ಜಿಲ್ಲಾದ್ಯಂತ ಏಕಬಳಕೆಯ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಿ

| Published : Jul 10 2025, 12:46 AM IST

ಸಾರಾಂಶ

ದಾವಣಗೆರೆ ನಗರ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರಸ್ನೇಹಿ ಜಿಲ್ಲೆಯಾಗಿಸಲು ಇಲಾಖಾವಾರು ವಿವಿಧ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದ್ದಾರೆ.

- ಪರಿಸರ ಸಂರಕ್ಷಣೆ- ಪ್ಲಾಸ್ಟಿಕ್ ನಿಷೇಧ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಸೂಚನೆ

- - -

ಕನ್ನಡಪ್ರಭ ವಾರ್ತೆ ದಾವಣಗೆರೆ

ದಾವಣಗೆರೆ ನಗರ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಹಾಗೂ ಪರಿಸರಸ್ನೇಹಿ ಜಿಲ್ಲೆಯಾಗಿಸಲು ಇಲಾಖಾವಾರು ವಿವಿಧ ರೀತಿಯ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಹೇಳಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

ನಗರದ ವಿವಿಧೆಡೆ ಉತ್ಪತ್ತಿಯಾಗುವ ಘನತ್ಯಾಜ್ಯ, ಆಸ್ಪತ್ರೆಗಳಲ್ಲಿ ಉತ್ಪತ್ತಿಯಾಗುವ ಬಯೋ ತ್ಯಾಜ್ಯವನ್ನು ವೈಜ್ಞಾನಿಕವಾಗಿ ಸಮರ್ಪಕ ವಿಲೇವಾರಿ ಮೂಲಕ ಪರಿಸರ ಸಂರಕ್ಷಿಸಬೇಕು. ಜಿಲ್ಲಾದ್ಯಂತ ಏಕಬಳಕೆಯ ಪ್ಲಾಸ್ಟಿಕ್‌ ಸಂಪೂರ್ಣ ನಿಷೇಧಿಸಿ, ವಿವಿಧ ಇಲಾಖೆಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾದ್ಯಂತ ಪರಿಸರ ಸಂರಕ್ಷಿಸಿ, ಉಳಿಸಲು ಪ್ರತಿ ಶಾಲೆಗೆ ದೊಡ್ಡ ಬ್ಯಾಗ್ ನೀಡಬೇಕು. ಅವುಗಳಲ್ಲಿ ಕಸ, ತ್ಯಾಜ್ಯ ಸಂಗ್ರಹಿಸಿ ಪಾಲಿಕೆ ಅಥವಾ ಸ್ಥಳೀಯ ಸಂಸ್ಥೆಗಳಿಗೆ ನೀಡಬೇಕು. ಪರಿಸರ ದಿನಾಚರಣೆ ಅಂಗವಾಗಿ ಸಂರಕ್ಷಣೆಗೆ ಮತ್ತು ರಕ್ಷಣೆಗೆ ಪ್ರತಿಯೊಂದು ಮಗುವು ಎರಡು ಸಸಿ ನೆಟ್ಟು ಪೋಷಣೆ ಮಾಡಬೇಕು ಎಂದರು.

ಮಾದರಿ ವಾರ್ಡ್:

ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ಬಳಕೆಯನ್ನು ತಡೆಗಟ್ಟಲು ದಾವಣಗೆರೆ ನಗರದಲ್ಲಿ ಮಾದರಿ ವಾರ್ಡ್ ಆಯ್ಕೆ ಮಾಡಿಕೊಳ್ಳುವ ಮೂಲಕ ಇಲ್ಲಿ ಪ್ಲಾಸ್ಟಿಕ್ ಬಳಕೆ ಶೂನ್ಯಕ್ಕೆ ತರುವುದು ಮತ್ತು ಪರಿಸರ ಸಂರಕ್ಷಣೆ ಮಾಡಲು ಕ್ರಮ ವಹಿಸಲಾಗುತ್ತದೆ. ಪ್ರತಿ ಮನೆಯಿಂದ ವೈಜ್ಞಾನಿಕವಾಗಿ ಕಸ ಸಂಗ್ರಹ ಮಾಡಲಾಗುತ್ತದೆ ಎಂದರು.

ಮಾರುಕಟ್ಟೆಗಳಲ್ಲಿ ಪ್ಲಾಸ್ಟಿಕ್ ನಿಷೇಧ:

ನಗರದ ಕೃಷಿ ಉತ್ಪನ್ನ ಮಾರುಕಟ್ಟೆ ಹಾಗೂ ಇನ್ನಿತರೇ ಮಾರುಕಟ್ಟೆಗಳಲ್ಲಿ ಏಕಬಳಕೆ ಹಾಗೂ ಪರಿಸರಕ್ಕೆ ಹಾನಿ ಮಾಡುವಂಥ ಪ್ಲಾಸ್ಟಿಕ್‌ ಅನ್ನು ಸಂಪೂರ್ಣ ನಿರ್ಬಂಧಿಸಿ ನಿಷೇಧಿಸುವಂತೆ ಮಾರುಕಟ್ಟೆ ಸಮಿತಿ ಜಂಟಿ ನಿರ್ದೇಶಕರಿಗೆ ಸೂಕ್ತ ನಿರ್ದೇಶನ ನೀಡಿ ಆಯಾ ಇಲಾಖೆವಾರು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಸಂಪೂರ್ಣ ವರದಿ ನೀಡಲು ಪರಿಸರ ಅಧಿಕಾರಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಿಪಂ ಸಿಇಒ ಗಿಟ್ಟೆ ಮಾದವ ವಿಠ್ಠಲ ರಾವ್, ಪಾಲಿಕೆ ಆಯುಕ್ತೆ ರೇಣುಕಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕ ಮಹಾಂತೇಶ್, ಡಿಡಿಪಿಐ ಕೊಟ್ರೇಶ್, ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.

- - -

(ಬಾಕ್ಸ್‌) * ಹಾಳೆ ಉಳಿದ ನೋಟ್‌ಬುಕ್ ಸಂಗ್ರಹ ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳು ಬರೆಯಲು ಉಪಯೋಗಿಸುವ ನೋಟ್ ಬುಕ್‌ಗಳಲ್ಲಿ ಕೆಲವು ಪುಟಗಳ ಹಾಳೆಯನ್ನು ಮಾತ್ರ ಉಪಯೋಗಿಸಿ ಉಳಿದ ಹಾಳೆಯಲ್ಲಿ ಬರೆಯದೇ ಉಳಿಸಲಾಗಿರುತ್ತದೆ. ಇಂತಹ ನೋಟ್ ಪುಸ್ತಕ, ಡೈರಿಗಳ ಸಂಗ್ರಹ ಮಾಡುವ ಮೂಲಕ ಅದರಲ್ಲಿ ಉಳಿಕೆ ಹಾಳೆಗಳನ್ನು ಸಂಗ್ರಹಿಸಿ, ಬೈಡಿಂಗ್ ಮಾಡಿಸುವ ಮೂಲಕ ಮರುಬಳಕೆಗೆ ಚಿಂತನೆ ನಡೆಸಲಾಗಿದೆ. ಇದರಿಂದ ಕಾಗದದ ತಯಾರಿಕೆಗೆ ಬಳಕೆ ಮಾಡುವ ಪ್ರಾಕೃತಿಕ ಸಂಪತ್ತನ್ನು ಉಳಿಸಿದಂತಾಗುತ್ತದೆ. ವಿದ್ಯಾರ್ಥಿಗಳಿಗೆ ಈ ಬಗ್ಗೆ ಮನವರಿಕೆಯೂ ಮಾಡಿಕೊಟ್ಟಂತಾಗುತ್ತದೆ ಎಂದು ಡಿಸಿ ತಿಳಿಸಿದರು.

- - -

-1ಕೆಡಿವಿಜಿ43.ಜೆಪಿಜಿ:

ದಾವಣಗೆರೆಯಲ್ಲಿ ಪರಿಸರ ಸಂರಕ್ಷಣೆ ಮತ್ತು ಪ್ಲಾಸ್ಟಿಕ್ ನಿಷೇಧ ಕುರಿತು ಆಯೋಜಿಸಲಾಗಿದ್ದ ಪೂರ್ವಭಾವಿ ಸಭೆಯಲ್ಲಿ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮಾತನಾಡಿದರು.