಂಗಳೂರಿನ ಡಾ. ಪದ್ಮಶ್ರೀ ಮುಂಜಾನೆ ಯೋಗಾಭ್ಯಾಸ ಹೇಳಿಕೊಟ್ಟರು.ಸಮಾರೋಪ ಸಮಾರಂಭದಲ್ಲಿ ಕಲ್ಲೆಕುಳಂಗರ ಉಣ್ಣಿಕೃಷ್ಣನ್, ವಯಲಿನ್ ವಿದ್ವಾಂಸ ಪ್ರಭಾಕರ ಕುಂಜಾರು, ಮೂಡುಬಿದಿರೆ ರಮಿತ್ ಕುಮಾರ್, ಉದ್ಯಮಿ ವಿಶ್ವಾಸ್ ಪದ್ಯಾರಬೆಟ್ಟು , ಯೋಗೀಶ ಶರ್ಮಾ ಇದ್ದರು.ಇದಕ್ಕೂ ಮೊದಲು ವೀಣಾವಾದಿನಿಯಲ್ಲಿ ಕಳೆದ ಒಂದು ತಿಂಗಳಿಂದ ತಂತ್ರಪೂಜಾ ಪಾಠಗಳು ಸಹ ಆರಂಭವಾಗಿದ್ದು, ಆಧ್ಯಾತ್ಮಿಕ ಪ್ರಜ್ವಲನೆಯಲ್ಲಿ ಮತ್ತೊಂದು ಅಧ್ಯಾಯ ಆರಂಭವಾಗಿದೆ. ಈ ತರಗತಿಗಳು ಬ್ರಹ್ಮಶ್ರೀ ಅನಂತ ಭಟ್ ಚೂರಿಕ್ಕೋಡು, ಬ್ರಹ್ಮಶ್ರೀ ಆದಿತ್ಯ ಹಾಗೂ ಬ್ರಹ್ಮಶ್ರೀ ರಾಧಾಕೃಷ್ಣ ಭಟ್ ಆಲಂಗಾರು ಮಾರ್ಗದರ್ಶನದಲ್ಲಿ ನಡೆಸಲ್ಪಡುತ್ತಿವೆ.