ಸಾರಾಂಶ
ಕೈಯ್ಯಲ್ಲಿದ್ದ ಊರುಗೋಲಿನಿಂದ ಥಳಿಸಿದ್ದ ಆರೋಪಿ ಸಿದ್ದಲಿಂಗಯ್ಯ
ಕಿನ್ನಾಳ ಗ್ರಾಮದ ಅನುಶ್ರೀ ಹತ್ಯೆಯ ಆರೋಪಿ ಬಂಧನಕನ್ನಡಪ್ರಭ ವಾರ್ತೆ ಕೊಪ್ಪಳತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಏ.19 ರಂದು ನಡೆದ ಅನುಶ್ರೀ ರಾಘವೇಂದ್ರ ಮಡಿವಾಳ (7) ಎಂಬ ಬಾಲಕಿಯ ನಿಗೂಢ ಹತ್ಯೆ ಪ್ರಕರಣ ಭೇದಗಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು, ವಿಮಲ್ (ಗುಟಕಾ) ತಂದು ಕೊಡಲಿಲ್ಲ ಎಂದು ಸಿಟ್ಟಿಗೆದ್ದು ಕೈಯ್ಯಲ್ಲಿದ್ದ ಬಡಿಗೆ (ಊರುಗೋಲಿ)ಯಿಂದ ಹೊಡೆದು ಅದೇ ಗ್ರಾಮದ ಸಿದ್ದಲಿಂಗಯ್ಯ ಎಂಬಾತನೇ ಹತ್ಯೆಗೈದಿದ್ದಾನೆ ಎಂಬ ಪ್ರಕರಣ ಎರಡು ತಿಂಗಳ ಬಳಿಕ ಬಯಲಾಗಿದೆ. ಆರೋಪಿ ತಪ್ಪೊಪ್ಪಿಕೊಂಡಿದ್ದು ಬಂಧಿಸಿ ಜೈಲಿಗಟ್ಟಲಾಗಿದೆ.
ಆಗಿದ್ದೇನು:ಅಂದು ಬೆಳಗ್ಗೆ ತಂದೆಯೊಂದಿಗೆ ಹೊರಟಿದ್ದ ಬಾಲಕಿಯನ್ನ ಕರೆದು ವಿಮಲ್ ತಂದುಕೊಡುವಂತೆ ಸಿದ್ದಲಿಂಗಯ್ಯ ಹೇಳಿದ್ದಾನೆ. ಬಾಲಕಿ ವಿಮಲ್ ತಂದುಕೊಡಲು ನಿರಾಕರಣೆ ಮಾಡಿದ್ದಾಳೆ. ಆಗ ಜೊತೆಯಲ್ಲಿಯೇ ಇದ್ದ ತಂದೆ ಬೈಯ್ದು, ಹಿರಿಯರು ಹೇಳಿದನ್ನು ಮಾಡಬೇಕು ಎಂದಾಗ ಮಗು ವಿಮಲ್ ತಂದುಕೊಟ್ಟಿದೆ.
ಅದೇ ದಿನ ಮಧ್ಯಾಹ್ನ ಮತ್ತೆ ಆತ ಬಾಲಕಿಯನ್ನು ಕರೆದು ವಿಮಲ್ ತಂದುಕೊಡುವಂತೆ ಹೇಳಿದ್ದಾನೆ. ಬಾಲಕಿ ಒಪ್ಪಿಲ್ಲ, ತಂದೆಯೂ ಜತೆಯಲ್ಲಿರದೇ ಇದ್ದುದರಿಂದ ಖಡಕ್ ಆಗಿಯೇ ಹೇಳಿದ್ದಾಳೆ. ಇದರಿಂದ ಕೊಪಗೊಂಡ ಸಿದ್ದಲಿಂಗಯ್ಯ ಕುಡಿದ ಮತ್ತಿನಲ್ಲಿ ಕೈಯ್ಯಲ್ಲಿದ್ದ ಊರುಗೋಲಿನಿಂದ ತಲೆಗೆ ಜೋರಾಗಿ ಹೊಡೆದಿದ್ದಾನೆ. ಹುಡುಗಿ ಪ್ರಜ್ಞೆ ತಪ್ಪಿ ಬಿದ್ದಿದ್ದಾಳೆ. ಗಾಬರಿಗೊಂಡ ಸಿದ್ದಲಿಂಗಯ್ಯ ಚೀಲವೊಂದರಲ್ಲಿ ತುಂಬಿಟ್ಟಿದ್ದಾನೆ. ಅಂದು ಗ್ರಾಮದಲ್ಲಿ ಮದುವೆ ಇದ್ದುದರಿಂದ ಯಾರೂ ಓಣಿಯಲ್ಲಿ ಇರಲಿಲ್ಲ. ಇದರಿಂದ ಯಾರಿಗೂ ಗೊತ್ತಾಗಲಿಲ್ಲ.ಬಾಲಕಿ ಉಸಿರುಗಟ್ಟಿ ಸಾವನ್ನಪ್ಪಿದ್ದಾಳೆ. ಮನೆಯಲ್ಲಿಯೇ ಎರಡು ದಿನ ಇಟ್ಟುಕೊಂಡಿದ್ದಾನೆ. ವಾಸನೆ ಬರಲಾರಂಭಿಸಿದ್ದರಿಂದ ರಾತ್ರಿಯ ವೇಳೆಯಲ್ಲಿ ತಾನೇ ಚೀಲವನ್ನು ಪಾಳುಬಿದ್ದ ಮನೆಯಲ್ಲಿಟ್ಟು, ಮುಚ್ಚಿದ್ದ ಎಂಬುದು ಈಗ ಬಯಲಾಗಿದೆ.
ಅಕ್ಕಪಕ್ಕದವರು ನೋಡಿದಾಗ ಪ್ರಕರಣ ಬೆಳಕಿಗೆ ಬಂದಿತ್ತು. ಪ್ರಕರಣದ ತನಿಖೆ ನಡೆಸಲು ಪೊಲೀಸರು ಸ್ಥಳಕ್ಕೆ ಧಾವಿಸಿದಾಗ ಸಿದ್ದಲಿಂಗಯ್ಯ ಅಲ್ಲಿಯೇ ಸುತ್ತಾಡಿದ್ದಾನೆ. ಪೊಲೀಸರ ದಾರಿ ತಪ್ಪಿಸುವ ಕೆಲಸ ಮಾಡಿದ್ದಾನೆ.ಇದಾದ ಮೇಲೆ ಆತ ವಿಪರೀತ ಕುಡಿತಕ್ಕೆ ಬಿದ್ದಿದ್ದ. ಭಯದಲ್ಲಿ ಬದುಕುತ್ತಿದ್ದ, ಇದರ ಮಾಹಿತಿ ಪಡೆದ ಪೊಲೀಸರು ಕರೆದು, ತನಿಖೆ ಮಾಡಿದಾಗ ಸತ್ಯ ಬಾಯಿಬಿಟ್ಟಿದ್ದಾನೆ.
ಎಸ್ಪಿ, ಯಶೋಧಾ ವಂಟಗೋಡಿ, ಹೆಚ್ಚುವರಿ ಎಸ್ಪಿ ಹೇಮಂತ್‌ಕುಮಾರ ಆರ್., ಡಿವೈಎಸ್ಪಿ ಮುತ್ತಣ ಸರವಗೋಳ ಅವರ ಮಾರ್ಗದರ್ಶನದಲ್ಲಿ ಡಿಎಸ್ಪಿ ಆಂಜನೇಯ ನೇತೃತ್ವದಲ್ಲಿ ಸಿಪಿಐ ಮೌನೇಶ್ವರ ಪಾಟೀಲ್, ಸಿಪಿಐ ಸುರೇಶ ಡಿ., ಪಿಎಸ್ಐ ಡಾಕೇಶ, ಸಿಬ್ಬಂದಿ ವೆಂಕಟೇಶ ಎಎಸ್‌ಐ, ಸಿಎಚ್‌ಸಿ ನಾಗರಾಜ, ಖಾಜಾಸಾಬ, ಚಂದುನಾಯಕ, ನಿಂಗಪ್ಪ ಹೆಬ್ಬಾಳ, ಮೆಹಬೂಬ, ದೇವೇಂದ್ರಪ್ಪ, ಮಹೇಶ ಸಜ್ಜನ, ಚಿರಂಜೀವಿ, ವಿಶ್ವನಾಥ, ಶಿವಕುಮಾರ ಕೊಟೇಶ, ಅಶೋಕ, ರಿಜ್ಞಾನ ಮತ್ತು ಸಿಪಿಸಿ ಹನಮಗೌಡ, ಕನಕರಾಯ, ಉಮೇಶ, ಮಹ್ಮದರಫಿ, ಪ್ರಸಾದ, ಈರೇಶ, ಚಂದ್ರಶೇಖರ, ಮಲ್ಲಪ್ಪ, ಆಶ್ರಫ್ ಪ್ರಕರಣ ಬೇಧಿಸುವಲ್ಲಿ ಕಾರ್ಯನಿರ್ವಹಿಸಿದ್ದಾರೆ.ಪ್ರಕರಣದ ಪತ್ತೆಗಾಗಿ ಮಾಹಿತಿ ನೀಡಿದವರಿಗೆ ₹25 ಸಾವಿರ ಬಹುಮಾನ ಘೋಷಣೆ ಮಾಡಲಾಗಿತ್ತು. ಆದರೆ, ಸಾರ್ವಜನಿಕರು ಯಾರು ಮಾಹಿತಿ ನೀಡಲಿಲ್ಲ. ಹೀಗಾಗಿ, ಈ ಮೊತ್ತವನ್ನು ಪ್ರಕರಣ ಬೇಧಿಸಿದ ತಂಡಕ್ಕೆ ನೀಡಲಾಗುತ್ತದೆ ಎಂದು ಎಸ್ಪಿ ಯಶೋದಾ ವಂಟಿಗೋಡಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.