ಕನ್ನಡಪ್ರಭ ವಾರ್ತೆ ಬೆಂಗಳೂರು
ನಗರದ ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನೇರವಾಗಿ ಕ್ಷೇತ್ರದ ಶಾಸಕರ ಸೂಚನೆಯ ಮೇರೆಗೆ ಅಕ್ರಮವಾಗಿ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ನಡೆಯುತ್ತಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷರೂ ಆಗಿರುವ ಕೇಂದ್ರ ಕೈಗಾರಿಕಾ ಸಚಿವ ಎಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.ಶುಕ್ರವಾರ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ನಿನ್ನೆ ರಾಮನಗರದಲ್ಲಿ ಸಮುದಾಯ ಭವನದಲ್ಲಿ ಎಸ್‌ಐಆರ್ ಜಾತ್ರೆ ಮಾಡುತ್ತಿರುವ ವಿಡಿಯೋ ಬಿಡುಗಡೆ ಮಾಡಿದ್ದೆ. ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದ ನಡೆಯುತ್ತಿರುವ ಎಸ್‌ಐಆರ್ ಅಕ್ರಮಗಳ ವಿಡಿಯೋ ಬಿಡುಗಡೆ ಮಾಡುವುದಾಗಿ ಮಾಧ್ಯಮಗಳ ಎದುರು ವಿಡಿಯೋ ಪ್ರದರ್ಶಿಸಿದರು.
ಈ ಕ್ಷೇತ್ರದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಮತ್ತು ಎಸ್‌ಐಆರ್ ಸಿಬ್ಬಂದಿ ಪರಸ್ಪರ ಶಾಮೀಲಾಗಿ ಪರಿಷ್ಕರಣೆ ಸಂಪೂರ್ಣವಾಗಿ ತಿರುಚುತ್ತಿದ್ದಾರೆ. ಶಾಸಕರ ಫೋಟೋ ಇರುವ ಪುಸ್ತಕಗಳು ಹಾಗೂ ಅವರೇ ಕೊಟ್ಟ ಮತದಾರರ ಪಟ್ಟಿ ಇರಿಸಿಕೊಂಡು ಅಧಿಕಾರಿಗಳು ಎಸ್‌ಐಆರ್ ಮಾಡುತ್ತಿದ್ದಾರೆ. ಇದು ಯಾವ ಸೀಮೆಯ ಎಸ್‌ಐಆರ್ ಎಂದು ಖಾರವಾಗಿ ಪ್ರಶ್ನಿಸಿದರು.ಈ ಸರ್ಕಾರವು ಹೀಗೆಯೇ ಎಸ್‌ಐಆರ್ ಮಾಡಬೇಕು ಎಂದು ಎಲ್ಲಾ ಅಧಿಕಾರಿಗಳು ತಯಾರು ಮಾಡಿ ಕಳಿಸಿದೆ. ಇವತ್ತು ಯಶವಂತಪುರ ವಿಧಾನಸಭಾ ಕ್ಷೇತ್ರದಲ್ಲಿ ನಿಯಮ ಬಾಹಿರವಾಗಿ ಎಸ್‌ಐಆರ್ ನಡೆಸುತ್ತಿದ್ದ ಅಧಿಕಾರಿಯನ್ನು ನಮ್ಮ ಕಾರ್ಯಕರ್ತರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಆ ಅಧಿಕಾರಿ ನಮ್ಮ ಕಾರ್ಯಕರ್ತರಲ್ಲಿ ಸಾರಿ ಕೇಳಿದ್ದಾನೆ. ಮತ್ತೊಬ್ಬ ಅಧಿಕಾರಿ ವಿಡಿಯೊ ಮಾಡಬೇಡಿ ಎಂದು ಹೇಳುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಜೆಡಿಎಸ್, ಬಿಜೆಪಿ ಸಮ್ಮಿಶ್ರ ಸರ್ಕಾರ ಇದ್ದಾಗ ಈಗಿನ ಯಶವಂತಪುರ ಶಾಸಕರು ರಾತ್ರೋರಾತ್ರಿ ಚೆನ್ನೈಗೆ ಕದ್ದು ಹೋಗಿ ತಮ್ಮ ಕ್ಷೇತ್ರ ಅಭಿವೃದ್ಧಿ ಆಗಬೇಕು ಎಂದು ಹೇಳಿ ಬಿಜೆಪಿ ಸೇರಿಕೊಂಡರು. ಅಲ್ಲಿ ಮೂರು ವರ್ಷ ಸಚಿವರಾಗಿ ಅಧಿಕಾರ ಅನುಭವಿಸಿದ ಮೇಲೆ ಬಿಜೆಪಿಯನ್ನು ಬಿಟ್ಟು ಕಾಂಗ್ರೆಸ್ ಕಡೆ ವಾಲಿದ್ದಾರೆ. ಇದು ಯಾವ ರೀತಿಯ ಅಭಿವೃದ್ಧಿ ರಾಜಕೀಯವೋ ನನಗೆ ಗೊತ್ತಿಲ್ಲ ಎಂದು ಶಾಸಕ ಎಸ್.ಟಿ.ಸೋಮಶೇಖರ್ ಕುರಿತ ಪ್ರಶ್ನೆಯೊಂದಕ್ಕೆ ಕುಮಾರಸ್ವಾಮಿ ವ್ಯಂಗ್ಯವಾಗಿ ಪ್ರತಿಕ್ರಿಯಿಸಿದರು.