ಹುಬ್ಬಳ್ಳಿ:

ರಾಮನಗರ, ಶಿಗ್ಗಾಂವಿ-ಸವಣೂರು ಬೆನ್ನಲ್ಲೇ ಹು-ಧಾ ಪೂರ್ವ ಹಾಗೂ ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲೂ ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್‌) ನಿಯಮಬಾಹಿರ ಕೃತ್ಯ ಬಹಿರಂಗಗೊಂಡಿದೆ.

ನಗರದ ಪೂರ್ವ ಕ್ಷೇತ್ರದ 63ನೇ ವಾರ್ಡಿನ ಬೂತ್ ನಂ. 16ರಲ್ಲಿ ನಿಯಮಬಾಹಿರ ಕೃತ್ಯ ನಡೆಸಿರುವ ಕುರಿತು ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

ಇಲ್ಲಿನ ಬಿಎಲ್‌ಒ ಮೇರಿ ಹರಪನಾಳ ಎಂಬವರು ಕೇಂದ್ರ ಚುನಾವಣಾ ಆಯೋಗದ ನಿಯಮಗಳನ್ನು ಗಾಳಿಗೆ ತೂರಿ, ಮನೆ-ಮನೆಗೆ ಭೇಟಿ ನೀಡದೇ ಒಂದೇ ಸ್ಥಳದಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ಗಳನ್ನು ಭರ್ತಿ ಮಾಡುತ್ತಿದ್ದರು. ಒಂದೇ ಜಾಗದಲ್ಲಿ (ಒಂದೇ ಮನೆಯಲ್ಲಿ) 25-30 ಜನರನ್ನು ಕೂರಿಸಿಕೊಂಡು ಎನ್ಯೂಮರೇಷನ್‌ ಫಾರ್ಮ್‌ಗಳನ್ನು ಭರ್ತಿ ಮಾಡಲಾಗುತ್ತಿದೆ. ಬಿಎಲ್‌ಒ ಅವರು ಮನೆ-ಮನೆಗೆ ತೆರಳಿ ಎನ್ಯೂಮರೇಷನ್‌ ಫಾರ್ಮ್‌ ನೀಡಬೇಕು. ಬಳಿಕ ಭರ್ತಿ ಮಾಡಿಸಿಕೊಂಡು ಪರಿಶೀಲನೆ ನಡೆಸಿ ಆ ಬಳಿಕ ಅವರೊಂದು ಪ್ರತಿ ನೀಡಿ ತಾವೊಂದು ಪ್ರತಿ ಇಟ್ಟುಕೊಂಡು ಬರಬೇಕು. ಆದರೆ, ಆ ಕೆಲಸ ಇಲ್ಲಿ ಆಗುತ್ತಿಲ್ಲ. ಬಿಎಲ್‌ಎ-2 ನೀಡಿದ ದೂರಿನ ಮೇರೆಗೆ, ಬಿಎಲ್‌ಎ-1 ಅವರು ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಈ ಅಕ್ರಮವನ್ನು ಸಾಕ್ಷ್ಯ ಸಮೇತ ದಾಖಲಿಸಿಕೊಂಡಿದ್ದಾರೆ.

ದೇವಸ್ಥಾನದಲ್ಲೇ ಎಸ್‌ಐಆರ್ ಪ್ರಕ್ರಿಯೆ:


ಸೆಂಟ್ರಲ್‌ ವಿಧಾನಸಭಾ ಕ್ಷೇತ್ರದಲ್ಲೂ ಅಧಿಕಾರಿಗಳು ಮತದಾರರನ್ನೇ ದೇವಸ್ಥಾನಗಳಿಗೆ ಕರೆಸಿ ದಾಖಲೆ ಪರಿಶೀಲನೆ ನಡೆಸಿದ್ದಾರೆ. ಅಕ್ಷಯ್ ಪಾರ್ಕ್‌ನ ಗಣೇಶ ದೇವಸ್ಥಾನ ಹಾಗೂ ಮಾವಳ್ಳಿ ಪ್ಲಾಟ್‌ನ ತುಳಜಾಭವಾನಿ ದೇವಸ್ಥಾನಗಳಲ್ಲಿ ವಿವಿಧ ಬಡಾವಣೆಗಳ ಮತದಾರರನ್ನು ಒಂದೇ ಸ್ಥಳಕ್ಕೆ ಕರೆಸಿ ಎಸ್‌ಐಆರ್ ಪ್ರಕ್ರಿಯೆ ನಡೆಸಲಾಗಿದೆ. ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಮಸೀದಿಗಳಲ್ಲಿ ಫಾರ್ಮ್‌ ಭರ್ತಿ: ಜೋಶಿ

ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ ಅಕ್ರಮ ಗುರುವಾರ ರಾಮನಗರ, ಶುಕ್ರವಾರ ಶಿಗ್ಗಾಂವಿ-ಸವಣೂರು, ಹುಬ್ಬಳ್ಳಿ-ಧಾರವಾಡ ಮಸೀದಿಗಳಲ್ಲಿ ಕುಳಿತು ಫಾರ್ಮ್‌ ಭರ್ತಿ... ಹೀಗೆ ರಾಜ್ಯಾದ್ಯಂತ ಎಸ್‌ಐಆರ್‌ ಅಕ್ರಮಗಳ ಸುರಿಮಳೆಯಾಗುತ್ತಿದೆ. ಬೃಹತ್ ಹಗರಣವೇ ನಡೆಯುತ್ತಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಕಿಡಿಕಾರಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿರುವ ಅವರು, ರಾಜ್ಯದಲ್ಲಿ ನಡೆಯುತ್ತಿರುವ ಈ ರೀತಿಯ ಎಸ್‌ಐಆರ್‌ ಪ್ರಕ್ರಿಯೆ ಪ್ರಜಾಪ್ರಭುತ್ವದ ಆಶಯಗಳಿಗೆ ವಿರುದ್ಧವಾಗಿದೆ. ನಿಯಮಗಳನ್ನೆಲ್ಲ ಗಾಳಿಗೆ ತೂರಿ ಮನೆ, ಮಸೀದಿಯಲ್ಲಿ ಕುಳಿತು ಎನ್ಯೂಮರೇಷನ್ ಫಾರ್ಮ್‌ ಭರ್ತಿ ಮಾಡುತ್ತಿರುವ ಬಗ್ಗೆ, ಅದನ್ನು ವಾಟ್ಸ್‌ಆ್ಯಪ್‌ಗಳಲ್ಲಿ ಹಂಚಿಕೊಳ್ಳುತ್ತಿರುವ ಅಕ್ರಮಗಳ ಬಗ್ಗೆ ರಾಜ್ಯದ ಅನೇಕ ಕಡೆಗಳಿಂದ ಫೋನ್‌ ಕರೆಗಳೂ ಬರುತ್ತಿವೆ ಎಂದು ಹೇಳಿದ್ದಾರೆ.

ಕರ್ನಾಟಕದಲ್ಲಿ ಎಸ್‌ಐಆರ್‌ ಹೆಸರಲ್ಲಿ ಬೃಹತ್ ಹಗರಣವೇ ನಡೆಯುತ್ತಿದೆ. ರಾಜಕೀಯ ಲಾಭಕ್ಕಾಗಿ ಮತದಾರರ ಪಟ್ಟಿಯನ್ನು ತಮಗೆ ಬೇಕಾದಂತೆ ಸಿದ್ಧಪಡಿಸಿಕೊಳ್ಳಲು ರಾಜ್ಯ ಸರ್ಕಾರ ವ್ಯವಸ್ಥಿತ ಸಂಚು ರೂಪಿಸಿದಂತಿದೆ. ಈ ಹಗರಣದ ಹಿಂದೆ ಯಾರ ಹಿತಾಸಕ್ತಿ ಅಡಗಿದೆ ಎಂಬುದನ್ನು ಬಯಲಿಗೆಳೆಯಲು ನಿಷ್ಪಕ್ಷಪಾತ ಮತ್ತು ಸಮಗ್ರ ತನಿಖೆಯಾಗಬೇಕು. ತಪ್ಪಿತಸ್ಥ ಅಧಿಕಾರಿಗಳು ಮತ್ತು ಇದರ ಹಿಂದಿರುವ ರಾಜಕೀಯ ಕೈಗಳ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು ಎಂದು ಜೋಶಿ ಒತ್ತಾಯಿಸಿದ್ದಾರೆ.