ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲು ಏಕಗವಾಕ್ಷಿ ವ್ಯವಸ್ಥೆ: ಸಚಿವ ದಿನೇಶ್

| Published : Jul 25 2025, 12:50 AM IST / Updated: Jul 25 2025, 12:57 AM IST

ಕೆಂಪುಕಲ್ಲು ಗಣಿಗಾರಿಕೆಗೆ ಪರವಾನಗಿ ನೀಡಲು ಏಕಗವಾಕ್ಷಿ ವ್ಯವಸ್ಥೆ: ಸಚಿವ ದಿನೇಶ್
Share this Article
  • FB
  • TW
  • Linkdin
  • Email

ಸಾರಾಂಶ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಕುರಿತಂತೆ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಬೆಂಗಳೂರಿನಲ್ಲಿ ಚರ್ಚೆ ನಡೆಸಿದರು.

ಕನ್ನಡಪ್ರಭ ವಾರ್ತೆ ಮಂಗಳೂರುದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಕಾನೂನಿನ ಅನ್ವಯ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಬೆಂಗಳೂರಿನ ವಿಧಾನಸೌಧದಲ್ಲಿ ಬುಧವಾರ ಸ್ಪೀಕರ್ ಯು.ಟಿ. ಖಾದರ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ನೇತೃತ್ವದಲ್ಲಿ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಯಿತು. ಜಿಲ್ಲೆಯಲ್ಲಿ ಕೆಂಪುಕಲ್ಲು ಗಣಿಗಾರಿಕೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ನಿಯಮಗಳಲ್ಲಿ ಬದಲಾವಣೆಗಳನ್ನು ತರುವ ಕುರಿತಂತೆ ಗಣಿ ಇಲಾಖೆ ಅಧಿಕಾರಿಗಳೊಂದಿಗೆ ಸಚಿವ ದಿನೇಶ್ ಗುಂಡೂರಾವ್ ಚರ್ಚೆ ನಡೆಸಿದರು. ವಾಣಿಜ್ಯ ಉದ್ದೇಶವಲ್ಲದ ಕೆಂಪುಕಲ್ಲು ಕ್ವಾರಿಗಳಿಗೆ ಅಧಿಕೃತವಾಗಿ ಪರವಾನಿಗೆ ಕೊಡುವ ವ್ಯವಸ್ಥೆ ಜಾರಿಯಾಗಬೇಕು. ಪರವಾನಿಗೆ ಪಡೆಯಲು ಏಕಗವಾಕ್ಷಿ ಯೋಜನೆ ರೀತಿಯಲ್ಲಿ ವ್ಯವಸ್ಥೆ ಕಲ್ಪಿಸಬೇಕು. ಸಮಯ ಮಿತಿಯಲ್ಲಿ ಪರವಾನಿಗೆಗಳನ್ನು ಕೊಡುವ ಕಾರ್ಯಗತಿ ಜಾರಿಗೆ ತರುವಂತೆ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಗಣಿ ಇಲಾಖೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಕೆಂಪುಕಲ್ಲು ಉತ್ಪಾದಕರೊಂದಿಗೆ ಚರ್ಚೆ ನಡೆಸಿ ವಾರದೊಳಗೆ ಹೊಸ ನೀತಿ ಜಾರಿಗೊಳಿಸುವತ್ತ ಎಸ್ ಒಪಿ ಸಿದ್ಧಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯ ಅಧ್ಯಕ್ಷತೆ ವಹಿಸಿದ್ದ ವಿಧಾನ ಸಭಾಧ್ಯಕ್ಷ ಯು.ಟಿ. ಖಾದರ್ ಅವರು, ಮಣ್ಣು ಸಮತಟ್ಟು ಸೇರಿದಂತೆ ಕಟ್ಟಡ ನಿರ್ಮಾಣ ಕಾಮಗಾರಿಗಳಿಗೆ 3 ಮೀಟರ್ ಮಾತ್ರ ಆಳಕ್ಕೆ ಡ್ರಿಲ್ ಮಾಡಲು ಅವಕಾಶವಿದ್ದು, ಇದನ್ನು 6 ಮೀಟರ್ ಗೆ ಹೆಚ್ಚಿಸುವ ನಿಟ್ಟಿನಲ್ಲಿ ಕ್ರಮಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಈಗಾಗಲೇ ಕೆಲವು ಚಟುವಟಿಕೆಗಳಿಗೆ ಯಾವುದೇ ನಿರ್ಬಂಧವಿಲ್ಲ. ಆದರೆ ಕೆಂಪುಕಲ್ಲು ಗಣಿಗಾರಿಕೆಗೆ ಕೆಲವು ನಿರ್ಬಂಧ ಗಳಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಲಭ ರೀತಿಯಲ್ಲಿ ಕೆಂಪುಕಲ್ಲು ಗ್ರಾಹಕರಿಗೆ ದೊರೆಯುವಂತಾಗಬೇಕು. ರಾಯಾಲ್ಟಿಯನ್ನು ಕಡಿಮೆಗೊಳಿಸಿ ನಿಯಮ ಬದ್ಧವಾಗಿ ಕಲ್ಲು ಗಣಿಗಾರಿಕೆಗೆ ಅವಕಾಶ ಕಲ್ಪಿಸುವಂತೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.‌