ಸಾರಾಂಶ
ಶಿರಸಿ: ನಗರದಲ್ಲಿ ನಿರ್ಮಾಣವಾಗುತ್ತಿರುವ ಪಂಡಿತ ಸಾರ್ವಜನಿಕ ಹೈಟೆಕ್ ಆಸ್ಪತ್ರೆಗೆ ಅಗತ್ಯ ಯಂತ್ರೋಪಕರಣ ಮತ್ತು ಮಾನವ ಸಂಪನ್ಮೂಲ ಒದಗಿಸಲು ₹೧೪ ಕೋಟಿ ಪ್ರಸ್ತಾವನೆ ಸಲ್ಲಿಕೆಯಾಗಿದೆ. ಅದಕ್ಕೆ ಅನುಮೋದನೆ ನೀಡಲಾಗುತ್ತದೆ ಎಂದು ಆರೋಗ್ಯ ಇಲಾಖೆ ಸಚಿವ ದಿನೇಶ ಗುಂಡೂರಾವ್ ಹೇಳಿದರು.
ಅವರು ಶುಕ್ರವಾರ ಶಿರಸಿಯಲ್ಲಿ ಮಾಧ್ಯಮದವರ ಜತೆ ಮಾತನಾಡಿ, ಆಸ್ಪತ್ರೆ ಕಟ್ಟಡ ನಿರ್ಮಾಣ ಜುಲೈ ತಿಂಗಳಿನಲ್ಲಿ ಮುಕ್ತಾಯಗೊಳ್ಳುತ್ತದೆ ಎಂದು ಕಾಮಗಾರಿ ಪರಿಶೀಲನೆ ನಡೆಸಿದಾಗ ತಿಳಿಸಿದ್ದಾರೆ. ಕಾರವಾರ ಜಿಲ್ಲಾಸ್ಪತ್ರೆಯು ಮೆಡಿಕಲ್ ಕಾಲೇಜ್ ಸೇರಿರುವುದರಿಂದ ಪ್ರತ್ಯೇಕ ಜಿಲ್ಲಾಸ್ಪತ್ರೆ ನಡೆಸಲು ಅವಕಾಶ ಮಾಡಿಕೊಂಡಿದ್ದೇವೆ. ಈಗಾಗಲೇ ಕೊಳ್ಳೆಗಾಲದಲ್ಲಿ ಪ್ರತ್ಯೇಕ ಆಸ್ಪತ್ರೆಗೆ ಅನುಮತಿ ನೀಡಲಾಗಿದೆ. ಬೀದರ್, ರಾಯಚೂರ ಜಿಲ್ಲೆಯಲ್ಲಿಯೂ ಈ ಪ್ರಸ್ತಾವ ಇದೆ. ಅದೇ ಮಾದರಿಯಲ್ಲಿ ಶಿರಸಿಯಲ್ಲೂ ಆರಂಭಿಸಲು ಅವಕಾಶ ಇದೆ. ಶಸ್ತ್ರಚಿಕಿತ್ಸೆ, ತುರ್ತು ಚಿಕಿತ್ಸೆಗೆ ಟ್ರಾಮಾ ಸೆಂಟರ್ ನೀಡುತ್ತೇವೆ. ಈಗಾಗಲೇ ಹಳೆಯ ೧೦೦ ಹಾಸಿಗೆ ಆಸ್ಪತ್ರೆ ಸೇರಿ ೩೫೦ ಹಾಸಿಗೆ ಆಸ್ಪತ್ರೆ ಆಗಲಿರುವುದರಿಂದ ಮುಖ್ಯಮಂತ್ರಿ ಸಿದ್ದರಾಮಯ್ಯ ಜತೆ ಮಾತನಾಡಿ ಜಿಲ್ಲಾ ಆಸ್ಪತ್ರೆ ಸ್ಥಾನ, ಸೌಲಭ್ಯ ಕೊಡಿಸುತ್ತೇನೆ ಎಂದು ಭರವಸೆ ನೀಡಿದರು.ಗ್ರಾಮೀಣ ಭಾಗಗಳ ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ವೈದ್ಯರ ಕೊರತೆ ಇದೆ. ಸಭೆಯಲ್ಲಿಯೂ ಚರ್ಚೆಯಾಗಿದೆ. ಗುತ್ತಿಗೆ ಆಧಾರದಲ್ಲಿಯೂ ನೇಮಕಾತಿ ಅರ್ಜಿ ಹಾಕುತ್ತಿಲ್ಲ. ವರ್ಗಾವಣೆಯಲ್ಲಿಯೂ ಬರುತ್ತಿಲ್ಲ. ತುರ್ತು ಚಿಕಿತ್ಸೆ ನೀಡಲು ಪರ್ಯಾಯ ವ್ಯವಸ್ಥೆಯಾಗಿ ಆಯುಷ್ ವೈದ್ಯರನ್ನು ನೇಮಕಗೊಳಿಸಲು ಚರ್ಚಿಸಿ, ಕ್ರಮ ವಹಿಸಲಾಗುತ್ತದೆ ಎಂದ ಅವರು, ಸಿಬ್ಬಂದಿಗಳ ಕೊರತೆಯಿಂದ ೧೦೮ ಆ್ಯಂಬುಲೆನ್ಸ್ ಸೇವೆಯಲ್ಲಿ ವ್ಯತ್ಯಾಸವಾಗುತ್ತಿರುವುದು ನಿಜ. ೨೦೦೮ ರಿಂದ ಖಾಸಗಿ ಕಂಪೆನಿಯೊಂದು ೧೦೮ ಆ್ಯಂಬುಲೆನ್ಸ್ ನಿರ್ವಹಣೆ ಮಾಡುತ್ತಿತ್ತು. ನಂತರ ಟೆಂಡರ್ ಆಗದೇ ಸಮಸ್ಯೆಯಾಗಿತ್ತು. ಟೆಂಡರ್ ಕರೆದಾಗಲೂ ಅಂತಿಮಗೊಳಿಸಲು ಸಾಧ್ಯವಾಗಿಲ್ಲ. ಆರೋಗ್ಯ ಇಲಾಖೆಯಿಂದ ೧೦೮ ಆ್ಯಂಬುಲೆನ್ಸ್ ನಿರ್ವಹಣೆ ಮಾಡಲಾಗುತ್ತದೆ. ಚಾಮರಾಜನಗರ ಜಿಲ್ಲೆಯಲ್ಲಿ ಪ್ರಾಯೋಗಿಕವಾಗಿ ಆರಂಭ ಮಾಡುತ್ತೇವೆ. ನಂತರ ಎಲ್ಲ ಜಿಲ್ಲೆಗಳಿಗೂ ವಿಸ್ತರಣೆ ಮಾಡುತ್ತೇವೆ. ಜಿಲ್ಲೆಯಲ್ಲಿಯೇ ಕಂಟ್ರೋಲ್ ರೂಮ್ ಸ್ಥಾಪಿಸಿ, ಆರೋಗ್ಯ ಇಲಾಖೆಯ ನಿಯಂತ್ರಣದಲ್ಲಿ ಆಧುನಿಕ ವ್ಯವಸ್ಥೆಯನ್ನೊಳಗೊಂಡ ೧೦೮ ಆ್ಯಂಬುಲೆನ್ಸ್ ಸೇವೆ ನೀಡುತ್ತೇವೆ ಎಂದು ಹೇಳಿದರು.
ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದನೆ ಘಟನೆ ಅಮಾನುಷವಾದದ್ದು, ಇಡೀ ದೇಶವು ಇದನ್ನು ಖಂಡಿಸಿದೆ. ಜಮ್ಮು ಕಾಶ್ಮೀರದ ಸ್ಥಿತಿಗತಿ ಸರಿಯಿಲ್ಲ ಎಂಬುದನ್ನು ಸಾಬೀತುಪಡಿಸಿದೆ. ಉಗ್ರಗಾಮಿಗಳ ಮೇಲೆ ಎಲ್ಲ ರೀತಿಯ ಕ್ರಮವನ್ನು ಕೇಂದ್ರ ಸರ್ಕಾರ ತೆಗೆದುಕೊಳ್ಳಬೇಕು. ಜನರ ಸುರಕ್ಷತೆ ಮತ್ತು ಜೀವ ರಕ್ಷಣೆ ಸರ್ಕಾರದ ಜವಾಬ್ದಾರಿಯಾಗಿದ್ದು, ಒಗ್ಗಟ್ಟಿನಿಂದ ಇದರ ವಿರುದ್ಧ ಹೋರಾಡಬೇಕಿದೆ. ಗುಪ್ತಚರ ಇಲಾಖೆ ಮತ್ತು ಭದ್ರತಾ ಇಲಾಖೆಯು ನಿರ್ಲಕ್ಷ್ಯವಹಿದಂತೆ ಗೋಚರವಾಗುತ್ತದೆ. ಇದು ಒಂದು ದೊಡ್ಡ ವೈಫಲ್ಯವಾಗಿದ್ದು, ಭಯೋತ್ಪಾದನೆ ವಿರುದ್ಧ ನಾವೆಲ್ಲರೂ ಒಂದಾಗಿ ನಿಲ್ಲಬೇಕು ಎಂದರು.ಈ ವೇಳೆ ಶಾಸಕ ಭೀಮಣ್ಣ ನಾಯ್ಕ, ಆರೋಗ್ಯ ಇಲಾಖೆಯ ಆಯುಕ್ತ ಶಿವಕುಮಾರ, ಸಹಾಯಕ ಆಯುಕ್ತೆ ಕೆ.ವಿ.ಕಾವ್ಯಾರಾಣಿ ಮತ್ತಿತರರು ಇದ್ದರು.