ಶಿರಸಿಯ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಎಂದು ನಾಮಕರಣ ಮಾಡಲು ಆಗ್ರಹ

| Published : Oct 16 2024, 12:35 AM IST

ಶಿರಸಿಯ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಎಂದು ನಾಮಕರಣ ಮಾಡಲು ಆಗ್ರಹ
Share this Article
  • FB
  • TW
  • Linkdin
  • Email

ಸಾರಾಂಶ

ಶಿರಸಿಯ ಹಳೆ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದರೆ ಸಮಾಜದಲ್ಲಿ ಉತ್ತಮ ಸಂದೇಶ ರವಾನೆಯಾಗುತ್ತದೆ.

ಶಿರಸಿ: ಹಳೆ ಬಸ್ ನಿಲ್ದಾಣದ ಕಟ್ಟಡ ಪೂರ್ಣಗೊಂಡು, ಉದ್ಘಾಟನೆಗೆ ಸಿದ್ಧವಾಗಿದೆ. ಬಸ್ ನಿಲ್ದಾಣಕ್ಕೆ ಸಂವಿಧಾನ ಶಿಲ್ಪಿ ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ ಎಂದು ನಾಮಕರಣ ಮಾಡಲು ಶಾಸಕರು ಹಾಗೂ ಸಂಸದರು ಇಚ್ಛಾಶಕ್ತಿ ತೋರಿಸಬೇಕು ಎಂದು ಭೀಮ ಘರ್ಜನೆ ಸಂಘಟನೆಯ ಜಿಲ್ಲಾಧ್ಯಕ್ಷ ಅರ್ಜುನ ಮಿಂಟಿ ಆಗ್ರಹಿಸಿದರು.ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಳೆ ಬಸ್ ನಿಲ್ದಾಣಕ್ಕೆ ಬಿ.ಆರ್. ಅಂಬೇಡ್ಕರ ಬಸ್ ನಿಲ್ದಾಣ ಎಂದು ನಾಮಕರಣ ಮಾಡಿದರೆ ಸಮಾಜದಲ್ಲಿ ಉತ್ತಮ ಸಂದೇಶ ರವಾನೆಯಾಗುತ್ತದೆ. ಈ ಬಗ್ಗೆ ಶಾಸಕ ಭೀಮಣ್ಣ ನಾಯ್ಕ ಹಾಗೂ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಭೇಟಿಯಾಗಿ ಸಂಘಟನೆ ವತಿಯಿಂದ ಮನವಿ ಮಾಡುತ್ತೇವೆ ಎಂದರು.

ನಗರದ ಐದು ವೃತ್ತಕ್ಕೆ ಅಂಬೇಡ್ಕರ ವೃತ್ತ ಎಂದು ನಾಮಕರಣ ಮಾಡಲು ಕಳೆದ ಹಲವು ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದೇವೆ. ಹೋರಾಟದ ಸ್ಥಳಕ್ಕೆ ಆಗಮಿಸಿದ ಹಿಂದಿನ ಸಹಾಯಕ ಆಯುಕ್ತರು ಸರ್ಕಾರಕ್ಕೆ ವರದಿ ಸಲ್ಲಿಸಿ, ಆದಷ್ಟು ಶೀಘ್ರವಾಗಿ ಅಂಬೇಡ್ಕರ ವೃತ್ತ ಎಂದು ನಾಮಕರಣ ಮಾಡಲಾಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಭರವಸೆ ಹುಸಿಯಾಗಿದೆ ಎಂದು ಆರೋಪಿಸಿದ ಅವರು, ಮುಂದಿನ ದಿನಗಳಲ್ಲಿ ಭೀಮ ಘರ್ಜನೆ ಹಾಗೂ ದಲಿತಪರ ಸಂಘಟನೆಯ ವತಿಯಿಂದ ಉಪವಾಸ ಸತ್ಯಾಗ್ರಹ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.ಸುದ್ದಿಗೋಷ್ಠಿಯಲ್ಲಿ ಉಪಾಧ್ಯಕ್ಷ ಶಾಮ್ ದೇಶಭಾಗ್, ತಾಲೂಕಾಧ್ಯಕ್ಷ ಪುನೀತ ಮರಾಠೆ, ಸಂಘಟನೆಯ ಪ್ರಮುಖರಾದ ಕುಮಾರ ಹುಬ್ಬಳ್ಳಿ, ನಾಗೇಶ ಮುನಿಯಾರ್, ಅಕ್ಷಯ ದೋತ್ರೆ, ಹರ್ಷ ಭೋವಿ, ರಾಜಾಬಿ ಮತ್ತಿತರರು ಇದ್ದರು. ನಾಳೆಯಿಂದ ಸಾಂಸ್ಕೃತಿಕ ಉತ್ಸವ

ಸಿದ್ದಾಪುರ: ತಾಲೂಕಿನ ದೊಡ್ಮನೆಯ ಕೋಡಿಗದ್ದೆ ಶ್ರೀ ಮೂಕಾಂಬಿಕಾ ಯಕ್ಷಗಾನ ಕಲಾಸಂಘವು ಸೆ. ೧೭ರಿಂದ ೧೯ರ ವರೆಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಕಾರದೊಂದಿಗೆ ಕಲಾವಿದ ದಿ. ಸುಬ್ರಾಯ ಹೆಗಡೆ ಇಳ್ಳಿಮನೆ ನೆನಪಿನಲ್ಲಿ ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಿದೆ.

ಸೆ. ೧೭ರ ರಾತ್ರಿ ೮ಕ್ಕೆ ಕೋಡಿಗದ್ದೆ ದೇವಾಲಯದ ಆವಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕಿ ಮಂಗಲಾ ನಾಯ್ಕ ಉದ್ಘಾಟಿಸಲಿದ್ದು, ಟಿಎಂಎಸ್ ಅಧ್ಯಕ್ಷ ಆರ್.ಎಂ. ಹೆಗಡೆ ಬಾಳೇಸರ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಟಿಎಸ್ಎಸ್ ನಿರ್ದೇಶಕ ರವೀಂದ್ರ ಹೆಗಡೆ ಹಿರೇಕೈ, ಪತ್ರಕರ್ತ ರಮೇಶ ಹೆಗಡೆ ಹಾರ್ಸಿಮನೆ, ಕಲಾಪೋಷಕ ಎಸ್.ಎಂ. ಭಟ್ ಬಿಜ್ಜಾಳ, ಕೋಡಿಗದ್ದೆ ದೇವಾಲಯ ಕಮಿಟಿ ಅಧ್ಯಕ್ಷ ಶ್ರೀರಾಮ ಆರ್. ಹೆಗಡೆ ಕಂಸ್ಲೆ ಕಾರ್ಯಕ್ರಮದಲ್ಲಿ ಭಾಗವಹಿಸುವರು. ರಾತ್ರಿ ೯ರಿಂದ ಪ್ರಸಿದ್ಧ ಕಲಾವಿದರಿಂದ ಪಾರಿಜಾತ- ನರಕಾಸುರವಧೆ ಎಂಬ ಯಕ್ಷಗಾನ ಪ್ರದರ್ಶನಗೊಳ್ಳಲಿದೆ.ಸೆ. ೧೮ರಂದು ಇಳಿಹೊತ್ತು ೪.೩೦ಕ್ಕೆ ತಾಲೂಕಿನ ಐಸೂರಿನ ಗೌರಿಶಂಕರ ವೀರಭದ್ರ ದೇವಾಲಯದ ಆವಾರದಲ್ಲಿ ಸಂಸ್ಕೃತಿ ಸಂಪದ ಶಂಕರಮಠ ಸಿದ್ದಾಪುರ ಇವರ ಸಹಯೋಗದೊಂದಿಗೆ ಯಕ್ಷಕೌಮುದಿ ಟ್ರಸ್ಟ್ ಶ್ರೀರಂಗಪಟ್ಟಣ ಇವರಿಂದ ಸತ್ಯವಾನ್ ಸಾವಿತ್ರಿ ಎಂಬ ಪೌರಾಣಿಕ ತಾಳಮದ್ದಲೆ ಆಖ್ಯಾನವು ಪ್ರದರ್ಶನಗೊಳ್ಳಲಿದೆ.ಸೆ. ೧೯ರ ಸಂಜೆ ೬ಕ್ಕೆ ದೊಡ್ಮನೆ ಶ್ರೀ ಎಂ.ಜಿ.ವಿ.ವಿ. ಪ್ರೌಢಶಾಲೆ ಶ್ರೀ ಗಣೇಶ ಹೆಗಡೆ ದೊಡ್ಮನೆ ರಂಗವೇದಿಕೆಯಲ್ಲಿ ಸಮಾರೋಪ ಸಮಾರಂಭ ನಡೆಯಲಿದೆ. ಡಾ. ಶಶಿಭೂಷಣ ಹೆಗಡೆ ದೊಡ್ಮನೆ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪ್ರಾಥಮಿಕ ಶಾಲಾ ಶಿಕ್ಷಕರ ಸೌಹಾರ್ದ ಸಂಘ ತೀರ್ಥಹಳ್ಳಿ ಇದರ ಅಧ್ಯಕ್ಷ ಎಂ.ಡಿ. ಹೆಗಡೆ ಕುಡೆಗೋಡ, ಕಲಾಪೋಷಕ, ಉದ್ಯಮಿ ಸತೀಶ ಹೆಗಡೆ ಬೈಲಳ್ಳಿ, ಪ್ರೌಢಶಾಲೆ ದೊಡ್ಮನೆ ಇದರ ಮುಖ್ಯಾಧ್ಯಾಪಕ ಎಫ್.ಎನ್. ಹರನಗಿರಿ ಉಪಸ್ಥಿತರಿರುವರು. ನಂತರ ೭ರಿಂದ ಒಡ್ಡೋಲಗ ರಂಗಪರ್ಯಟನ ಹಿತ್ಲಕೈ ಇವರಿಂದ ಬಹುಮುಖಿ ಎಂಬ ನಾಟಕವು ಪ್ರದರ್ಶನಗೊಳ್ಳಲಿದೆ ಎಂದು ಸಂಘಟಕ ಕೇಶವ ಹೆಗಡೆ ಕಿಬ್ಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.