ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದು, ದಾಖಲೆ ಒದಗಿಸದ 7086 ಮತದಾರರಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಶೇ.50ರಷ್ಟು ವಿಚಾರಣೆ ಪೂರ್ಣಗೊಳಿಸಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದ್ದಾರೆ.
- ಶೇ.50ರಷ್ಟು ವಿಚಾರಣೆ ಪೂರ್ಣ । ಹಕ್ಕು-ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶ । ಐವರು ನೇಪಾಳಿ ಪ್ರಜೆಗಳೂ ಪತ್ತೆ
- - -ಕನ್ನಡಪ್ರಭ ವಾರ್ತೆ ದಾವಣಗೆರೆ
ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ನಡೆಯುತ್ತಿದ್ದು, ದಾಖಲೆ ಒದಗಿಸದ 7086 ಮತದಾರರಿಗೆ ನೋಟಿಸ್ ನೀಡಿದ್ದು, ಇದರಲ್ಲಿ ಶೇ.50ರಷ್ಟು ವಿಚಾರಣೆ ಪೂರ್ಣಗೊಳಿಸಿದ್ದು, ಹಕ್ಕು ಮತ್ತು ಆಕ್ಷೇಪಣೆ ಸಲ್ಲಿಸಲು ಸೆ.23ರವರೆಗೆ ಅವಕಾಶ ಇದೆ ಎಂದು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ತಿಳಿಸಿದರು.ನಗರದ ಜಿಲ್ಲಾಡಳಿತ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕರಡು ಮತದಾರರ ಪಟ್ಟಿಯನ್ವರ 1808 ಮತಗಟ್ಟೆಗಳ ವ್ಯಾಪ್ತಿಯಲ್ಲಿ 1298219 ಮತದಾರರಿದ್ದು, ಎಸ್ಐಆರ್ ವೇಳೆ ದಾಖಲೆಗಳನ್ನು ಒದಗಿಸದ 7086 ಮತದಾರರಿಗೆ ಪರಿಶೀಲನೆಗಾಗಿ ನೋಟಿಸ್‌ಗಳನ್ನು ಜಾರಿಗೊಳಿಸಿದ್ದು, ಶೇ.100 ನೋಟಿಸ್ ಸಂಬಂಧಿಸಿದವರಿಗೆ ತಲುಪಿವೆ ಎಂದರು.
5461 ಜನರ ವಿಚಾರಣೆ:ನೋಟಿಸ್ ತಲುಪಿದ ಹಿನ್ನೆಲೆ ಈವರೆಗೆ 5461 ಜನರಿಗೆ ವಿಚಾರಣೆ ಪ್ರಕ್ರಿಯೆ ಪೂರ್ಣಗೊಳಿಸಲಾಗಿದೆ. ಅರ್ಹರಿಗೆ ದಾಖಲೆ ಸಲ್ಲಿಸಲು ಮತದಾರರಿಗೆ ಮೊದಲ ಮತ್ತು ಎರಡನೇ ವಿಚಾರಣೆಯ ಅವಕಾಶ ಕಲ್ಪಿಸಿದೆ. ಈವರೆಗೆ ಕರಡು ಪಟ್ಟಿ ನಂತರ 15 ಜನ ಸಾವನ್ನಪ್ಪಿದ್ದು, ಒಟ್ಟು 18 ಜನರ ಹೆಸರುಗಳು ಮಾತ್ರ ತಿರಸ್ಕರಿಸಲಾಗಿದೆ. ಒಬ್ಬರು ವಿದೇಶದಲ್ಲಿದ್ದು, ಬರಲು ಸಾಧ್ಯವಾಗದೇ ಇರುವುದರಿಂದ ಮತ್ತು ಮತ್ತೊಬ್ಬರು ಕಾರಾಗೃಹದಲ್ಲಿ ಇರುವುದರಿಂದ ಈ ಹೆಸರುಗಳನ್ನು ಮತದಾರರ ಪಟ್ಟಿಯಿಂದ ತಿರಸ್ಕಾರ ಮಾಡಲಾಗಿದೆ ಎಂದು ಹೇಳಿದರು.
ಮತಪಟ್ಟಿಯಿಂದ ಕೈಬಿಡುವ ಪ್ರಶ್ನೆ ಇಲ್ಲ:ಆದರೆ, ಚುನಾವಣಾ ಆಯೋಗವು ಮತದಾರರು ವಿದೇಶದಲ್ಲಿದ್ದರೆ, ಅನಾರೋಗ್ಯ, ವಯೋವೃದ್ಧರಾಗಿದ್ದಲ್ಲಿ ಅಂತಹವರ ಕುಟುಂಬ ಸದಸ್ಯರು ವಿಚಾರಣೆಗೆ ಹಾಜರಾಗಿ, ದಾಖಲೆಗಳನ್ನು ಸಲ್ಲಿಸಲು ಅವಕಾಶ ಕಲ್ಪಿಸಿದೆ. ಇದರಿಂದ ವಿಚಾರಣೆಗೆ ಹಾಜರಾಗಲು ಸಡಿಲಿಕೆ ಮತ್ತು ಅವಕಾಶಗಳು ಸಿಕ್ಕಿವೆ. ಆದರೆ, ಯಾವುದೇ ಅರ್ಹ ಮತದಾರರನ್ನು ಯಾವುದೇ ಕಾರಣಗಳಿಲ್ಲದೇ ಮತಪಟ್ಟಿಯಿಂದ ಕೈಬಿಡುವ ಪ್ರಶ್ನೆಯೇ ಇಲ್ಲ ಎಂದು ಡಿಸಿ ಸ್ಪಷ್ಟಪಡಿಸಿದರು.
ನೇಪಾಳಿ ಪ್ರಜೆಗಳು ಪತ್ತೆ:ದಾವಣಗೆರೆ ಜಿಲ್ಲೆಯಲ್ಲಿ ಮತದಾರರ ಪರಿಶೀಲನೆ ವೇಳೆ ನೇಪಾಳ ದೇಶದ ಪ್ರಜೆಗಳು ಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಐದು ಜನ ನೇಪಾಳಿ ಪ್ರಜೆಗಳು ಕಂಡುಬಂದಿದ್ದು, ಅಂತಹವರ ವಿವರಗಳನ್ನು ಚುನಾವಣಾ ಆಯೋಗ, ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ಒಳಾಡಳಿತ ಇಲಾಖೆಗೆ ಅಗತ್ಯ ಕ್ರಮಕ್ಕಾಗಿ ರವಾನಿಸಲಾಗಿದೆ. ಇನ್ನು ಒಂದು ವಾರದಲ್ಲಿ ಶೇ.90ರಷ್ಟು ವಿಚಾರಣೆಯೂ ಪೂರ್ಣಗೊಳ್ಳಲಿದೆ ಎಂದು ಮಾಹಿತಿ ನೀಡಿದರು.
ನಮೂನೆ-7 ಸಲ್ಲಿಕೆ ಕಡ್ಡಾಯ:ಕರಡು ಪಟ್ಟಿಯನ್ನು ಎಲ್ಲ ಬೂತ್‌ಮಟ್ಟದ ಏಜೆಂಟರಿಗೆ ನೀಡಿದೆ. ಯಾವುದೇ ಕಾರಣಕ್ಕೂ ಸ್ವಯಂಪ್ರೇರಿತವಾಗಿ ಮತದಾರರನ್ನು ಪಟ್ಟಿಯಿಂದ ಡಿಲೀಟ್ ಮಾಡುವ ಅಧಿಕಾರವು ಯಾವುದೇ ಅಧಿಕಾರಿಗಳಿಗೆ ಇರುವುದಿಲ್ಲ. ಕೇವಲ ಮೃತಪಟ್ಟವರು ಮತ್ತು ದ್ವಿಪ್ರತಿಯಾದ ಹೆಸರನ್ನು ಪರಿಶೀಲಿಸಿ, ಕೈ ಬಿಡಬಹುದಷ್ಟೇ. ಮತದಾರರು ಬೇರೆಡೆ ವಾಸವಿದ್ದಾರೆಂಬ ಕಾರಣಕ್ಕೆ ಅಧಿಕಾರಿಗಳು ತಾವಾಗಿಯೇ ಹೆಸರು ರದ್ದುಪಡಿಸಲು ಬರುವುದಿಲ್ಲ. ಅದಕ್ಕೆ ಮತದಾರರಿಂದಲೇ ನಮೂನೆ-7 ಸಲ್ಲಿಕೆ ಆಗುವುದು ಕಡ್ಡಾಯ ಎಂದು ಉತ್ತರ ಮತ್ತು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಸಾವಿರಾರು ಮತದಾರರ ಹೆಸರನ್ನು ಕೈಬಿಡುವಂತೆ ರಾಜಕೀಯ ಪಕ್ಷಗಳು ಒತ್ತಾಯಿಸುತ್ತಿರುವ ಕುರಿತ ಪ್ರಶ್ನೆಗೆ ಅವರು ಪ್ರತಿಕ್ರಿಯಿಸಿದರು.
ಮತದಾರರ ಪಟ್ಟಿ ಪರಿಷ್ಕರಣೆ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ನಿಯಮಾನುಸಾರ, ನಿಷ್ಪಕ್ಷಪಾತವಾಗಿ ಹಾಗೂ ಪಾರದರ್ಶಕವಾಗಿ ನಡೆಸಲಾಗುತ್ತಿದೆ. ಸಾರ್ವಜನಿಕರು, ರಾಜಕೀಯ ಪಕ್ಷಗಳ ಮುಖಂಡರು ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಯೂ ಆಗಿರುವ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರ ಸ್ವಾಮಿ ಮನವಿ ಮಾಡಿದರು.ಸುದ್ದಿಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಶೀಲವಂತ ಶಿವಕುಮಾರ, ವಿವಿಧ ಪಕ್ಷಗಳ ಮುಖಂಡರು ಇದ್ದರು.
- - -(ಕೋಟ್)
ಆಗ್ನೇಯ ಪದವೀಧರ ಮತಕ್ಷೇತ್ರದ ಕರಡು ಮತದಾರರ ಪಟ್ಟಿಯಲ್ಲಿ ದಾವಣಗೆರೆ ಜಿಲ್ಲೆಯಲ್ಲಿ 24,281 ಮತದಾರರಿದ್ದರು. ಸದ್ಯ ಈ ಸಂಖ್ಯೆ 29,739ಕ್ಕೆ ಏರಿಕೆಯಾಗಿದೆ. ಇನ್ನೂ 401 ಹೊಸ ಅರ್ಜಿಗಳು ಪರಿಶೀಲನೆಗೆ ಬಾಕಿ ಇವೆ. ಮತದಾರರ ಪಟ್ಟಿ ಸೇರ್ಪಡೆಯು ನಿರಂತರ ಪ್ರಕ್ರಿಯೆಯಾಗಿದ್ದು, ಅರ್ಹ ಪದವೀಧರರು ತಕ್ಷಣವೇ ಅರ್ಜಿಯನ್ನು ಸಲ್ಲಿಸಿ ಮತದಾರರಾಗಿ ನೋಂದಾಯಿಸಿಕೊಳ್ಳಬೇಕು.- ಜಿ.ಎಂ.ಗಂಗಾಧರ ಸ್ವಾಮಿ, ಡಿಸಿ, ಚುನಾವಣಾಧಿಕಾರಿ.
- - --21ಕೆಡಿವಿಜಿ35: ಜಿ.ಎಂ.ಗಂಗಾಧರ ಸ್ವಾಮಿ