ಸಾರಾಂಶ
ನರಸಿಂಹರಾಜಪುರ, ತಾಲೂಕಿನ ಹಾತೂರು ಗ್ರಾಮದಲ್ಲಿ ಕಳೆದ 1 ವಾರದಿಂದಲೂ ಒಂಟಿ ಸಲಗ ರಾತ್ರಿ ಹೊತ್ತು ತೋಟಗಳಿಗೆ ನುಗ್ಗಿ ಅಡಕೆ, ಬಾಳೆ ಗಿಡಗಳಿಗೆ ಹಾನಿ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಗ್ರಾಮದ ಕೃಷ್ಣಪ್ಪಗೌಡ ಎಂಬುವರ ತೋಟಕ್ಕೆ ನುಗ್ಗಿದ ಆನೆ
ಕನ್ನಡಪ್ರಭ ವಾರ್ತೆ, ನರಸಿಂಹರಾಜಪುರತಾಲೂಕಿನ ಹಾತೂರು ಗ್ರಾಮದಲ್ಲಿ ಕಳೆದ 1 ವಾರದಿಂದಲೂ ಒಂಟಿ ಸಲಗ ರಾತ್ರಿ ಹೊತ್ತು ತೋಟಗಳಿಗೆ ನುಗ್ಗಿ ಅಡಕೆ, ಬಾಳೆ ಗಿಡಗಳಿಗೆ ಹಾನಿ ಮಾಡುತ್ತಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಭಾನುವಾರ ರಾತ್ರಿ ಹಾತೂರು ಗ್ರಾಮದ ಕೃಷ್ಣಪ್ಪಗೌಡ ಎಂಬುವರ ತೋಟಕ್ಕೆ ನುಗ್ಗಿದ ಒಂಟಿ ಸಲಗ 50 ಅಡಕೆ ಮರ, ಬಾಳೆ ಮರ ಮುರಿದು ಹಾಕಿದೆ. ನಂತರ ನಾಗೇಶ ಎಂಬುವರ ತೋಟಕ್ಕೆ ನುಗ್ಗಿದ ಕಾಡಾನೆ 10 ಅಡಕೆ ಮರ ಮರಿದು ಹಾಕಿದೆ. ಕಳೆದ 2 ದಿನದ ಹಿಂದೆ ಹುಲಿಮನೆ ಕೃಷ್ಣಮೂರ್ತಿ ಅವರ ತೋಟದಲ್ಲಿ 3ಂ ಅಡಕೆ ಮರ ಹಾಳು ಮಾಡಿದೆ. ವಾರದ ಹಿಂದೆ ಹಾತೂರು ಗ್ರಾಮದ ಶ್ರೀನಾಥ, ವೈ.ಎಸ್.ಕೃಷ್ಣಮೂರ್ತಿ ಅವರ ತೋಟಕ್ಕೂ ನುಗ್ಗಿದ ಕಾಡಾನೆ ಅಡಕೆ, ಬಾಳೆ ಮರ ಹಾಳು ಮಾಡಿದೆ. ಕಂಕಳೆಯ ವಿಠಲ ಶೆಟ್ಟಿ ಅಡಕೆ ತೋಟ ಸಹ ಆನೆಯಿಂದ ಹಾಳಾಗಿದೆ.ಕಳೆದ ಕೆಲವು ತಿಂಗಳಿಂದಲೂ ಕಣೇಬೈಲು, ದೋಣಿಸರ, ಹೆಮ್ಮೂರು,ಹಾತೂರು, ಮಲ್ಲಂದೂರು ಗ್ರಾಮಗಳಲ್ಲಿ ರಾತ್ರಿ ಸಮಯದಲ್ಲಿ ಈ ಒಂಟಿ ಸಲಗ ತೋಟಕ್ಕೆ ನುಗ್ಗುತ್ತಿದೆ. ಹಗಲು ಹೊತ್ತಿನಲ್ಲಿ ಕಾಡಿನಲ್ಲಿ ಮರೆಯಾಗುತ್ತಿದೆ. ಇದರಿಂದ ಗ್ರಾಮಸ್ಥರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ. ಸಂಜೆ, ರಾತ್ರಿ ಹೊತ್ತಿನಲ್ಲಿ ಗ್ರಾಮದ ಜನರು ಓಡಾಟ ಮಾಡಲು ಭಯ ಪಡುತ್ತಿದ್ದಾರೆ. ಅರಣ್ಯ ಇಲಾಖೆಯವರು ಈ ಒಂಟಿ ಆನೆಯನ್ನು ಅಭಯಾರಣ್ಯಕ್ಕೆ ಓಡಿಸಿ ಗ್ರಾಮಸ್ಥರಲ್ಲಿ ಧೈರ್ಯ ತುಂಬಬೇಕು ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.