ಸಿರಿಗೆರೆ ಶ್ರೀ ಡೀಡ್‌ ರದ್ಧಾಗಲಿ, ಉತ್ತರಾಧಿಕಾರಿ ನೇಮಿಸಲಿ

| Published : Sep 02 2024, 02:07 AM IST

ಸಾರಾಂಶ

ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಟ್ರಸ್ಟ್‌ ಡೀಡ್ ರದ್ದಾಗಬೇಕು. ಶ್ರೀಮಠಕ್ಕೆ ಉತ್ತರಾಧಿಕಾರಿ ನೇಮಕ ಆಗಲೇಬೇಕು ಎಂದು ಸಾಧು ಸದ್ಧರ್ಮ ಸಮಾಜದ ಹಿರಿಯ ಮುಖಂಡ, ಅಪೂರ್ವ ಹೋಟೆಲ್ ಸಮೂಹಗಳ ಮುಖ್ಯಸ್ಥ ಅಣಬೇರು ರಾಜಣ್ಣ ಒತ್ತಾಯಿಸಿದ್ದಾರೆ.

- ದಾವಣಗೆರೆ ಅಪೂರ್ವ ರೆಸಾರ್ಟ್‌ನಲ್ಲಿ ಸಾಧು ಲಿಂಗಾಯತ ಸಮಾಜ ಪ್ರಮುಖರ ಸಭೆ ಒಕ್ಕೊರಲ ಒತ್ತಾಯ - ಬಿ.ಸಿ.ಪಾಟೀಲ್, ರವೀಂದ್ರನಾಥ್, ವಡ್ನಾಳ್‌ ರಾಜಣ್ಣ, ಅಣಬೇರು ರಾಜಣ್ಣ, ಎಸ್.ಎಸ್.ಪಾಟೀಲ್ ಭಾಗಿ

- ಸಿರಿಗೆರೆಯಲ್ಲಿ ಶ್ರೀಗಳು ನಡೆಸಿದ್ದ ಸಭೆಗೆ ಪ್ರತಿಯಾಗಿ ಮುಖಂಡರಿಂದ ಮತ್ತೊಂದು ಸಭೆ - - - ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಟ್ರಸ್ಟ್‌ ಡೀಡ್ ರದ್ದಾಗಬೇಕು. ಶ್ರೀಮಠಕ್ಕೆ ಉತ್ತರಾಧಿಕಾರಿ ನೇಮಕ ಆಗಲೇಬೇಕು ಎಂದು ಸಾಧು ಸದ್ಧರ್ಮ ಸಮಾಜದ ಹಿರಿಯ ಮುಖಂಡ, ಅಪೂರ್ವ ಹೋಟೆಲ್ ಸಮೂಹಗಳ ಮುಖ್ಯಸ್ಥ ಅಣಬೇರು ರಾಜಣ್ಣ ಒತ್ತಾಯಿಸಿದರು.

ನಗರದ ಹೊರವಲಯದ ಅಪೂರ್ವ ಹೋಟೆಲ್ ಆವರಣದಲ್ಲಿ ಭಾನುವಾರ ಸಿರಿಗೆರೆಯಲ್ಲಿ ಈಚೆಗೆ ಶ್ರೀಗಳು ನಡೆಸಿದ್ದ ಸಭೆಗೆ ಪ್ರತಿಯಾಗಿ ಮತ್ತೊಂದು ಸಭೆ ನಡೆಸಿದ ಸಮಾಜದ ಮುಖಂಡರು, ಸಮಾಜ ಬಾಂಧವರ ಸಭೆ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು. ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ 30 ವರ್ಷದ ಹಿಂದೆ ಮಾಡಿರುವ ಟ್ರಸ್ಟ್ ಡೀಡ್‌ ರದ್ದುಪಡಿಸಬೇಕು. ಇದೇ ನಮ್ಮ ಮುಖ್ಯ ಬೇಡಿಕೆಗಳಲ್ಲೊಂದು ಎಂದರು.

₹2 ಸಾವಿರ ಕೋಟಿ ಮೌಲ್ಯದ ಆಸ್ತಿ:

ಶ್ರೀಮಠಕ್ಕೆ ಇದುವರೆಗೂ ಉತ್ತರಾಧಿಕಾರಿ ನೇಮಕ ಆಗಿಲ್ಲ. ಸಮಾಜದ ಇಡೀ ಆಸ್ತಿಯನ್ನು ಒಬ್ಬರೇ ಬರೆದುಕೊಂಡಿದ್ದಾರೆ. ಜಗದ್ಗುರು ಆದವರಿಗೆ ಹಣ, ಆಸ್ತಿಯ ಆಸೆ ಏಕೆ? ವೀರಶೈವ ಸಮಾಜದ ಹಲವಾರು ಸ್ವಾಮೀಜಿಗಳು ಸಮಾಜದ ಉದ್ಧಾರಕ್ಕಾಗಿ ಶ್ರಮಿಸಿದ್ದಾರೆ. ಆದರೆ, ಟ್ಯಾಕ್ಸ್‌ ನೆಪ ಮಾಡಿಕೊಂಡು ಸಿರಿಗೆರೆ ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ಸಮಾಜದ ₹2 ಸಾವಿರ ಕೋಟಿ ಮೌಲ್ಯದ ಇಡೀ ಆಸ್ತಿಯನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ ಎಂದು ಆರೋಪಿಸಿದರು.

ಗುರುಗಳು ಟ್ರಸ್ಟ್ ಡೀಡ್‌ ಅನ್ನು 30 ವರ್ಷಗಳಿಂದಲೂ ರಹಸ್ಯವಾಗಿಯೇ ಇಟ್ಟಿದ್ದು ಏಕೆ? ಇಡೀ ಆಸ್ತಿಯನ್ನು ಸ್ವಾಮೀಜಿ ಒಬ್ಬರೆ ಬರೆದುಕೊಂಡಿದ್ದು ಎಷ್ಟು ಸರಿ? ಹಿರಿಯ ಜಗದ್ಗುರುಗಳು ಮಾಡದ ಬೈಲಾದಲ್ಲಿ ಸಮಾಜದ ಹಿರಿಯರು, ಗುರುಗಳ ನೇತೃತ್ವದಲ್ಲಿ ಉತ್ತರಾಧಿಕಾರಿ ನೇಮಕ ಮಾಡಬೇಕೆಂಬುದಾಗಿ ಸ್ಪಷ್ಟವಾಗಿ ಹೇಳಿದ್ದಾರೆ ಎಂದು ರಾಜಣ್ಣ ತಿಳಿಸಿದರು.

ಈಗಾಗಲೇ ಸ್ವಾಮೀಜಿಗೆ 78 ವರ್ಷ ವಯಸ್ಸಾಗಿದೆ. ತಮ್ಮ ಐ‍ದು ಜನ ಶಿಷ್ಯರನ್ನು ಆಯ್ಕೆ ಮಾಡಿ, ಅದರಲ್ಲಿ ಒಬ್ಬರನ್ನು ಉತ್ತರಾಧಿಕಾರಿಯಾಗಿ ನೇಮಕ ಮಾಡಲಿ. ನಾಲ್ಕು ಗೋಡೆಗಳ ಮಧ್ಯೆದಲ್ಲೇ ಈ ಎಲ್ಲಾ ವಿಚಾರ ಚರ್ಚೆ ಮಾಡಬೇಕೆಂಬುದು ನಮ್ಮ ಆಶಯವಾಗಿದೆ. ಆದರೆ, ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗಳು ಅದಕ್ಕೆ ಅವಕಾಶವನ್ನೇ ನೀಡುತ್ತಿಲ್ಲ ಎಂದು ಅಣಬೇರು ರಾಜಣ್ಣ ತಿಳಿಸಿದರು.

ಶ್ರೀಗಳಿಂಗಿಂತ ಬಂಡವಾಳಶಾಹಿ ಯಾರಿದ್ದಾರೆ?:

ಸಮಾಜದ ಹಿರಿಯ ಮುಖಂಡ, ಮಾಜಿ ಸಚಿವ ಬಿ.ಸಿ.ಪಾಟೀಲ್ ಮಾತನಾಡಿ, ಸ್ವಾಮೀಜಿಗೆ ಕೈಮುಗಿದು ಕೇಳುವೆ. ಸಮಾಜವನ್ನು ಒಡೆಯಬೇಡಿ. ಭಕ್ತರ ಮನಸ್ಸಿನಲ್ಲಿ ವಿಷ ಬಿತ್ತಬೇಡಿ. ಸಮಾಜವನ್ನು ಒಡೆಯುವ ಕೆಲಸ ಸ್ವಾಮೀಜಿಯಿಂದ ಆಗುತ್ತಿದೆ. ನಾವ್ಯಾರೂ ಬಂಡವಾಳ ಶಾಹಿಗಳಲ್ಲ. ನೀವು ₹2 ಸಾವಿರ ಕೋಟಿ ರು. ಮೌಲ್ಯದ ಸಮಾಜದ ಆಸ್ತಿಯನ್ನು ನಿಮ್ಮ ಹೆಸರಿಗೆ ಮಾಡಿಕೊಂಡ ನಿಮಗಿಂತ ಬಂಡವಾಳ ಶಾಹಿ ಯಾರಿದ್ದಾರೆ ಹೇಳಿ ಎಂದು ಪ್ರಶ್ನಿಸಿದರು.

ಮೈಸೂರಿನ ಸುತ್ತೂರು ಮಠದ ಹಾಗೂ ಚಿತ್ರದುರ್ಗದ ಮಾದಾರ ಚನ್ನಯ್ಯ ಪೀಠಕ್ಕೆ ಸ್ವಾಮೀಜಿಗಳು ಉತ್ತರಾಧಿಕಾರಿಗಳನ್ನು ನೇಮಕ ಮಾಡಿದ್ದಾರೆ. ಆದರೆ, ಸಿರಿಗೆರೆಯ ತರಳಬಾಳು ಬೃಹನ್ಮಠದ ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಏನಾಗಿದೆ? ಇನ್ನಾದರೂ ಸಮಾಜದ ಭವಿಷ್ಯಕ್ಕಾಗಿ ಶ್ರೀಮಠಕ್ಕೆ ಉತ್ತರಾಧಿಕಾರಿಗಳನ್ನು ನೇಮಕ ಮಾಡಿ ಎಂದು ಮನವಿ ಮಾಡಿದರು.

ಸಮಾಜದ ಹಿರಿಯರಾದ ಮಾಜಿ ಸಚಿವ ಎಸ್.ಎ.ರವೀಂದ್ರನಾಥ, ಮಾಜಿ ಶಾಸಕ ವಡ್ನಾಳ್ ರಾಜಣ್ಣ, ಶಿವಮೊಗ್ಗದ ಬೆನಕಪ್ಪ, ಹಿರೇಕೆರೂರಿನ ಎಸ್.ಎಸ್.ಪಾಟೀಲ, ಓಂಕಾರಪ್ಪ, ಆನಗೋಡು ನಂಜುಂಡಪ್ಪ, ಬೆಂಗಳೂರಿನ ಹನುಮಲಿ ಷಣ್ಮುಖಪ್ಪ ಸೇರಿದಂತೆ ಸಾಧು ಲಿಂಗಾಯತ ಸಮಾಜದ ಪ್ರಮುಖರು ಇದ್ದರು. ಇದಕ್ಕೂ ಮುನ್ನ ಸಮಾಜದ ಪ್ರಮುಖರು ಸಭೆ ನಡೆಸಿ, ಸ್ವಾಮೀಜಿಗಳ ನಡೆ, ವರ್ತನೆ ಬಗ್ಗೆ, ಸಮಾಜ ಒಡೆಯಲು, ಸಮಾಜವನ್ನು ಎತ್ತಿಕಟ್ಟುವ ಕೆಲಸ ಮಾಡುತ್ತಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

- - - ಬಾಕ್ಸ್-1 * ನಾವು ಕುಡುಕರು, ನೀವು ಹಾಲು ಕುಡಿದೋರು ಚೆನ್ನಾಗಿ ಮಾತಾಡಿ..

- ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿಗೆ ಸಮಾಜ ಪ್ರಮುಖರ ತಾಕೀತು

ಕನ್ನಡಪ್ರಭ ವಾರ್ತೆ, ದಾವಣಗೆರೆ

ಸಿರಿಗೆರೆ ಮಠ ಹಾಗೂ ಸಮಾಜದ ₹2 ಸಾವಿರ ಕೋಟಿ ಮೌಲ್ಯದ ಆಸ್ತಿಯನ್ನು ಡಾ.ಶಿವಮೂರ್ತಿ ಶಿವಾಚಾರ್ಯ ಸ್ವಾಮೀಜಿ ತಮ್ಮ ಹೆಸರಿಗೆ ಮಾಡಿಕೊಂಡಿದ್ದಾರೆಂದು ಸಾಧು ಲಿಂಗಾಯತ ಸಮಾಜದ ಸಭೆಯಲ್ಲಿ ಗಂಭೀರ ಆರೋಪ ಕೇಳಿಬಂದಿತು.

ನಾವು ರೆಸಾರ್ಟ್‌ನಲ್ಲಿ ಸಭೆ ಮಾಡಿದರೆ, ಕುಡುಕರ ಸಭೆ ಅಂತಾ ಹೀಗಳೆದಿದ್ದಾರೆ. ನಾವು ಕುಡುಕರೇ ಆಗಿದ್ದರೆ, ನೀವು (ಸ್ವಾಮೀಜಿ) ಹಾಲು ಕುಡಿದವರಲ್ಲವೇ? ನೀವಾದರೂ ಚೆನ್ನಾಗಿ ಮಾತನಾಡಿ ಎಂದು ಅನೇಕ ಮುಖಂಡರು ಸಭೆಯಲ್ಲಿ ಸ್ವಾಮೀಜಿಗೆ ತಾಕೀತು ಹೇಳಿದರು.

ಸಿರಿಗೆರೆ ಮಠದ ಡಾ.ಶಿವಮೂರ್ತಿ ಶ್ರೀಗಳಿಗೆ 78 ವರ್ಷ ಆಗಿದೆ. 60ನೇ ವರ್ಷಕ್ಕೆ ಸ್ವಾಮೀಜಿ ಪೀಠತ್ಯಾಗ ಮಾಡಬೇಕಾಗಿತ್ತು. ಆದರೆ, ಮೂಲ ಬೈಲಾವನ್ನೇ ತಿದ್ದುಪಡಿ ಮಾಡಿದ್ದಾರೆ. ಲಿಂಗೈಕ್ಯ ಹಿರಿಯ ಜಗದ್ಗುರುಗಳು 1938ರಲ್ಲಿ ಒಂದು ಬೈಲಾ ಮಾಡಿದ್ದಾರೆ. ಹಿರಿಯ ಸ್ವಾಮೀಜಿ ಆಗ ಮಾಡಿದ್ದ ಬೈಲಾದಲ್ಲಿ ಭಕ್ತರೆ ಮಠದ ಪೀಠಾಧೀಶರನ್ನು ಆಯ್ಕೆ ಮಾಡುವ ಸ್ವಾತಂತ್ರ್ಯವಿತ್ತು. ಈಗ ಅದೇ ಇಲ್ಲ ಎಂದು ದೂರಿದರು.

ಆದಾಯ ತೆರಿಗೆ ನೆಪವೊಡ್ಡಿ, ಬೈಲಾದಲ್ಲಿ ಮಠದ ಹೆಸರನ್ನೇ ಬದಲಿಸಿ, ತಮ್ಮದೇ ಸ್ವಂತ ಮಠ ಮಾಡಿಕೊಂಡು, ಹೊಸ ಟ್ರಸ್ಟ್ ಮಾಡಿಕೊಂಡಿದ್ದಾರೆ. ಮಠದ ಎಲ್ಲ ಆಸ್ತಿ, ಟ್ರಸ್ಟ್‌ ವ್ಯಾಪ್ತಿಗೆ ಬರುತ್ತದೆ. ಉತ್ತರಾಧಿಕಾರಿ ನೇಮಕ ಅಧಿಕಾರವನ್ನೂ ಸ್ವಾಮೀಜಿಗಳೇ ಇಟ್ಟುಕೊಂಡಿದ್ದಾರೆ. ಇದನ್ನು ಪ್ರಶ್ನಿಸುವವರ ವಿರುದ್ಧ ಸಮಾಜವನ್ನು, ಭಕ್ತರನ್ನು ಎತ್ತಿ ಕಟ್ಟುವ ಕೆಲಸ ಮಾಡುತ್ತಿರುವುದು ಎಷ್ಟರಮಟ್ಟಿಗೆ ಸರಿ ಎಂದು ಹಲವರು ಪ್ರಶ್ನಿಸಿದರು.

- - - ಬಾಕ್ಸ್‌-2* ಏನಿದು ಗದ್ದಲ?!-ಸಿರಿಗೆರೆ ತರಳಬಾಳು ಬೃಹನ್ಮಠದ ಉತ್ತರಾಧಿಕಾರಿ ಆಯ್ಕೆ ವಿವಾದ-ಕಳೆದೊಂದು ತಿಂಗಳಿನಿಂದ ಎರಡು ಗುಂಪಿನ ಮಧ್ಯೆ ಶೀತಲ ಸಮರ-ಉತ್ತರಾಧಿಕಾರಿ ಆಯ್ಕೆ ಆಗಲಿ, ಟ್ರಸ್ಟ್‌ ಡೀಡ್ ರದ್ದುಪಡಿಸಲೆಂಬ ಪಟ್ಟು-ಕಳೆದೊಂದು ತಿಂಗಳಿಂದ ಎರಡು ಗುಂಪಿನ ಮಧ್ಯೆ ತೀವ್ರ ಜಟಾಪಟಿ- - -

ಬಾಕ್ಸ್-3

* ಬಂಡವಾಳಶಾಹಿಗಳಿಂದ ಅಪಪ್ರಚಾರ, ಶ್ರೀ ಕಿಡಿ

-ಕಳೆದ ಶುಕ್ರವಾರ ಸಿರಿಗೆರೆ ಮಠದಲ್ಲಿ ಶ್ರೀಗಳ ನೇತೃತ್ವದಲ್ಲಿ ಆಗಿದ್ದ ಸಭೆ-ಬಂಡವಾಳ ಶಾಹಿಗಳಿಂದ ಮಠದ ವಿರುದ್ಧ ಅಪಪ್ರಚಾರವೆಂದು ಶ್ರೀಗಳ ಕಿಡಿ-ಕೆಲವೇ ಬಂಡವಾಳ ಶಾಹಿಗಳಿಂದ ಶ್ರೀಮಠದ ವಿರುದ್ಧ ಅಪಪ್ರಚಾರವಾಗುತ್ತಿದೆ-ಶಾಮನೂರುರಂತಹ ಹಿರಿಯರ ಜೊತೆ ಅಣಬೇರು ರಾಜಣ್ಣ ಇರುವುದು ಸರಿಯಲ್ಲವೆಂದು ಸ್ವಾಮೀಜಿ ಆಕ್ಷೇಪ-ರಾಜಕಾರಣಿಗಳಂತೆ ಗುರುಗಳು ಮಾಜಿ ಆಗಲ್ಲ. ರಾಜಕೀಯಕ್ಕೂ, ಧರ್ಮ ಪೀಠಕ್ಕೂ ವ್ಯತ್ಯಾಸವಿದೆಯೆಂದು ಸ್ವಾಮೀಜಿ ವಾಗ್ಧಾಳಿ ಮಾಡಿದ್ದರು. - - -

ಬಾಕ್ಸ್-3* ಸ್ವಾಮೀಜಿ ಸಭೆಗೆ ಕೌಂಟರ್‌ಗೆ ರೆಸಾರ್ಟ್ ಸಭೆ

-ಸಿರಿಗೆರೆ ಸಭೆಗೆ ಕೌಂಟರ್ ನೀಡಲು ದಾವಣಗೆರೆಯಲ್ಲಿ ಶ್ರೀಮಠದ ರೆಬಲ್ ಮುಖಂಡರ ಸಭೆ-ರೆಬಲ್ ಗುಂಪಿನಿಂದಲೂ ಗಂಭೀರವಾಗಿ ಚರ್ಚೆ, ಟ್ರಸ್ಟ್‌ ಡೀಡ್ ರದ್ದುಪಡಿಸಲು ಒಕ್ಕೊರಲ ಆಗ್ರಹ-ಶ್ರೀಮಠಕ್ಕೆ ಉತ್ತರಾಧಿಕಾರಿ ನೇಮಿಸಲು, ಟ್ರಸ್ಟ್‌ ಡೀಡ್ ರದ್ದುಪಡಿಸುವಂತೆ ರೆಬಲ್ ಸಭಿಕರ ಪಟ್ಟು-ಶಾಮನೂರು ಅನುಪಸ್ಥಿತಿಯಲ್ಲಿ ಬಿ.ಸಿ.ಪಾಟೀಲ್‌, ಅಣಬೇರು ರಾಜಣ್ಣ, ರವೀಂದ್ರನಾಥ, ರಾಜಣ್ಣ ಭಾಗಿ-ನೂರಾರು ಮುಖಂಡರು, ಪ್ರಮುಖರ ಸಭೆ ಬೆನ್ನಲ್ಲೇ ತಾರಕ್ಕೇರುತ್ತಿರುವ ಮಠದ ವಿಚಾರದ ವಿವಾದ- - -

-1ಕೆಡಿವಿಜಿ2, 3:

ದಾವಣಗೆರೆಯ ಅಪೂರ್ವ ರೆಸಾರ್ಟ್‌ನಲ್ಲಿ ಭಾನುವಾರ ಸಾಧು ಲಿಂಗಾಯತ ಸಮಾಜ ಮುಖಂಡರಾದ ಮಾಜಿ ಸಚಿವ ಬಿ.ಸಿ.ಪಾಟೀಲ, ಅಣಬೇರು ರಾಜಣ್ಣ ಮಾತನಾಡಿದರು.