ಶಿರಸಿಯ ಆಡಳಿತ ಸೌಧದಲ್ಲಿ ಸ್ವಚ್ಛತೆ ಮಾಯ

| Published : Mar 23 2024, 01:08 AM IST

ಸಾರಾಂಶ

ಶೌಚಾಲಯದ ಸ್ವಚ್ಛತೆ ಇಲ್ಲದಿರುವುದು, ಅಲ್ಲದೇ, ಕಚೇರಿಯ ಒಳಗಡೆಯೂ ಎಲ್ಲೆಂದರಲ್ಲಿ ಕಸ ಚೆಲ್ಲಾಪಿಯಲ್ಲಿಯಾಗಿ ಬಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛತೆ ಮಾಡಿಸುವುದಕ್ಕೆ ಮುಂದಾಗುತ್ತಿಲ್ಲ.

ಶಿರಸಿ: ಒಂದೇ ಸೂರಿನಡಿ ಎಲ್ಲ ಇಲಾಖೆಗಳು ಕಾರ್ಯನಿರ್ವಹಿಸುವುದರಿಂದ ಸಾರ್ವಜನಿಕರಿಗೆ ಅನುಕೂಲವಾಗುತ್ತದೆ ಎಂದು ಸರ್ಕಾರ ಪ್ರತಿ ತಾಲೂಕು ವ್ಯಾಪ್ತಿಯಲ್ಲಿ ಆಡಳಿತ ಸೌಧ ನಿರ್ಮಿಸಿದ್ದು, ಆದರೆ ಶಿರಸಿಯ ಆಡಳಿತ ಸೌಧದಲ್ಲಿ(ಮಿನಿ ವಿಧಾನಸೌಧ) ಸ್ವಚ್ಛತೆ ಎಂಬುದು ಮಾಯವಾಗಿ, ಅವ್ಯವಸ್ಥೆಯ ಆಗರವಾಗಿದೆ.

ನಗರದ ಮಿನಿ ವಿಧಾನಸೌಧದಲ್ಲಿ ಮುಖ್ಯವಾಗಿ ತಹಸೀಲ್ದಾರ್‌ ಕಚೇರಿ, ಉಪನೋಂದಣಾಧಿಕಾರಿ, ಆಹಾರ ಮತ್ತು ನಾಗರಿಕ ಮೂಲ ಸೌಕರ್ಯ, ಕಂದಾಯ, ಖಜಾನೆ, ಭೂಮಾಪನಾ, ಚುನಾವಣಾ ವಿಭಾಗ, ಆಧಾರ ಕಾರ್ಡ್ ತಿದ್ದುಪಡಿ ವಿಭಾಗ ಸೇರಿದಂತೆ ಇನ್ನಿತರ ಮುಖ್ಯ ಕಚೇರಿಗಳು ಆಡಳಿತ ಸೌಧದಲ್ಲಿ ಕಾರ್ಯನಿರ್ವಹಿಸುತ್ತವೆ. ನಿತ್ಯ ಸರ್ಕಾರಿ ಅಧಿಕಾರಿಗಳನ್ನು ಹೊರತುಪಡಿಸಿ, ತಾಲೂಕಿನ ವಿವಿಧ ಭಾಗಗಳಿಂದ ತಮ್ಮ ಕೆಲಸಕ್ಕಾಗಿ ಅಗತ್ಯ ಕೆಲಸಕ್ಕಾಗಿ ಸಾವಿರಾರು ಜನರು ಬಂದು ಹೋಗುತ್ತಾರೆ. ಶೌಚಾಲಯದ ಸ್ವಚ್ಛತೆ ಇಲ್ಲದಿರುವುದು, ಅಲ್ಲದೇ, ಕಚೇರಿಯ ಒಳಗಡೆಯೂ ಎಲ್ಲೆಂದರಲ್ಲಿ ಕಸ ಚೆಲ್ಲಾಪಿಯಲ್ಲಿಯಾಗಿ ಬಿದ್ದರೂ ಅಧಿಕಾರಿಗಳು ಮಾತ್ರ ಸ್ವಚ್ಛತೆ ಮಾಡಿಸುವುದಕ್ಕೆ ಮುಂದಾಗುತ್ತಿಲ್ಲ.

ಕುಡಿಯುವ ನೀರಿನ ವ್ಯವಸ್ಥೆಯಿಲ್ಲ: ಮಿನಿ ವಿಧಾನಸೌಧದಲ್ಲಿ ಸಬ್ ರಿಜಿಸ್ಟ್ರಾರ್ ಕಚೇರಿಯ ಎದುರು ನಿತ್ಯ ನೂರಾರು ಸಾರ್ವಜನಿಕರಾದಿಯಾಗಿ ವಯೋವೃದ್ಧರು ತಮ್ಮ ಜಮೀನಿನ ರಿಜಿಸ್ಟ್ರಾರ್ ಮಾಡಲು ದಿನವಿಡೀ ಕಾದು ಕುಳಿತುಕೊಳ್ಳುತ್ತಾರೆ ಮತ್ತು ಆಹಾರ ವಿಭಾಗದ ಎದುರು ಪಡಿತರ ಚೀಟಿ ತಿದ್ದುಪಡಿ, ಹೆಸರು ನೋಂದಣಿಗೆ ಎಂದು ನೂರಾರು ಜನರು ಕುಳಿತುಕೊಂಡಿರುತ್ತಾರೆ. ಸರ್ವರ್ ಸಮಸ್ಯೆಯಿಂದ ಒಂದು ದಿನದಲ್ಲಿ ಆಗುವ ಕೆಲಸ ನಾಲ್ಕೈದು ಬಾರಿ ಕಚೇರಿಗೆ ಅಲೆದಾಡಬೇಕು.

ಎರಡು ಅಂತಸ್ತಿನ ಕಟ್ಟಡದಲ್ಲಿ ಜನರಿಗೆ ಕುಡಿಯುವ ನೀರಿನ ವ್ಯವಸ್ಥೆ ಸರಿ ಇಲ್ಲ. ಕೆಳ ಅಂತಸ್ತಿನಲ್ಲಿ ಒಂದು ಬ್ಯಾರಲ್‌ನಲ್ಲಿ ನೀರು ಹಾಕಿ ಇಟ್ಟಿರುವುದನ್ನು ಗಮನಿಸಿದರೆ ಆ ಬ್ಯಾರಲ್ ಸ್ವಚ್ಛಗೊಳಿಸದೇ ಸಾಕಷ್ಟು ದಿನವಾಗಿದೆ ಎಂಬುದಾಗಿ ಕಾಣುತ್ತದೆ. ದಿನನಿತ್ಯ ಲಕ್ಷಾಂತರ ರು. ವ್ಯವಹಾರ ನಡೆಸುವ ಸರ್ಕಾರಿ ಸೌಧವು ಅವ್ಯವಸ್ಥೆಯ ಆಗರದ ತಾಣವಾಗಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಶೌಚಾಲಯಲ್ಲಿ ದುರ್ನಾತ: ಆಡಳಿತ ಸೌಧದಕ್ಕೆ ಬರುವ ಜನರಿಗೆ ಶೌಚಾಲಯದ ತೊಂದರೆ ಬಹುಮುಖ್ಯವಾಗಿ ಕಾಡುತ್ತಿದೆ. ಕಟ್ಟಡದಲ್ಲಿ ಎಲ್ಲಿ ನೋಡಿದರೂ ಎಲೆ ಅಡಕೆ, ಗುಟಕಾ ತಿಂದು ಉಗಿಯುತ್ತಾರೆ. ಇನ್ನೂ ಶೌಚಾಲಯಕ್ಕೆ ಪ್ರವೇಶಿಸಿದರೆ ಮೂಗು ಕಟ್ಟಿಕೊಂಡು ಶೌಚ ಮಾಡುವ ಪರಿಸ್ಥಿತಿ ಎದುರಾಗಿದೆ.

ಹೆಸರಿಗಷ್ಟೇ ವಿಧಾನಸೌಧವಾಗಿದ್ದು, ಇಲ್ಲಿ ಅವ್ಯವಸ್ಥೆಯ ಆಗರವಾಗಿದೆ. ಹಿರಿಯ ಅಧಿಕಾರಿಗಳು ಇರುವ ಜಾಗವು ಇಂತಹ ಪರಿಸ್ಥಿತಿಯಲ್ಲಿರುವುದು ಅವರ ಮಾನ ಹರಾಜು ಹಾಕುವಂತಾಗುತ್ತದೆ. ಆದಷ್ಟು ಶೀಘ್ರವಾಗಿ ಸ್ವಚ್ಛತೆ ಕಾಪಾಡಿಕೊಳ್ಳುವ ಬಗ್ಗೆ ಗಮನ ವಹಿಸಬೇಕೆಂದು ಸಾರ್ವಜನಿಕರು ಆಗ್ರಹಿಸುತ್ತಿದ್ದಾರೆ.ಅನುಕೂಲ ಮಾಡಿಕೊಡಿ: ನಗರದ ಮಿನಿ ವಿಧಾನಸೌಧದ ತಹಸೀಲ್ದಾರ್ ಕಚೇರಿಯಲ್ಲಿ ಶೌಚಾಲಯ ಗಬ್ಬೆದ್ದು ನಾರುತ್ತಿದೆ. ಎಲ್ಲಿ ನೋಡಿದರೂ ಪ್ಲಾಸ್ಟಿಕ್ ಬಾಟಲ್‌ಗಳಿಂದ ಗಲಿಜು ತಾಣವಾಗಿದೆ ಮಾರ್ಪಟ್ಟಿದೆ. ನಿತ್ಯ ನೂರಾರು ಸಾರ್ವಜನಿಕರು, ವೃದ್ಧರು ಕಚೇರಿ ಕೆಲಸಕ್ಕೆ ಬರುತ್ತಾರೆ. ಜನರಿಗೆ ಕುಡಿಯುವ ನೀರಿನ ವ್ಯವಸ್ಥೆಯು ಸರಿಯಾಗಿಲ್ಲ. ಹಿರಿಯ ಅಧಿಕಾರಿಗಳು ಇರುವ ಸ್ಥಳದಲ್ಲೇ ಈ ರೀತಿಯಾದರೆ ಹೇಗೆ? ಸಂಬಂಧಪಟ್ಟ ಅಧಿಕಾರಿಗಳು ಗಮನಹರಿಸಿ ಕಚೇರಿ ಕೆಲಸಕ್ಕೆ ಬರುವ ಜನರಿಗೆ ಅನುಕೂಲ ಮಾಡಿಕೊಡಬೇಕು ಎಂದು ಸಾಮಾಜಿಕ ಕಾರ್ಯಕರ್ತ ಗುರುಮೂರ್ತಿ ಹೆಗಡೆ ತಿಳಿಸಿದರು.