ಶಿರಸಿ ಟ್ರಾಫಿಕ್‌ ಠಾಣೆ ಇನ್ನು 10 ದಿನದಲ್ಲಿ ಕಾರ್ಯಾರಂಭ

| Published : Oct 02 2024, 01:06 AM IST

ಶಿರಸಿ ಟ್ರಾಫಿಕ್‌ ಠಾಣೆ ಇನ್ನು 10 ದಿನದಲ್ಲಿ ಕಾರ್ಯಾರಂಭ
Share this Article
  • FB
  • TW
  • Linkdin
  • Email

ಸಾರಾಂಶ

ತಾತ್ಕಾಲಿಕವಾಗಿ ಜಿಲ್ಲೆಯ ಪ್ರತಿ ಠಾಣೆಯಿಂದ ಒಂದೆರಡು ಸಿಬ್ಬಂದಿ ನೇಮಿಸಿ, ಟ್ರಾಫಿಕ್ ಠಾಣೆ ಪ್ರಾರಂಭಿಸುವುದು ಖಚಿತವಾಗಿದ್ದು, ಇನ್ನೂ ೧೦ ದಿನದಲ್ಲಿ ಈ ಠಾಣೆ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.

ಶಿರಸಿ: ದಿನದಿಂದ ದಿನಕ್ಕೆ ಅಭಿವೃದ್ಧಿಯಾಗುತ್ತಿರುವ ಶಿರಸಿ ನಗರದಲ್ಲಿ ಅಷ್ಟೇ ಪ್ರಮಾಣದಲ್ಲಿ ವಾಹನ ಸಂಖ್ಯೆಗಳು ಏರಿಕೆಯಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆ ದೊಡ್ಡ ಸಮಸ್ಯೆಯಾಗಿದ್ದು, ಹಿಂದಿನ ಸರ್ಕಾರದ ಅವಧಿಯಲ್ಲಿ ಶಿರಸಿಗೆ ಮಂಜೂರಾಗಿದ್ದ ಟ್ರಾಫಿಕ್ ಪೊಲೀಸ್ ಠಾಣೆಯು ಇನ್ನು ೧೦ ದಿನದೊಳಗೆ ಕಾರ್ಯಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಸಚಿವ ಅರಗ ಜ್ಞಾನೇಂದ್ರ ಅವರಿಗೆ ಶಿರಸಿಯಲ್ಲಿ ಸಂಚಾರ ಸಮಸ್ಯೆಯ ಕುರಿತು ಮನವರಿಕೆ ಮಾಡಿ, ಶಿರಸಿಗೆ ಸಂಚಾರ ಪೊಲೀಸ್ ಠಾಣೆ ಮಂಜೂರಿ ಮಾಡಿಸಲು ಹಿಂದಿನ ಶಾಸಕ ಹಾಗೂ ಹಾಲಿ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಪ್ರಮುಖ ಪಾತ್ರ ವಹಿಸಿದ್ದರು. ಆದರೆ ಮಂಜೂರಿಯಾದ ಸಂಚಾರ ಪೊಲೀಸ್ ಠಾಣೆ ಪ್ರಾರಂಭಗೊಳ್ಳುವ ಮುನ್ನ ವಿಧಾನಸಭಾ ಚುನಾವಣೆ ಘೋಷಣೆಯಾಗಿತ್ತು. ನಂತರ ಸರ್ಕಾರವೂ ಬದಲಾದಂತೆ ಸ್ಥಳೀಯ ಶಾಸಕರು ಬದಲಾದರು.

ಶಿರಸಿಯಲ್ಲಿ ಟ್ರಾಫಿಕ್ ಪೊಲೀಸ್ ಠಾಣೆ ಆರಂಭಕ್ಕೆ ಹಲವು ವಿಘ್ನಗಳು ಎದುರಾದ ಹಿನ್ನೆಲೆ ಶಿರಸಿಯ ಸಂಚಾರ ಠಾಣೆ ನನೆಗುದಿಗೆ ಬಿದ್ದಿತ್ತು. ಹಾಲಿ ಶಾಸಕ ಭೀಮಣ್ಣ ನಾಯ್ಕ ಶಿರಸಿಗೆ ಮಂಜೂರಾದ ಟ್ರಾಫಿಕ್ ಠಾಣೆಯನ್ನು ಶೀಘ್ರವಾಗಿ ಪ್ರಾರಂಭಿಸುವಂತೆ ಗೃಹ ಸಚಿವ ಜಿ. ಪರಮೇಶ್ವರ ಅವರನ್ನು ವೈಯಕ್ತಿಕವಾಗಿ ಭೇಟಿಯಾಗಿ ವಿನಂತಿಸಿಕೊಂಡಿದ್ದರು.

ಗೃಹ ಸಚಿವರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚಿಸಿದ್ದರು. ಕಾರವಾರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಶಿರಸಿಯಲ್ಲಿ ಟ್ರಾಫಿಕ್ ಠಾಣೆ ಆರಂಭಿಸುವ ವಿಷಯ ಪ್ರಸ್ತಾಪಿಸಿದರು. ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎಂ. ನಾರಾಯಣ ಅವರು ಶಿರಸಿ ಡಿವೈಎಸ್‌ಪಿ ಕೆ.ಎಲ್. ಗಣೇಶ ಅವರಿಗೆ ತಾತ್ಕಾಲಿಕವಾಗಿ ಪ್ರಾರಂಭಿಸಲು ಜಾಗವನ್ನು ಗುರುತಿಸುವಂತೆ ಸೂಚಿಸಿದ್ದರು.

ಆ ಹಿನ್ನೆಲೆಯಲ್ಲಿ ನಗರದ ಮಧ್ಯಭಾಗವಾದ ಹಾಗೂ ಡಿಎಸ್‌ಪಿ ಹಾಗೂ ಸಿಪಿಐ ಕಚೇರಿಯಿಂದ ಕೇವಲ ೧೫೦ ಮೀಟರ್ ಅಂತರದಲ್ಲಿರುವ ಮತ್ತು ಅಬಕಾರಿ ಇಲಾಖೆಯ ಅಧೀನದಲ್ಲಿರುವ ಹಳೆ ಟಿವಿ ಸ್ಟೇಶನ್ ಕಟ್ಟಡ ಖಾಲಿ ಇದ್ದು, ಆ ಕಟ್ಟಡವನ್ನು ತಾತ್ಕಾಲಿಕ ಟ್ರಾಫಿಕ್ ಪೊಲೀಸ್ ಠಾಣೆಗೆ ಗುರುತಿಸಲಾಗಿದೆ. ಜಿಲ್ಲಾಧಿಕಾರಿ ಆದೇಶದ ಮೂಲಕ ಕಟ್ಟಡ ಬಳಕೆಗೆ ಪರವಾನಗಿ ಸಿಗಬೇಕಿದೆ. ತಾತ್ಕಾಲಿಕವಾಗಿ ಜಿಲ್ಲೆಯ ಪ್ರತಿ ಠಾಣೆಯಿಂದ ಒಂದೆರಡು ಸಿಬ್ಬಂದಿ ನೇಮಿಸಿ, ಟ್ರಾಫಿಕ್ ಠಾಣೆ ಪ್ರಾರಂಭಿಸುವುದು ಖಚಿತವಾಗಿದ್ದು, ಇನ್ನೂ ೧೦ ದಿನದಲ್ಲಿ ಈ ಠಾಣೆ ಪ್ರಾರಂಭಗೊಳ್ಳಲಿದೆ ಎಂದು ತಿಳಿದುಬಂದಿದೆ.೧ ಪಿಎಸ್‌ಐ, ೨ ಎಎಸ್‌ಐ, ೮ ಹೆಡ್ ಕಾನಸ್ಟೇಬಲ್ ಹಾಗೂ ೩೧ ಸಿಬ್ಬಂದಿ ಸೇರಿ ೪೨ ವಿವಿಧ ದರ್ಜೆಯ ಹುದ್ದೆಗಳೊಂದಿಗೆ ಸಂಚಾರ ಠಾಣೆ ಮಂಜೂರಾತಿ ನೀಡಿ, ಸರ್ಕಾರ ಆದೇಶ ಹೊರಡಿಸಿತ್ತು. ಬದಲಾದ ಸರ್ಕಾರದ ವ್ಯವಸ್ಥೆಯಲ್ಲಿ ಅನುಷ್ಠಾನಕ್ಕೆ ಹಿನ್ನಡೆಯಾದರೂ ಇದೀಗ ಸಂಚಾರ ಠಾಣೆ ಆರಂಭಗೊಳ್ಳಲಿದೆ.

ಪಾರ್ಕಿಂಗ್‌ ವ್ಯವಸ್ಥೆ ಕಲ್ಪಿಸಿ: ಶಿರಸಿ ನಗರಕ್ಕೆ ಟ್ರಾಫಿಕ್ ಪೊಲೀಸ್ ಠಾಣೆ ಹಲವು ದಶಕದ ಬೇಡಿಕೆಯಾಗಿತ್ತು. ಇನ್ನು ೧೦ ದಿನದೊಳಗೆ ಆರಂಭಕ್ಕೆ ಹಸಿರುನಿಶಾನೆ ದೊರೆತಿರುವುದು ಸಂತಸದ ಸಂಗತಿ. ಟ್ರಾಫಿಕ್ ಪೊಲೀಸರು ಸಂಚಾರ ದಟ್ಟಣೆ ನಿಯಂತ್ರಿಸುವುದರ ಜತೆ ವಾಹನ ಚಾಲಕರಿಗೆ ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಬೇಕಿದೆ ಎಂದು ಸಾಮಾಜಿಕ ಕಾರ್ಯಕರ್ತ ಪರಮಾನಂದ ಹೆಗಡೆ ಆಗ್ರಹಿಸಿದರು.