ಕನ್ನಡಪ್ರಭ ವಾರ್ತೆ ಬೆಂಗಳೂರು

ನಗರದಲ್ಲಿ ಫುಟ್‌ಪಾತ್ ಅತಿಕ್ರಮಣ ತೆರವು ಕಾರ್ಯಾಚರಣೆ ಮೂರನೇ ದಿನವಾದ ಶುಕ್ರವಾರವೂ ಮುಂದುವರೆಯಿತು. ಕೆಂಪೇಗೌಡ ರಸ್ತೆ ಸೇರಿದಂತೆ ನಗರದ ಅನೇಕ ಕಡೆ ಹತ್ತಾರು ಜೆಸಿಬಿ ಯಂತ್ರಗಳನ್ನು ಬಳಸಿ ಒತ್ತುವರಿ ತೆರವುಗೊಳಿಸಲಾಗಿದೆ. ಕಾರ್ಯಾಚರಣೆ ವೇಳೆ ಕೆಲವೆಡೆ ವಿರೋಧ ವ್ಯಕ್ತವಾದರೆ, ಮತ್ತೆ ಕೆಲವು ಪ್ರದೇಶಗಳಲ್ಲಿ ಒತ್ತುವರಿ ತೆರವಾಗಿದ್ದ ಜಾಗಕ್ಕೆ ಬೀದಿ ವ್ಯಾಪಾರಿಗಳು ವಾಪಸ್ ಬಂದಿರುವುದು ಕಂಡು ಬಂತು.

ಫುಟ್‌ಪಾತ್ ಮೇಲೆ ಕಟ್ಟಡ ತ್ಯಾಜ್ಯ ಹಾಕಿರುವುದು ಸೇರಿದಂತೆ ವಿವಿಧ ರೀತಿಯ ನಿಯಮಗಳ ಉಲ್ಲಂಘನೆ ಸಂಬಂಧಿಸಿದಂತೆ ದಂಡ ಪ್ರಯೋಗಿಸುತ್ತಿರುವ ಜಿಬಿಎ, ₹5 ಸಾವಿರದಿಂದ 1 ಲಕ್ಷದರೆಗೆ ದಂಡ ವಿಧಿಸಿದೆ. ಪಾದಚಾರಿ ಮಾರ್ಗ ಒತ್ತುವರಿ ಮಾಡಿಕೊಂಡು ಇರಿಸಿದ್ದ ವಸ್ತುಗಳನ್ನು ಟ್ರ್ಯಾಕ್ಟರ್, ಟಿಪ್ಪರ್‌ಗಳಲ್ಲಿ ಸಾಗಣೆ ಮಾಡಲಾಗಿದೆ. ದಕ್ಷಿಣ ಪಾಲಿಕೆ ವ್ಯಾಪ್ತಿಯ ಜಯನಗರ, ಬೇಗೂರು, ಅಂಜನಾಪುರ, ಪದ್ಮನಾಭನಗರ, ಬಿಟಿಎಂ ಲೇಔಟ್ ಪುಟ್ಟೇನಹಳ್ಳಿ ಸೇರಿದಂತೆ 11.35 ಕಿ.ಮೀ. ಪಾದಚಾರಿ ಮಾರ್ಗ ಒತ್ತುವರಿ ತೆರವುಗೊಳಿಸಲಾಗಿದೆ.

ಪಶ್ಚಿಮ ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 16.5 ಕಿ.ಮೀ ಒತ್ತುವರೆ ತೆರವುಗೊಳಿಸಲಾಗಿದೆ. 40ಕ್ಕೂ ಹೆಚ್ಚು ಪೆಟ್ಟಿ ಅಂಗಡಿಗಳು, 70 ತಳ್ಳುವ ಗಾಡಿಗಳು, ಸುಮಾರು 80ಕ್ಕೂ ಹೆಚ್ಚು ಜಾಹಿರಾತು, ನಾಮಫಲಕ ಹಾಗೂ ಸುಮಾರು 30 ಟನ್‌ ನಷ್ಟು ಕಟ್ಟಡ ತ್ಯಾಜ್ಯ,ತ್ಯಾಜ್ಯ ತೆರವುಗೊಳಿಸಲಾಗಿದೆ. ಮಾಗಡಿ ಮುಖ್ಯ ರಸ್ತೆ, ಕೆಂಗೇರಿಯ ಹೊಯ್ಸಳ ಸರ್ಕಲ್, ವಿಜಯನಗರ, ವೆಸ್ಟ್ ಆಫ್ ಕಾರ್ಡ್ ರಸ್ತೆ, ಸೌತ್ ಎಂಡ್ ಸರ್ಕಲ್, ರಾಜಾಜಿನಗರ, ರಾಜರಾಜೇಶ್ವರಿ ನಗರ ಮತ್ತಿತರ ಕಡೆ ತೆರವು ಕಾರ್ಯಾಚರಣೆ ನಡೆಸಲಾಗಿದೆ.

ಕೇಂದ್ರ ಪಾಲಿಕೆ ವ್ಯಾಪ್ತಿಯಲ್ಲಿ 12 ರಸ್ತೆಗಳಲ್ಲಿ 10.95 ಕಿ.ಮೀ ಒತ್ತುವರಿ ತೆರವು ಮಾಡಲಾಗಿದೆ. 64 ಪೆಟ್ಟಿ ಅಂಗಡಿಗಳು, 107 ತಳ್ಳುವ ಗಾಡಿಗಳು, 18 ಮೇಲ್ಛಾವಣಿ, 11 ಶೆಡ್‌ಗಳು, 8 ರ‍್ಯಾಂಪ್ಸ್, ಮೆಟ್ಟಿಲುಗಳು, 10 ಆಸನಗಳು, 10 ದ್ವಿಚಕ್ರ ಹಾಗೂ ನಾಲ್ಕು ಚಕ್ರದ ವಾಹನಗಳು, 6 ಕೆನೋಪಿ ಹಾಗೂ 42.5 ಟನ್ ಕಟ್ಟಡ ತ್ಯಾಜ್ಯ ಇತರೆ ತ್ಯಾಜ್ಯಗಳ ತೆರವುಗೊಳಿಸಲಾಗಿದೆ. ಉತ್ತರ ಪಾಲಿಕೆ ವ್ಯಾಪ್ತಿಯ 14.10 ಕಿ.ಮೀ. ಉದ್ದದ ಫುಟ್‌ಪಾತ್ ಒತ್ತುವರಿ ತೆರವು ಮಾಡಲಾಗಿದೆ. 33 ಅಂಗಡಿಗಳು,ಬೀದಿ ವ್ಯಾಪಾರಿಗಳು, 52 ತಳ್ಳುವ ಗಾಡಿಗಳು, 121 ಶೀಟ್, ಮೇಲ್ಛಾವಣಿ, ಕೆನೋಪಿಗಳು, 109 ಮೆಟ್ಟಿಲು, ರ್‍ಯಾಂಪ್‌ಗಳು, 141 ಜಾಹೀರಾತು ಫಲಕಗಳು, 2 ತಾತ್ಕಾಲಿಕ ಶೆಡ್‌ಗಳು ಹಾಗೂ 46.50 ಟನ್ ತ್ಯಾಜ್ಯ ತೆರವುಗೊಳಿಸಲಾಗಿದೆ. ಪೂರ್ವ ನಗರ ಪಾಲಿಕೆ ವ್ಯಾಪ್ತಿಯ 8.55 ಕಿ.ಮೀ ಫುಟ್‌ಪಾತ್‌ಗಳಲ್ಲಿ ತೆರವು ಕಾರ್ಯಾಚರಣೆ ನಡೆಸಿ 43 ಟನ್‌ನಷ್ಟು ತ್ಯಾಜ್ಯವನ್ನು ಸಾಗಿಸಲಾಗಿದೆ.


ಏಕಾಏಕಿ ತೆರವು: ಆರೋಪ

ನಗರದ ಮೈಸೂರು ಬ್ಯಾಂಕ್ ವೃತ್ತ, ಕೆ.ಜಿ ರಸ್ತೆಯಲ್ಲಿ ಪೆನ್ನುಗಳು, ಮೊಬೈಲ್ ಫೋನ್ ಕವರ್, ಚಪ್ಪಲಿ, ಶೇಂಗಾ, ಕೈವಸ್ತ್ರ, ಮಾವು, ಹಣ್ಣು, ತರಕಾರಿ ಮಾರಾಟ ಮಾಡುತ್ತಿರುವವರನ್ನು ಜಾಗ ಖಾಲಿ ಮಾಡುವಂತೆ ಅಧಿಕಾರಿಗಳು ಶುಕ್ರವಾರ ಸೂಚನೆ ನೀಡಿದರು. ಈ ಬಗ್ಗೆ ಬೇಸರ ವ್ಯಕ್ತಪಡಿಸಿದ ವಿಕಲಚೇತನ ವ್ಯಾಪಾರಿಯೊಬ್ಬರು, ಅನೇಕ ವರ್ಷಗಳಿಂದ ವ್ಯಾಪಾರ ಮಾಡಿ ಜೀವನ ಸಾಗಿಸುತ್ತಿದ್ದೆ. ಜನರ ಓಡಾಟಕ್ಕೆ ಯಾವುದೇ ತೊಂದರೆ ಮಾಡಿರಲಿಲ್ಲ. ಈಗ ಇಲ್ಲಿ ಏಕಾಏಕಿ ವ್ಯಾಪಾರ ಮಾಡುವುದಕ್ಕೆ ನಿರ್ಬಂಧಿಸುತ್ತಿದ್ದಾರೆ. ಈಗ ಎಲ್ಲಿಗೆ ಹೋಗಬೇಕು? ಎಂದು ಪ್ರಶ್ನಿಸಿದರು.ನಂದಿನಿ ಮಳಿಗೆ ಒಡೆದು

ಹಾಕಿದ್ದಕ್ಕೆ ಮಹಿಳೆ ಕಣ್ಣೀರು

ಬನಶಂಕರಿ ಮೆಟ್ರೋ ನಿಲ್ದಾಣ ಬಳಿಯ ನಂದಿನಿ ಮಳಿಗೆ ತೆರವು ಮಾಡಿದಕ್ಕೆ ಮಹಿಳಾ ಮಾಲೀಕರು ಭಾವುಕರಾಗಿ ಕಣ್ಣೀರು ಹಾಕಿದರು. ಈ ವೇಳೆ ಮಾತನಾಡಿದ ಮಾಲೀಕರಾದ ಸುಮಿತ್ರಾ, ಜೆಸಿಬಿ ಬರುವ ಸ್ವಲ್ಪ ಹೊತ್ತಿನ ಮುಂಚೆಯಷ್ಟೇ ಅಧಿಕಾರಿಗಳು ಬಂದು ಎಲ್ಲಾ ವಸ್ತುಗಳನ್ನು ತೆಗೆದುಕೊಂಡು ಹೋಗಿ ಎಂದರು. ಸ್ವಲ್ಪ ಸಮಯದಲ್ಲೇ ಹೇಗೆ ತೆಗೆಯಲು ಸಾಧ್ಯ. ಸ್ವಲ್ಪ ಸಮಯ ಕೊಡಿ ಎಂದು ಕೇಳಿದೆ. ಆದರೂ, ಏಕಾಏಕಿ ಬಂದು ತೆರವು ಮಾಡಿದರು ಎಂದು ಕಣ್ಣೀರಿಟ್ಟರು. ನಗರದ ಎಲ್ಲಾ ಕಡೆ ನಂದಿನಿ ಮಳಿಗೆಗಳು ಫುಟ್‌ಪಾತ್ ಮೇಲೆ ಇವೆ. ನಾನೊಬ್ಬಳೇ ಫುಟ್‌ಪಾತ್ ಮೇಲೆ ಇಟ್ಟಿದ್ದೇನೆಯೇ? ನಂದಿನಿ ಮಳಿಗೆ ಮುಟ್ಟಬೇಡಿ ಎಂದು ಡಿ.ಕೆ.ಸುರೇಶ್ ಸೂಚಿಸಿದ್ದಾರೆ ಎಂದು ನಂದಿನಿ ಸಂಸ್ಥೆಯವರು ನನಗೆ ಹೇಳಿದ್ದರು. ಆದರೂ, ತೆರವುಗೊಳಿಸಿದ್ದಾರೆ. ಇಲ್ಲಿನ ವ್ಯಾಪಾರಿಗಳಿಂದ ಪೊಲೀಸರು ಲಂಚ ಪಡೆಯುತ್ತಾರೆ ಎಂದು ಸುಮಿತ್ರಾ ದೂರಿದರು. ಇದೇ ರೀತಿ ವಿಜಯನಗರ ಸೇರಿದಂತೆ ನಗರದ ಹಲವೆಡೆ ಒತ್ತುವರಿ ತೆರವು ಕಾರ್ಯಾಚರಣೆ ವೇಳೆ ವ್ಯಾಪರಿಗಳು ಕಣ್ಣೀರಿಟ್ಟರು. ವ್ಯಾಪಾರದ ಸ್ಥಳಗಳನ್ನು ಸ್ವಚ್ಛವಾಗಿರಿಸುತ್ತೇವೆ. ಅವಕಾಶ ಮಾಡಿಕೊಡಿ ಎಂದು ಬೇಡಿಕೊಂಡರು.ತೆರವು ಸ್ಥಳಕ್ಕೆ ಪುನಃ

ಬಂದ ವ್ಯಾಪಾರಿಗಳು!

ಎರಡು ದಿನಗಳ ಹಿಂದೆ ಒತ್ತುವರಿ ತೆರವು ಆಗಿದ್ದ ಜೆ.ಸಿ ನಗರದ ಮುನಿರೆಡ್ಡಿ ಪಾಳ್ಯ ರಸ್ತೆಯಲ್ಲಿ ಬೀದಿ ಬದಿ ವ್ಯಾಪಾರಿಗಳು ಮತ್ತೆ ಬಂದಿದ್ದಾರೆ. ಫುಟ್‌ಪಾತ್ ಮೇಲೆ ತರಕಾರಿ ಇಟ್ಟುಕೊಂಡು, ತಳ್ಳುಗಾಡಿ ನಿಲ್ಲಿಸಿಕೊಂಡು ವ್ಯಾಪಾರ ಮಾಡುತ್ತಿರುವ ವಿಡಿಯೋ ಪೋಸ್ಟ್ ಮಾಡಿರುವ ದೇವರಾಜ್ ಎಂಬುವರು, ಎರಡೇ ದಿನಕ್ಕೆ ವ್ಯಾಪಾರಿಗಳ ಮತ್ತೆ ಫುಟ್‌ಪಾತ್‌ಗೆ ಬಂದಿದ್ದಾರೆ. ಇದಕ್ಕೆ ಪರಿಹಾರ ಏನು? ಎಂದು ಪ್ರಶ್ನಿಸಿದ್ದಾರೆ. ಇದೇ ರೀತಿ ನಗರದ ಕೆಲವು ಭಾಗಗಳಲ್ಲಿ ವ್ಯಾಪಾರಿಗಳು ಪುನಃ ಪುಟ್‌ಪಾತ್ ವ್ಯಾಪಾರ ಆರಂಭಿಸಿರುವ ದೂರುಗಳು ಕೇಳಿ ಬಂದಿವೆ.ತ್ಯಾಜ್ಯ ಸುರಿದವರಿಗೆ ₹1 ಲಕ್ಷ ದಂಡ

ಜಯನಗರ 1ನೇ ಬ್ಲಾಕ್‌ನಲ್ಲಿ ಕಟ್ಟಡ ನಿರ್ಮಾಣ ತ್ಯಾಜ್ಯವನ್ನು ಫುಟ್‌ಪಾತ್ ಮೇಲೆ ಸುರಿದು ಜನರ ಓಡಾಟಕ್ಕೆ ತೊಂದರೆ ಉಂಟು ಮಾಡಿದ ಕಟ್ಟಡ ಮಾಲೀಕರಿಗೆ 1 ಲಕ್ಷ ರು. ದಂಡವನ್ನು ಜಿಬಿಎ ಮಾರ್ಷಲ್‌ಗಳು ವಿಧಿಸಿದ್ದಾರೆ. ಅದೇ ರೀತಿ ಮತ್ತೆರೆಡು ಕಟ್ಟಡ ಮಾಲೀಕರಿಗೆ ತಲಾ 20,000 ರು. ವಿಧಿಸಲಾಗಿದೆ. ಮತ್ತೊಂದು ಪ್ರಕರಣದಲ್ಲಿ ಹೊಟೇಲ್ ಗ್ರಾಹಕರು ಕುಳಿತುಕೊಳ್ಳಲು ಮರದ ಸುತ್ತ ಕಾಂಕ್ರಿಟ್ ಬೆಂಚ್ ಹಾಕಿದ್ದ ಹೊಟೇಲ್ ಮಾಲೀಕರಿಗೆ 5,000 ರು. ದಂಡ ವಿಧಿಸಲಾಗಿದೆ.