ಸಾರಾಂಶ
ಕನ್ನಡಪ್ರಭ ವಾರ್ತೆ ಮೈಸೂರು
ರಾಜೀವ್ ಸ್ನೇಹ ಬಳಗ ಮತ್ತು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ.ಟ್ರಸ್ಟ್ ಸಹಯೋಗದಲ್ಲಿ ಶನಿವಾರ ನಡೆದ ಲಕ್ಷ ವೃಕ್ಷ ಯೋಜನಾ ಕಾರ್ಯಕ್ರಮದಲ್ಲಿ ಇಬ್ಬರು ಸಸ್ಯ ಸಂರಕ್ಷಕರಿಗೆ ಸಿರಿ ಸಂವರ್ಧನ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಕರ್ನಾಟಕ ಮುಕ್ತ ವಿವಿ ಘಟಿಕೋತ್ಸವ ಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬಿಳಿಗಿರಿರಂಗನ ಬೆಟ್ಟದಲ್ಲಿ ಸಸ್ಯ ಸಂರಕ್ಷಕ ರಾಮೇಗೌಡ ಮತ್ತು ಬೆಂಗಳೂರಿನ ನವಚೇತನ ಟ್ರಸ್ಟ್ನ ವ್ಯವಸ್ಥಾಪಕ ನಿರ್ದೇಶಕ ವಿ.ಶ್ರೀನಿವಾಸರಾಜು ಅವರಿಗೆ ಈ ಪ್ರಶಸ್ತಿ ನೀಡಲಾಯಿತು.
ಬಿಳಿಗಿರಿರಂಗನ ಬೆಟ್ಟದ ವಿವೇಕಾನಂದ ಗಿರಿಜನ ಕಲ್ಯಾಣ ಕೇಂದ್ರದ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ ರಾಮೇಗೌಡ ಅವರು, ತಮಗೆ ಸೇರಿದ ಒಂದೂವರೆ ಎಕರೆ ಜಮೀನಿಲ್ಲಿ ವಿವಿಧ ಜಾತಿಯ ಪಾರಂಪರಿಕ ಸಸ್ಯಗಳ ನರ್ಸರಿಯನ್ನು ಹುಟ್ಟುಹಾಕಿದ್ದಾರೆ.ಅಪಾಯದ ಹಂಚಿನಲ್ಲಿರುವ, ಅಪರೂಪದ ಅನೇಕಾನೇಕ ಸಸ್ಯಗಳನು ಬೆಳೆಸಿದ್ದಾರೆ. ಜೀವ ವೈವಿಧ್ಯ ರಕ್ಷಣೆಯ ಆಸಕ್ತಿ ಇರುವ ಅನೇಕ ಸಂಘ- ಸಂಸ್ಥೆಗಳು ರಾಮೇಗೌಡರಿಂದ ಈ ಸಸಿ ಪಡೆದು ಬೇರೆ ಬೇರೆ ಪ್ರದೇಶದಲ್ಲಿ ಬೆಳೆಸಿ ಕಾಪಾಡಿದ್ದಾರೆ.
ವಿ.ಶ್ರೀನಿವಾಸರಾಜು ಅವರು ನವಚೇತನ ಟ್ರಸ್ಟ್ ಸ್ಥಾಪಿಸಿ ಹಲವು ಯೋಜನೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪರಿಸರ ಸಂರಕ್ಷಣೆ, ಪದ್ಯಾವರಣ ಹಾಗೂ ಜಲಸಂಪನ್ಮೂಲಗಳ ಸಂರಕ್ಷಣೆಯ ಉದ್ದೇಶವನ್ನು ಇವರ ಟ್ರಸ್ಟ್ಹೊಂದಿದೆ. 7 ವರ್ಷಗಳ ಹಿಂದೆಯೇ ನವಚೇತನ ಬೃಹತ್ ಪ್ರಮಾಣದಲ್ಲಿ ವನ್ಯೀಕರಣ ಚಳವಳಿ ಹಮ್ಮಿಕೊಂಡಿತ್ತು. ಇದರ ಪರಿಣಾಮವಾಗಿ ಕರ್ನಾಟಕದಲ್ಲಿ ಹಾಗೂ ಹೊರ ರಾಜ್ಯಗಳಲ್ಲಿ ಬಂಜರು ಭೂಮಿಯಲ್ಲಿ ಸಸಿ ನೆಡುವ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಿರಿ ಸಂವರ್ಧನ ಪ್ರಶಸ್ತಿ ನೀಡಲಾಯಿತು.ಸುತ್ತೂರು ಮಠದ ಶ್ರೀಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಐಷಾರಾಮಿ ಬಂಗಲೆಗಳಲ್ಲಿ ಎಸಿ, ಫ್ಯಾನ್ ಗಳ ಮೂಲಕ ಗಾಳಿ ಬರುತ್ತದೆ. ಇದಕ್ಕೆ ಹಣವನ್ನು ಕೊಡಬೇಕು. ಆದರೆ ಹೊರಗೆ ಇರುವ ಮರದಡಿಯಲ್ಲಿ ಕುಳಿತರೆ ಅಲ್ಲಿ ಉತ್ತಮ ಗಾಳಿ ಸಿಗುತ್ತದೆ. ಅದಕ್ಕೆ ಹಣವನ್ನು ಕೊಡಬೇಕಾಗಿಲ್ಲ. ಆದ್ದರಿಂದ ಗಿಡಗಳನ್ನು ನೆಟ್ಟು, ಅವುಗಳನ್ನು ಸಂರಕ್ಷಿಸುವ ಕೆಲಸ ಎಲ್ಲರಿಂದಲೂ ಆಗಬೇಕು ಎಂದರು.
ಭವಾನಿ ಲೋಕೇಶ್ ಕಾರ್ಯಕ್ರಮ ನಿರೂಪಿಸಿದರು. ಗಾಯಕ ನಿತಿನ್ ರಾಜರಾಮ್ ಶಾಸ್ತ್ರಿ ಪ್ರಾರ್ಥಿಸಿದರು. ಎಚ್.ವಿ. ರಾಜೀವ್ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ನುಡಿಗಳನ್ನಾಡಿದರು.ಕಾರ್ಯಕ್ರಮದಲ್ಲಿ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಡಾ.ಎಂ. ಮಾಲತಿ ಪ್ರಿಯಾ, ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಪ್ರಾದೇಶಿಕ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ, ನಗರ ಪಾಲಿಕೆ ಮಾಜಿ ಸದಸ್ಯ ಕೆ.ವಿ. ಮಲ್ಲೇಶ್, ನಿವೃತ್ತ ಪ್ರಾಧ್ಯಾಪಕ ಪ್ರೊ.ಸಿ. ನಾಗಣ್ಣ, ಮಾಜಿ ಮೇಯರ್ ಬಿ.ಎಲ್. ಭೈರಪ್ಪ, ಬಿ.ಸಿ. ಟ್ರಸ್ಟ್ನ ಜಿಲ್ಲಾ ನಿರ್ದೇಶಕ ವಿಜಯಕುಮಾರ್ನಾಗನಾಳ, ಕಲಾವಿದ ಪ್ರಕಾಶ್ ಚಿಕ್ಕಪಾಳ್ಯ, ಶೇಷಪ್ರಸಾದ್, ವೆಂಕಟೇಶ್, ಪತ್ರಕರ್ತ ಲೋಕೇಶ್ಬಾಬು, ಲೀಲಾ ಶಿವಕುಮಾರ್, ಪರಶುರಾಮೇಗೌಡ, ಕೋಟಿ ವೃಕ್ಷ ಪ್ರತಿಷ್ಠಾನದ ಶ್ರೀಕಾಂತ್, ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಮೊದಲಾದವರು ಇದ್ದರು.