ಸಾರಾಂಶ
ನಾಡಿಗ ಬಾಬದಾರರು ಜಾತ್ರೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಥಮ ಪೂಜೆ, ಮಂಗಳಾರತಿ ಮತ್ತು ರಾತ್ರಿ ಕೊನೆಯ ಪೂಜೆ, ಮಂಗಳಾರತಿ ನೆರವೇರಿಸುವರು.
ಶಿರಸಿ: ಮಂಗಳವಾರ ಶಿರಸಿ ಮಾರಿಕಾಂಬಾ ದೇವಸ್ಥಾನದ ಎದುರು ರಥದ ಕಲಶಾರೋಹಣದ ಮೂಲಕ ಎರಡು ವರ್ಷಗಳಿಗೊಮ್ಮೆ ನಡೆಯುವ ೯ ದಿನಗಳ ಜಾತ್ರೆಯು ಆರಂಭಗೊಂಡಿದೆ.ಶ್ರೀದೇವಿಯ ಬಾಬದಾರರ ಮನೆಗಳಲ್ಲಿಯೂ ಜಾತ್ರೆಯ ಆಚರಣೆಗಳನ್ನು ನಡೆಸಲಾಗುತ್ತಿದೆ. ಶ್ರೀದೇವಿಯ ಬಾಬುದಾರರ ಕುಟುಂಬಗಳು ಪಾರಂಪರಿಕವಾಗಿ ತಲೆತಲಾಂತರದಿಂದ ವಿವಿಧ ಪೂಜಾ ಹಾಗೂ ಸೇವಾ ಕೈಂಕರ್ಯವನ್ನು ನೆರವೇರಿಸುತ್ತಾ ಬಂದಿವೆ.
ಪ್ರಮುಖ ಬಾಬುದಾರ ಕುಟುಂಬವಾದ ನಾಡಿಗರ ಮನೆಯಲ್ಲಿ ಮಂಗಳವಾರ ಬೆಳಗ್ಗೆ ಪೂಜೆಗಳು ನಡೆದವು. ಪುರೋಹಿತರ ಮಾರ್ಗದರ್ಶನದಲ್ಲಿ ವಿಜಯ ನಾಡಿಗ, ಪತ್ನಿ ವಿನೀತಾ ನಾಡಿಗ ಹಾಗೂ ಕುಟುಂಬಸ್ಥರೊಡನೆ ವಿವಿಧ ಪೂಜಾ ವಿಧಿವಿಧಾನಗಳನ್ನು ನೆರವೇರಿಸಿದರು.ನಾಡಿಗ ಕುಟುಂಬವು ಶ್ರೀದೇವಿಯ ತವರುಮನೆ ಎನ್ನುವ ಐತಿಹ್ಯ ಹೊಂದಿದೆ. ಮಂಗಳವಾರ ರಾತ್ರಿ ಜಾತ್ರಾ ಕಲ್ಯಾಣ ಪ್ರತಿಷ್ಠೆಯಲ್ಲಿ ಬಾಸಿಂಗ ಕಟ್ಟುವುದು, ಇತರ ವಿಧಿವಿಧಾನಗಳನ್ನು ನೆರವೇರಿಸುತ್ತಾರೆ. ನಾಡಿಗ ಬಾಬದಾರರು ಜಾತ್ರೆಯಲ್ಲಿ ಪ್ರತಿದಿನ ಬೆಳಗ್ಗೆ ಪ್ರಥಮ ಪೂಜೆ, ಮಂಗಳಾರತಿ ಮತ್ತು ರಾತ್ರಿ ಕೊನೆಯ ಪೂಜೆ, ಮಂಗಳಾರತಿ ನೆರವೇರಿಸುವರು.