ಲಿಂ. ಶಿವಕುಮಾರ ಮಹಾಸ್ವಾಮಿಗಳು ಈ ಭಾರತ ಕಂಡ ಆಧ್ಯಾತ್ಮಿಕ ಮಹಾ ಗುರುಗಳು ಎಂದು ಬಿ.ಆರ್.ಟಿ. ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಬಿ. ತಂಬಾಕದವರು ಹೇಳಿದರು.

ಹಿರೇಕೆರೂರು: ಲಿಂ. ಶಿವಕುಮಾರ ಮಹಾಸ್ವಾಮಿಗಳು ಈ ಭಾರತ ಕಂಡ ಆಧ್ಯಾತ್ಮಿಕ ಮಹಾ ಗುರುಗಳು ಎಂದು ಬಿ.ಆರ್.ಟಿ. ಮಹಾವಿದ್ಯಾಲಯದ ಕಾಲೇಜು ಅಭಿವೃದ್ಧಿ ಮಂಡಳಿ ಅಧ್ಯಕ್ಷ ಜೆ.ಬಿ. ತಂಬಾಕದವರು ಹೇಳಿದರು.

ಪಟ್ಟಣದ ಸಿ.ಇ.ಎಸ್. ವಿದ್ಯಾಸಂಸ್ಥೆಯ ಆಶ್ರಯದಲ್ಲಿ ಗುರುವಾರ ನಡೆದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮಿಗಳವರ 35ನೇ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

12ನೇ ಶತಮಾನದ ಕ್ರಾಂತಿಕಾರಿ ಬಸವಣ್ಣನವರ ಅನುಯಾಯಿ ಸಿರಿಗೆರೆಯ ಮಹಾಸಂತರಾದ ಪೂಜ್ಯರು ಸಾಧನೆಯ ಶಿಖರದ ಮೇಲೆ ಮೆರೆಯುವ ಘಟನೆಗಳನ್ನು ಮೆಲುಕು ಹಾಕುವುದಕ್ಕಿಂತ ಸಾಧನೆಯ ಪೂರ್ವದಲ್ಲಿ ಎದುರಿಸಿದ ಸಮಸ್ಯೆಗಳನ್ನು ನೆನಪಿಸಿಕೊಂಡರೆ ಅವು ಬದುಕಿಗೆ ನಿಜವಾದ ಫಲ ಕೊಡುತ್ತವೆ ಎಂಬ ಸತ್ಯವನ್ನು ಚೆನ್ನಾಗಿ ತಿಳಿದಿದ್ದರು ಎಂದರು.

ಅನ್ನ, ಅಕ್ಷರ ಮತ್ತು ಜ್ಞಾನ ಇವುಗಳನ್ನು ಈ ನಾಡಿಗೆ ನಿರಂತರವಾಗಿ ನೀಡುತ್ತಾ, ದಾಸೋಹ ನೆರವೇರಿಸಿಕೊಂಡು ಕಾಯಕವೇ ಕೈಲಾಸವೆಂದು ನಿತ್ಯ ದಾಸೋಹ ತತ್ವದ ಕೈಂಕರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡು ಲಕ್ಷಾಂತರ ವಿದ್ಯಾರ್ಥಿಗಳಿಗೆ ಊಟ, ವಸತಿ ನೀಡಿ ಜ್ಞಾನವನ್ನು ಧಾರೆ ಎರೆದ ಈ ಮಹಾಸ್ವಾಮಿಗಳು ಯಾವುದೇ ಜಾತಿ, ಮತ, ಪಂಥಗಳಿಲ್ಲದೆ ಎಲ್ಲದನ್ನು ಮಾನವೀಯತೆ ದೃಷ್ಠಿಯಿಂದ ಸಮಾಜದ ಏಳಿಗೆಗಾಗಿ ತಮ್ಮ ಬದುಕನ್ನು ಮೀಸಲಿಟ್ಟ ಇಂತಹ ಕಾಯಕ ಯೋಗಿಯನ್ನು ಇಂದು ನಾವು ನೆನೆಯುವುದೇ ಪುಣ್ಯಕರ ಎಂದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಸಂಸ್ಥೆಯ ಆಡಳಿತ ಅಧಿಕಾರಿ ಎಸ್. ವೀರಭದ್ರಯ್ಯ ಮಾತನಾಡಿದ ಅವರು, ಲಕ್ಷಾಂತರ ವಿದ್ಯಾರ್ಥಿಗಳ, ದೀನ-ದಲಿತರ ಹಸಿವು ನೀಗಿಸಿದ ಶಿವಕುಮಾರ ಶಿವಾಚಾರ್ಯ ಮಹಾಸ್ವಾಮೀಜಿಯವರು ಸಮಾಜದ ಏಳ್ಗೆಗಾಗಿ ವೈಚಾರಿಕ ಪರಂಪರೆಗೆ ನಾಂದಿ ಹಾಡಿ ಬಸವಾದಿ ಶರಣರು ಕಟ್ಟ ಬಯಸಿದ ಸಮಾಜವನ್ನು ಕಟ್ಟಲು ಕಂಕಣಬದ್ದರಾದರು. ಸಮಾಜಕ್ಕಾಗಿ ಇವರು ಸುಖದ ಸುಪ್ಪತ್ತಿಗೆಯಲ್ಲಿ ಮಲಗಲಿಲ್ಲ, ಮಲಗಿದ್ದು ಮುಳ್ಳಿನ ಹಾಸಿಗೆಯ ಮೇಲೆ. ಸಾಧನೆಯಲ್ಲಿ ಗದ್ದುಗೆ ಏರಿದ ಶ್ರೀಗಳು ಲಕ್ಷಾಂತರ ಜನರ ಬಾಳ್ವೆಗೆ ಬೆಳಕಾಗಿ ನಡೆದಾಡುವ ದೇವರಂತೆ ಅನ್ನ, ಆಧ್ಯಾತ್ಮ, ಜ್ಞಾನವೆಂಬ ತ್ರಿವಿಧ ದಾಸೋಹದಿಂದ ಜಗತ್ತಿಗೆ ಮಾದರಿಯಾದ ಧರ್ಮಗಳನ್ನು ಮೀರಿದ ದೇವರೆನಿಸಿ ನಮ್ಮೆಲ್ಲರ ಬಾಳಿಗೆ ದಾರಿದೀಪ ಆಗಿದ್ದಾರೆ. ಅಂತಹ ಮಹಾತ್ಮರ ಶ್ರೀರಕ್ಷೆ ನಮ್ಮೆಲ್ಲರ ಮೇಲೆ ಇರಲಿ ಎಂಬುದೇ ನಮ್ಮ ಆಶಯ ಎಂದರು.

ಈ ವೇಳೆ ಬಸನಗೌಡ ಬಣಕಾರ, ವಿ.ಸಿ. ಹೊಗೆಸೊಪ್ಪಿನವರ, ಎಂ.ಎನ್.ನಿಂಗನಗೌಡರ, ಎಂ.ಸಿ. ಮುದಿಗೌಡರ, ಎಸ್.ಆರ್.ಪಿಳಿಗಿಮಠ, ವಿಜಯಕುಮಾರ ಮುದಿಗೌಡರ, ಕುಸುಮಾ ಮಾವಿನತೋಪ, ಸತೀಶ ಬಣಕಾರ, ಆರ್.ಎಚ್. ಬೆಟ್ಟಳ್ಳೇರ, ಬಿ.ವಿ. ಸನ್ನೇರ, ರವಿ ಬಡಳ್ಳೇ, ಪಿ.ಎಂ. ಡಮ್ಮಳ್ಳಿ, ಅರುಣ್‌ಕುಮಾರ ಬಸನಗೌಡರ, ನವೀನಕುಮಾರ ಸುತ್ತಕೋಟಿ, ವೀರೇಶ ಮರಿಗೌಡರ, ಕಿರಣ ಮಾದಕ್ಕಳವರ ಇತರರಿದ್ದರು.