ಪ್ರತಿಯೊಬ್ಬ ವ್ಯಕ್ತಿಯೂ ದುಡಿಯಬೇಕು, ದುಡಿಮೆಗೆ ಪರಿಣಿತಿ, ದೂರದೃಷ್ಟಿಯ ಜೊತೆಗೆ ನೈತಿಕತೆ ಇರಬೇಕು, ಪ್ರತಿಯೊಬ್ಬರೂ ದುಡಿದು ಉಣ್ಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಆದರ್ಶ ಹೊಂದಿದ್ದ ಸರ್ ಎಂವಿ ಅವರು ನಮ್ಮ ಜಿಲ್ಲೆಯ ಮಗನಾಗಿ ಕಡು ಬಡತನದಲ್ಲಿ ಹುಟ್ಟಿ ವಿದ್ಯೆ ಕಲಿತು ಜಗದ್ವಿಖ್ಯಾತ ಇಂಜಿನಿಯರ್ ಆಗಿದ್ದರು. ಮೈಸೂರು ಸಂಸ್ಥಾನದ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣದ ಆಶಯಗಳನ್ನು ಕಟ್ಟಿಕೊಡಲು ನಿಷ್ಠೆಯಿಂದ ದುಡಿದಿದ್ದಾರೆ ಎಂದರು.
ಕನ್ನಡಪ್ರಭ ವಾರ್ತೆ ಚಿಕ್ಕಬಳ್ಳಾಪುರ
ನನ್ನ ಜೀವನದ ಕೊನೆಯ ಕ್ಷಣದವರೆಗೂ ದುಡಿಯಲು ಇಚ್ಛಿಸುತ್ತೇನೆ ಎಂದು ಬಾಳಿ, ದುಡಿಮೆಯೇ ದೇವರು ಎಂಬ ನುಡಿಯ ಸಾಕ್ಷಿ ಪ್ರಜ್ಞೆಯಾಗಿ ಭಾರತ ರತ್ನ, ಸರ್. ಎಂ. ವಿಶ್ವೇಶ್ವರಯ್ಯನವರು ಅನ್ವರ್ಥಕವಾಗಿದ್ದಾರೆ ಎಂದು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಡಾ. ಕೋಡಿರಂಗಪ್ಪ ಅಭಿಪ್ರಾಯ ಪಟ್ಟರು.ಜಿಲ್ಲಾ ಮತ್ತು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಘಟಕಗಳು ತಾಲೂಕಿನ ಮಂಡಿಕಲ್ ನ ಕರ್ನಾಟಕ ಪಬ್ಲಿಕ್ ಶಾಲೆಗಳ ಸಮುಚ್ಛಯ ಹಾಗೂ ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಸಹಯೋಗದೊಂದಿಗೆ ಕರ್ನಾಟಕ ಪಬ್ಲಿಕ್ ಶಾಲೆಯ ಆವರಣದಲ್ಲಿ ಆಯೋಜಿಸಿದ್ದ ಸರ್.ಎಂ.ವಿಶ್ವೇಶ್ವರಯ್ಯನವರ ಜನ್ಮ ದಿನಾಚರಣೆಯಲ್ಲಿ ಮಾತನಾಡಿದರು.
ಪ್ರತಿಯೊಬ್ಬ ವ್ಯಕ್ತಿಯೂ ದುಡಿಯಬೇಕು, ದುಡಿಮೆಗೆ ಪರಿಣಿತಿ, ದೂರದೃಷ್ಟಿಯ ಜೊತೆಗೆ ನೈತಿಕತೆ ಇರಬೇಕು, ಪ್ರತಿಯೊಬ್ಬರೂ ದುಡಿದು ಉಣ್ಣುವ ಮನೋಭಾವ ಬೆಳೆಸಿಕೊಳ್ಳಬೇಕು ಎಂಬ ಆದರ್ಶ ಹೊಂದಿದ್ದ ಸರ್ ಎಂವಿ ಅವರು ನಮ್ಮ ಜಿಲ್ಲೆಯ ಮಗನಾಗಿ ಕಡು ಬಡತನದಲ್ಲಿ ಹುಟ್ಟಿ ವಿದ್ಯೆ ಕಲಿತು ಜಗದ್ವಿಖ್ಯಾತ ಇಂಜಿನಿಯರ್ ಆಗಿದ್ದರು. ಮೈಸೂರು ಸಂಸ್ಥಾನದ ಅರಸು ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯಲ್ಲಿ ಸಾಮಾಜಿಕ ನ್ಯಾಯ ಮತ್ತು ಜನಕಲ್ಯಾಣದ ಆಶಯಗಳನ್ನು ಕಟ್ಟಿಕೊಡಲು ನಿಷ್ಠೆಯಿಂದ ದುಡಿದಿದ್ದಾರೆ ಎಂದರು.ಶ್ರೇಷ್ಠ ಇಂಜಿನಿಯರ್ ಆಗಿ, ದೂರದೃಷ್ಟಿಯ ದಿವಾನರಾಗಿ, ಕನ್ನಡ ನಾಡಿನ ಶಿಕ್ಷಣ, ಸಾಹಿತ್ಯ, ಕೃಷಿ, ಕೈಗಾರಿಕೆ, ಆರೋಗ್ಯ, ವಾಣಿಜ್ಯ , ಆರ್ಥಿಕ, ನೀರಾವರಿ ಇತ್ಯಾದಿ ಅಸಂಖ್ಯಾತ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸಿದರು. ಮೈಸೂರು ವಿಶ್ವವಿದ್ಯಾಲಯ, ಕೃಷ್ಣರಾಜಸಾಗರ, ಭದ್ರಾವತಿ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಗಂಧದ ಎಣ್ಣೆ ಮತ್ತು ಸಾಬೂನು ಫ್ಯಾಕ್ಟರಿ, ಮೈಸೂರು ಚೇಂಬರ್ ಆಫ್ ಕಾಮರ್ಸ್, ಹೆಬ್ಬಾಳ ಕೃಷಿ ವಿಶ್ವವಿದ್ಯಾಲಯ, ತಾಂತ್ರಿಕ ಶಿಕ್ಷಣ ಸಂಸ್ಥೆಗಳು, ಜಲವಿದ್ಯುತ್ ಯೋಜನೆಗಳು ಮುಂತಾದ ಹಲವು ಯೋಜನೆಗಳನ್ನು ಅತ್ಯಂತ ವೈಜ್ಞಾನಿಕವಾಗಿ ನಾಡಿನ ಕಲ್ಯಾಣದ ಕಾಳಜಿಯಿಂದ ರೂಪಿಸಿ ಜಾರಿಗೊಳಿಸಿದ್ದರಿಂದ ಮೈಸೂರು ಅಭಿವೃದ್ಧಿಯ ಉತ್ತುಂಗ ಶಿಖರಕ್ಕೇರಿತು. ಇದನ್ನು ಕಂಡ ಮಹಾತ್ಮ ಗಾಂಧೀಜಿ ಅವರು ಮೈಸೂರು ನನ್ನ ಕನಸಿನ ರಾಮ ರಾಜ್ಯ ಹಾಗೂ ದೇಶದ ಹಲವು ರಾಜ್ಯಗಳಿಗೆ ಮಾದರಿ ರಾಜ್ಯವಾಗಿದೆ ಎಂದು ಪ್ರಶಂಶಿಸಿದ್ದರು ಎಂದು ತಿಳಿಸಿದರು.
ನೂರಾರು ವರ್ಷಗಳ ಹಿಂದೆ ಈ ಮಹನೀಯರು ಜಾರಿಗೊಳಿಸಿದ ಪ್ರತಿಯೊಂದು ಯೋಜನೆಯು ಅಂತರ ಶಿಸ್ತೀಯ ಸ್ವರೂಪದಲ್ಲಿ ಒಂದು ಕ್ಷೇತ್ರದ ಅಭಿವೃದ್ಧಿ ಮತ್ತೊಂದಕ್ಕೆ ಪೂರಕವಾಗಿ ಪ್ರಭಾವಿಸುತ್ತಾ ದುಪ್ಪಟ್ಟು ಅಭಿವೃದ್ಧಿಗೆ ಕಾರಣವಾಗಿವೆ. ಬಡತನ, ಅನಕ್ಷರತೆ, ಅಜ್ಞಾನ, ಆಲಸ್ಯ ಇವುಗಳು ಅಭಿವೃದ್ಧಿಯ ಕಡು ವೈರಿಗಳಾಗಿದ್ದು, ಇವುಗಳಿಗೆ ಹೆದರುವ ಅಗತ್ಯವಿಲ್ಲ. ಬದಲಾಗಿ ಇವುಗಳನ್ನು ಬದಲಾಯಿಸಲು ಸಾಧ್ಯವಿದೆ ಎಂಬ ಅಭಿಪ್ರಾಯ ಹೊಂದಿದ್ದ ಸರ್ ಎಂ ವಿ, ಸೂಕ್ತ ಯೋಜನೆಗಳು ಮತ್ತು ಕಾರ್ಯಕ್ರಮಗಳ ಮೂಲಕ ಶಿಕ್ಷಣ ಪಡೆದರೆ ಉಳಿದೆಲ್ಲ ಸಮಸ್ಯೆಗಳು ತಾನಾಗಿಯೇ ಪರಿಹಾರ ಗೊಳ್ಳುತ್ತವೆ ಎಂಬ ವಿಶ್ವಾಸವನ್ನು ಮೂಡಿಸುವಲ್ಲಿ ದೊಡ್ಡ ಕಾಯಕ ನಿರ್ವಹಿಸಿದ್ದಾರೆ ಎಂದು ಅಭಿಪ್ರಾಯಪಟ್ಟರು.ವಿಶ್ವೇಶ್ವರಯ್ಯನವರ ಜನ್ಮದಿನದ ಅಂಗವಾಗಿ ಆಧುನಿಕ ಮೈಸೂರು ನಿರ್ಮಾಣದಲ್ಲಿ ಸರ್ ಎಂವಿ ಅವರ ಕೊಡುಗೆಗಳು ಎಂಬ ವಿಷಯದ ಬಗೆಗಿನ ಪ್ರಬಂಧ ರಚನೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಪುಸ್ತಕ ಉಡುಗೊರೆ ನೀಡಲಾಯಿತು.
ಕಾರ್ಯಕ್ರಮಕ್ಕೂ ಮೊದಲು ಸಾಹಿತ್ಯ ಪರಿಷತ್ತಿನ ಕಾರ್ಯಕಾರಿ ಸದಸ್ಯರು ಮುದ್ದೇನಹಳ್ಳಿಯಲ್ಲಿ ಸರ್ ಎಂ ವಿ ಅವರ ಸಮಾಧಿಗೆ ಭೇಟಿ ನೀಡಿ ಗೌರವ ಸಲ್ಲಿಸಿದರು.ಕಾರ್ಯಕ್ರಮದಲ್ಲಿ ಕೆಪಿಎಸ್ ಶಾಲೆಯ ಸಮಿತಿಯ ಸದಸ್ಯ ಎಂ.ರಾಮಕೃಷ್ಣ, ಪ್ರಾಂಶುಪಾಲ ಗೋವಿಂದಪ್ಪ, ಕಸಾಪ ತಾಲೂಕು ಅಧ್ಯಕ್ಷ ಯಲುವಹಳ್ಳಿ ಸೊಣ್ಣೆಗೌಡ, ಜಿಲ್ಲಾ ಕೋಶಾಧ್ಯಕ್ಷ ಅಮೃತ್ ಕುಮಾರ್, ಕೆಪಿಎಸ್ ಶಾಲಾ ಸಮುಚ್ಛಯದ ಉಪಾಧ್ಯಕ್ಷ ಪೆಮ್ಮರೆಡ್ಡಿ, ಸರ್ಕಾರಿ ಕೈಗಾರಿಕಾ ತರಬೇತಿ ಕಾಲೇಜಿನ ಅಧ್ಯಾಪಕ ವರ್ಗ, ನಿವೃತ್ತ ಮುಖ್ಯ ಶಿಕ್ಷಕ ಕೃಷ್ಣಮೂರ್ತಿ, ಶ್ರೀಧರ್, ಗೋವಿಂದಪ್ಪ, ರಜತಾದ್ರಿ, ಪದ್ಮಜಾ ಅಜಿತ್ ಪ್ರಸಾದ್, ಉಪ ಪ್ರಾಂಶುಪಾಲ ಆನಂದ್ ಕುಮಾರ್, ಅಧ್ಯಾಪಕ ನರೇಶ್ ಹಾಗೂ ಮೂರು ಶಾಲೆಗಳ ವಿದ್ಯಾರ್ಥಿಗಳು ಇದ್ದರು.