ಏಕೋಪಾಧ್ಯಾಯ ಶಾಲೆಗಳಲ್ಲಿ ಅಡುಗೆ ಸಿಬ್ಬಂದ್ದಿಯೇ ಉಸ್ತುವಾರಿ । 259 ಶಿಕ್ಷಕರು ಬಿಎಲ್ಒಗಳಾಗಿ ನೇಮಕ

ಅರುಣ್ ಕುಮಾರ್ ಎಸ್.ವಿ.

ಕನ್ನಡಪ್ರಭ ವಾರ್ತೆ ಗೌರಿಬಿದನೂರುತಾಲೂಕಿನಲ್ಲಿ ಎಸ್ಐಆರ್ ಪರಿಣಾಮ ಕೆಲವು ಏಕೋಪಾಧ್ಯಾಯ ಶಾಲೆಗಳಲ್ಲಿ ಅಡುಗೆ ಸಿಬ್ಬಂದಿಯೇ ಶಿಕ್ಷಕರಂತೆ ಕೆಲಸ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಪೋಷಕರು ಬೇಸರ ವ್ಯಕ್ತಪಡಿಸುತ್ತಿದ್ದಾರೆ.ಕೇಂದ್ರ ಸರ್ಕಾರದ ಮಹತ್ವದ ಎಸ್ಐಆರ್ ಪ್ರಕ್ರಿಯೆಗೆ ತಾಲೂಕಿನಲ್ಲಿರುವ 259 ಮತಗಟ್ಟೆಗಳನ್ನು ಏರ್ಪಾಟು ಮಾಡಲಾಗಿದೆ. ಇದಕ್ಕಾಗಿ 259ಶಿಕ್ಷಕರನ್ನು ಬಿಎಲ್ಒ ಗಳಾಗಿ ನೇಮಕ ಮಾಡಲಾಗಿದೆ, ಇದರಿಂದ ಶಿಕ್ಷಕರು ಪಾಠ ಮಾಡುವ ಸಮಯದಲ್ಲಿ ಎಸ್ಐಆರ್ ಗೆ ಅನಿವಾರ್ಯವಾಗಿ ಹೋಗಬೇಕಾಗಿದೆ, ಇದರ ಪರಿಣಾಮ ವಿದ್ಯಾರ್ಥಿಗಳು ಪಾಠ ಪ್ರವಚನಗಳಿಂದ ವಂಚಿತರಾಗುತ್ತಿದ್ದಾರೆ, ಶಿಕ್ಷಕರ ಜೊತೆಗೆ 110ಜನ ಅಂಗನವಾಡಿ ಶಿಕ್ಷಕರನ್ನು ಸಹ ನೇಮಿಸಿಕೊಳ್ಳಲಾಗಿದೆ, ಇದು ವಿದ್ಯಾರ್ಥಿಗಳ ಶೈಕ್ಷಣಿಕ ಬದುಕಿನ ಮೇಲೆ ಪ್ರತಿಕೂಲ ಪರಿಣಾಮ ಉಂಟು ಮಾಡುತ್ತಿದೆಂದು ಪೋಷಕರು ಅಳಲು ತೋಡಿಕೊಳ್ಳುತ್ತಿದ್ದಾರೆ.ತಾಲೂಕಿನಲ್ಲಿ 301 ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಿವೆ. ಇವುಗಳಲ್ಲಿ ಈಗಲೇ 268 ಹುದ್ದೆಗಳು ಖಾಲಿ ಇವೆ. ಇವುಗಳಲ್ಲಿ ಗೆದರೆ, ಬಂದರ್ಲಹಳ್ಳಿ, ಶ್ರೀನಿವಾಸಚಾರ್ಲಹಳ್ಳಿ, ಕೃಷ್ಣರಾಜಪುರ, ತೊಂಡೇಭಾವಿಯ ಕಂಬಾಲಹಳ್ಳಿ ಸೇರಿದಂತೆ 61 ಏಕೋಪಾಧ್ಯಾಯ ಶಾಲೆಗಳಿವೆ. 11 ಶಾಲೆಗಳಲ್ಲಿ ಖಾಯಂ ಶಿಕ್ಷಕರಿಲ್ಲದೆ, ಕೇವಲ ಅತಿಥಿ ಶಿಕ್ಷಕರನ್ನೆ ನೆಚ್ಚಿಕೊಂಡಿವೆ.ಇಂತಹ ಕೆಲವು ಶಾಲೆಗಳಲ್ಲೂ ಸಹ ಎಸ್ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ಬಿಎಲ್ಒಗಳಾಗಿ ನೇಮಿಸಿಕೊಳ್ಳಲಾಗಿದೆ. ಆಯ್ದ ದೊಡ್ಡಶಾಲೆಗಳಲ್ಲಿ ಶೇ. 50ರಷ್ಟು ಶಿಕ್ಷಕರನ್ನು ಎಸ್ಐಆರ್ ಪ್ರಕ್ರಿಯೆಗೆ ನೇಮಿಸಿಕೊಂಡಿರುವುದರಿಂದ, ಉಳಿಕೆ ಶಿಕ್ಷಕರು ಹೆಚ್ಚಿನ ತರಗತಿಗಳನ್ನು ನಿಭಾಯಿಸಲಾಗದೆ, ತರಗತಿಗಳು ಬಿಕೋ ಎನ್ನುತ್ತಿವೆ.ಇನ್ನು ಹಿರೇಬಿದನೂರು ಶಾಲೆಯಲ್ಲಿ 1-8 ತರಗತಿಗಳಿದ್ದರೆ 4 ಜನ ಶಿಕ್ಷಕರು ಎಸ್ಐಆರ್ ಕೆಲಸದಲ್ಲಿ ನಿರತರಾಗಿದ್ದಾರೆ, ಉಳಿದವರಲ್ಲಿ ಒಬ್ಬರು ಮುಖ್ಯಶಿಕ್ಷಕ, ಮತ್ತೊಬ್ಬರು ದೈಹಿಕ ಶಿಕ್ಷಕರಿರುವುದರಿಂದ ವಿದ್ಯಾರ್ಥಿಗಳಿಗೆ ಪಾಠ ಕನಸಿನ ಮಾತಾಗಿದೆ. ತಾಲೂಕಿನ ಹಲವು ಶಾಲೆಗಳಲ್ಲಿ ಇದೇ ಪರಿಸ್ಥಿತಿಯಿದೆ. ಇದರಿಂದ ಮುಂಬರುವ ಪರೀಕ್ಷಾ ಸಮಯದಲ್ಲಿ ಹೆಚ್ಚಿನ ತರಗತಿಗಳನ್ನು ಕಡಿಮೆ ಸಮಯದಲ್ಲಿ ನಡೆಸುವುದು ಶಿಕ್ಷಕರಿಗೆ ಸವಾಲಿನ ಕೆಲಸವಾದರೆ, ವಿದ್ಯಾರ್ಥಿಗಳಿಗೆ ಒತ್ತಡ ಹೆಚ್ಚಾಗುವಂತೆ ಮಾಡುತ್ತಿದೆ.ಸರ್ಕಾರ ಸರ್ಕಾರಿ ಶಾಲೆಗಳನ್ನು ಉಳಿಸಲು ದಾಖಲಾತಿ ಹೆಚ್ಚಿಸಬೇಕೆಂದು ಎಲ್ಲಿಲ್ಲದ ಕಸರತ್ತು ಮಾಡುತ್ತಿದ್ದು, ಈ ಬಾರಿ ಆಂಗ್ಲ ಮಾಧ್ಯಮವನ್ನು ಸಹ ಪ್ರಾರಂಭಮಾಡಿದೆ. ಆದರೆ ಶಾಲಾ ಶಿಕ್ಷಕರಿಗೆ ಪಾಠಕ್ಕಿಂತ ಶಾಲೆಯ ಇತರೆ ಕಾರ್ಯಗಳೇ ಹೆಚ್ಚಾಗಿವೆ. ಈಗ ತಿಂಗಳಾನುಗಟ್ಟಲೆ ಶಾಲಾ ಶಿಕ್ಷಕರು ಎಸ್ಐಆರ್ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದರಿಂದ ಮುಂದಿನ ದಿನಗಳಲ್ಲಿ ಸರ್ಕಾರಿ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗುವುದು ಕಷ್ಟವೇ ಸರಿ ಎಂದು ಪೋಷಕರು ಮತ್ತು ಶಿಕ್ಷಣ ಪ್ರೇಮಿಗಳ ಮಾತಾಗಿದೆ.ಪರ್ಯಾಯ ಮಾರ್ಗ:

ಎಸ್ಐಆರ್ ಕರ್ತವ್ಯದ ಅವಧಿಯಲ್ಲಿ ವಿದ್ಯಾರ್ಥಿಗಳ ಕಲಿಕೆಗೆ ತೊಂದರೆಯಾಗದಂತೆ ಪರ್ಯಾಯವಾಗಿ ತಾತ್ಕಾಲಿಕ ಶಿಕ್ಷಕರನ್ನು ಶಾಲೆಗಳಿಗೆ ನಿಯೋಜಿಸಲು ಸಹಶಿಕ್ಷಕರ ಕೊರತೆ ಇದೆ. ಬೇರೆ ರಾಜ್ಯಗಳಲ್ಲಿ ಎಸ್ಐಆರ್ ಪ್ರಕ್ರಿಯೆಗೆ ಶಿಕ್ಷಕರನ್ನು ನೇಮಿಸಿಕೊಳ್ಳದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ತಾಲೂಕಿನಲ್ಲಿ ಬೇರೆ-ಬೇರೆ ಇಲಾಖೆಗಳ ಸಿಬ್ಬಂದಿಯನ್ನು ನೇಮಿಸಿಕೊಂಡರು ಸಹ ಬಿಎಲ್ಒಗಳ ಪಾತ್ರ ಪ್ರಮುಖವೆಂದು ಬಹುತೇಕ ಶಿಕ್ಷಕರನ್ನೇ ಬಳಸಿಕೊಳ್ಳಲಾಗಿದೆ. ಸರ್ಕಾರ ಖಾಸಗಿ ಶಾಲಾ ಶಿಕ್ಷಕರನ್ನು ಸಂಭಾವನೆ ನೀಡಿ ನೇಮಿಸಿಕೊಂಡಿದ್ದರೆ, ಸರ್ಕಾರಿ ಶಾಲೆ ಶಿಕ್ಷಕರ ಮೇಲಿನ ಒತ್ತಡ ಕಡಿಮೆಯಾಗಿ ವಿದ್ಯಾರ್ಥಿಗಳಿಗೆ ಸಕಾಲದಲ್ಲಿ ಪಾಠ ಪ್ರವಚನ ಮಾಡಬಹುದಿತ್ತೆಂದು ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.ಖಾಸಗಿ ಶಾಲೆಗಳತ್ತ ಪೋಷಕರ ಒಲವು: ಸರ್ಕಾರಿ ಶಾಲೆಗಳಲ್ಲಿ ನಿರಂತರವಾಗಿ ಶಿಕ್ಷಕರು ಪಾಠ ಮಾಡುವುದು ಹೊರತುಪಡಿಸಿ ಅನ್ಯ ಕಾರ್ಯಗಳಲ್ಲಿ ಹೆಚ್ಚಾಗಿ ನಿರತರಾಗಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ವಿಫಲರಾಗುತ್ತಿದ್ದಾರೆಂದು ಪೋಷಕರು ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದಾರೆ.ಸರ್ಕಾರದ ಆದೇಶ: ರಾಜ್ಯ ಸರ್ಕಾರ ಶಿಕ್ಷಕರನ್ನು ಶಾಲಾ ಸಮಯದಲ್ಲಿ ಅನ್ಯಕಾರ್ಯಗಳಿಗೆ ಬಳಸಿಕೊಳ್ಳಬಾರದೆಂದು ಆದೇಶ ಹೊರಡಿಸಿದೆ, ಆದರೆ ಕೇಂದ್ರ ಸರ್ಕಾರ ದೇಶದಾದ್ಯoತ ಎಸ್ಐಆರ್ ಪ್ರಕ್ರಿಯೆ ಕೈಗೊಂಡಿರುವುದರಿಂದ, ರಾಜ್ಯ ಸರ್ಕಾರದ ಆದೇಶಕ್ಕೆ ಕಿಮ್ಮತ್ತು ಇಲ್ಲದೆ, ಅನಿವಾರ್ಯವಾಗಿ ಶಿಕ್ಷಕರನ್ನು ಬಳಸಿಕೊಳ್ಳುವಂತಾಗಿದೆ.**

ಜಿಲ್ಲಾಧಿಕಾರಿಗಳು ಏಕೋಪಾಧ್ಯಾಯ ಶಾಲೆಗಳಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ ನೀಡಿದ್ದಾರೆ, ಆದಷ್ಟು ಬೇಗ ಏಕೋಪಾಧ್ಯಾಯ ಶಾಲೆಗಳಿಗೆ ಬೇರೆ ಶಿಕ್ಷಕರನ್ನು ತಾತ್ಕಾಲಿಕವಾಗಿ ನೇಮಕ ಮಾಡಲಾಗುವುದು. ಮತ್ತು ಎಸ್ ಐ ಆರ್ ಪ್ರಕ್ರಿಯೆ ಕಡ್ಡಾಯವಾಗಿರುವುದರಿಂದ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣಕ್ಕೆ ತೊಂದರೆಯಾಗದಂತೆ ಉಳಿಕೆ ಶಿಕ್ಷಕರಿಂದ ಪಾಠ ಮಾಡಿಸುವ ಕೆಲಸ ಮಾಡಲಾಗುತ್ತಿದೆ.


ಅರವಿಂದ್.ಕೆ.ಎಂ., ತಹಸೀಲ್ದಾರ್ಸರ್ಕಾರಿ ಶಾಲೆಗಳಲ್ಲಿ ಮೊದಲು ಗುಣಮಟ್ಟದಾ ಶಿಕ್ಷಣ ನೀಡಲಾಗುತ್ತಿತ್ತು, ಆದರೆ ಈಗ ಶಿಕ್ಷಕರಿಗೆ ಪಾಠಕ್ಕಿಂತ ಇತರೆ ಕೆಲಸಗಳ ಒತ್ತಡ ಜಾಸ್ತಿಯಾಗಿದೆ, ಇದರಿಂದ ಸಕಾಲದಲ್ಲಿ ಮಕ್ಕಳಿಗೆ ಪಾಠ ಮಾಡಲು ಸಾಧ್ಯವಾಗುತ್ತಿಲ್ಲ, ಸರ್ಕಾರ ಇದಕ್ಕೆ ಪರಿಹಾರ ಸೂಚಿಸಬೇಕು.

ಹೆಸರೇಳದ ಸರ್ಕಾರಿ ಶಿಕ್ಷಕ.ಹಣದ ಅಭಾವದಿಂದ ಖಾಸಗಿ ಶಾಲೆಯಲ್ಲಿದ್ದ ನನ್ನ ಮಗನನ್ನು ನಗರದಲ್ಲಿರುವ ಸರ್ಕಾರಿ ಶಾಲೆಗೆ ಸೇರಿಸಲಾಗಿದೆ. ಆದರೆ ಶಾಲೆ ಪ್ರಾರಂಭವಾಗಿ 2 ತಿಂಗಳು ಕಳೆದರೂ ಪಾಠಗಳು ಪ್ರಾರಂಭ ಮಾಡಿಲ್ಲ, ಈಗ ಎಸ್ಐಆರ್ ಪ್ರಾರಂಭವಾಗಿದೆ, ಇದು ಇನ್ನು 3ತಿಂಗಳು ನಡೆಯುತ್ತದೆ. ಮಕ್ಕಳಿಗೆ ಯಾವಾಗ ಪಾಠ ಮಾಡುತ್ತಾರೋ ಗೊತ್ತಿಲ್ಲ, ಸರ್ಕಾರಿ ಶಾಲೆಗೆ ಏಕೆ ಸೇರಿಸಿದೆಎಂಬ ಆಲೋಚನೆ ಈಗ ಕಾಡುತ್ತಿದೆ.

ಧನಂಜಯ್, ಪೋಷಕರು.