ಸಭೆ ಕರೆಯದ ಶಿರಸಿ ನಗರಸಭೆ ಅಧ್ಯಕ್ಷೆ, ಪ್ರತಿಪಕ್ಷದಿಂದ ತರಾಟೆ

| Published : Jul 31 2025, 12:48 AM IST / Updated: Jul 31 2025, 12:49 AM IST

ಸಾರಾಂಶ

ಶಿರಸಿ ನಗರಸಭೆಯ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ನಿಯೋಗ ಬುಧವಾರ ನಗರಸಭೆಯಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿ, ಸಭೆ ಕರೆಯದ ಕುರಿತು ತರಾಟೆಗೆ ತೆಗೆದುಕೊಂಡರು.

ಶಿರಸಿ: ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಲು ವಿಶೇಷ ಸಭೆ ನಡೆಸಲು ನೊಟೀಸ್ ನೀಡಿದರೂ ಸಭೆ ಕರೆಯದ ಕುರಿತು ನಗರಸಭೆಯಲ್ಲಿ ಕಾಂಗ್ರೆಸ್ ಸದಸ್ಯರು ಅಧ್ಯಕ್ಷರನ್ನು ಪ್ರಶ್ನಿಸಿದರು.

ನಗರಸಭೆಯ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ ನೇತೃತ್ವದಲ್ಲಿ ಕಾಂಗ್ರೆಸ್ ಸದಸ್ಯರ ನಿಯೋಗ ಬುಧವಾರ ನಗರಸಭೆಯಲ್ಲಿ ಅಧ್ಯಕ್ಷರನ್ನು ಭೇಟಿ ಮಾಡಿ ನೊಟೀಸ್‌ಗೆ ಸ್ಪಂದಿಸದ ಕುರಿತು ಅಧ್ಯಕ್ಷರನ್ನು ತರಾಟೆಗೆ ತೆಗೆದುಕೊಂಡರು.

ಪ್ರದೀಪ ಶೆಟ್ಟಿ ಮಾತನಾಡಿ, ನಗರಸಭೆಯಲ್ಲಿ ಇತ್ತೀಚಿಗೆ ನಡೆದ ಪೈಪ್ ಕಳ್ಳತನ, ಲೋಕಾಯುಕ್ತ ದಾಳಿ, ಸ.ನಂ. ೭೩ರಲ್ಲಿನ ಜಾಗದ ವಿಷಯ ಸೇರಿದಂತೆ ಪ್ರಸಕ್ತ ವಿದ್ಯಮಾನಗಳ ಕುರಿತು ಚರ್ಚಿಸಲು ೧೧ ಸದಸ್ಯರು ನೊಟೀಸ್ ನೀಡಿ ೮ ದಿನಗಳು ಕಳೆದರೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ನೊಟೀಸ್ ನೀಡಿದಾಗ ಸಭೆ ಕರೆಯಬೇಕು ಎಂದು ಮುನ್ಸಿಪಲ್ ನಿಯಮದಲ್ಲೂ ಉಲ್ಲೇಖವಿದೆ. ಆದರೂ ಈ ರೀತಿ ಮಾಡುವುದು ತಪ್ಪು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಮಾತನಾಡಿ, ಈಗಾಗಲೇ ನೋಟಿಸ್‌ ನೀಡಿ ೮ ದಿನಗಳು ಕಳೆದಿವೆ. ಆದರೆ ಅಧ್ಯಕ್ಷರಿಗೆ ೧೫ ದಿನಗಳ ಕಾಲ ಸಮಯಾವಕಾಶ ಇರಲಿದೆ. ನಾನು ಇತ್ತೀಚಿಗೆ ನಡೆದ ಘಟನೆಗಳು ಯಾವ ಹಂತದಲ್ಲಿದೆ ಎಂದು ತಿಳಿದುಕೊಳ್ಳಲು ಕಾನೂನು ಸಲಹೆ ಪಡೆಯಲು ಮುಂದಾಗಿದ್ದೇನೆ. ಸ.ನಂ. ೭೩ರ ವಿಷಯ ನ್ಯಾಯಾಲಯದಲ್ಲಿದೆ. ಕಾರಣ ಲಿಖಿತವಾಗಿ ಕಾನೂನು ಸಲಹೆಗೆ ಪತ್ರ ಬರೆದಿದ್ದೇನೆ. ಕಾರಣ ಸ್ವಲ್ಪ ಸಮಯ ನೀಡಬೇಕು ಎಂದು ವಿನಂತಿಸಿದರು.

ಈ ವೇಳೆ ಅಧ್ಯಕ್ಷರು ಸಭೆ ಕರೆಯದ ಹಿನ್ನೆಲೆಯಲ್ಲಿ ನಗರಸಭೆಯ ಉಪಾಧ್ಯಕ್ಷರಿಗೆ ಕಾಂಗ್ರೆಸ್ ಸದಸ್ಯರು ನೋಟಿಸ್‌ ನೀಡಿದರು. ಸಭೆ ಕರೆಯಲು ವಿನಂತಿಸಿದರು. ಅಧ್ಯಕ್ಷರಿಗೆ ಸಭೆ ಕರೆಯಲು ಮನಸ್ಸು ಇಲ್ಲದ ಕಾರಣ ಉಪಾಧ್ಯಕ್ಷರಿಗೆ ಸಭೆ ಕರೆಯಲು ವಿನಂತಿಸಲಾಗಿದೆ ಎಂದು ಪ್ರದೀಪ ಶೆಟ್ಟಿ ತಿಳಿಸಿದರು.

ಉಪಾಧ್ಯಕ್ಷ ರಮಾಕಾಂತ ಭಟ್ ಮನವಿ ಸ್ವೀಕರಿಸಿದರು. ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ಶೆಟ್ಟಿ ಹಾಗೂ ಸದಸ್ಯರಾದ ಮಧುಕರ ಬಿಲ್ಲವ, ದಯಾ ನಾಯಕ, ಖಾದರ್ ಆನವಟ್ಟಿ, ವನಿತಾ ಶೆಟ್ಟಿ, ಶೀಲೂ ಬ್ಲೇಜ್ ವಾಜ್ ಮತ್ತಿತರರು ಇದ್ದರು.

ಹೋರಾಟ ಮಾಡುತ್ತೇವೆ: ನೊಟೀಸ್ ನೀಡಿದರೂ ಮೀಟಿಂಗ್ ಕರೆಯದೇ ಇರಲು ಯಾವ ಶಕ್ತಿ ಕಾರಣ? ಅಧ್ಯಕ್ಷರಿಗೆ ಯಾವ ಕಚೇರಿಯಿಂದ ನಿರ್ದೇಶಕ ಇದೆ? ವಿರೋಧ ಪಕ್ಷವಾಗಿ ನಮಗೆ ಜವಾಬ್ದಾರಿ ಇದೆ. ಬಿಜೆಪಿ ಭ್ರಷ್ಟಾಚಾರಿಗಳ ಜತೆ ಶಾಮೀಲು ಆಗಿರುವ ಕಾರಣ ಈ ರೀತಿ ವಿಳಂಬ ನೀಡಿ ಅನುಸರಿಸುತ್ತಿದೆ. ಶೀಘ್ರ ಮೀಟಿಂಗ್ ನಡೆಸದೇ ಹೋದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ನಗರಸಭೆ ವಿರೋಧ ಪಕ್ಷದ ನಾಯಕ ಪ್ರದೀಪ ಶೆಟ್ಟಿ ಹೇಳಿದರು.