ಸಾರಾಂಶ
ಕಲಘಟಗಿ: ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ ಖಾತ್ರಿ ಕಾನೂನು ಹಾಗೂ ದೇಶದ ರೈತರ ವಿವಿಧ ಬೇಡಿಕೆ ಈಡೇರಿಸಲು ಒತ್ತಾಯಿಸಿ ರಾಷ್ಟ್ರಿಯ ರೈತ ನಾಯಕ ಜಗಜಿತ್ ಸಿಂಗ್ ಧಲೇವಾಲ್ ಕೈಗೊಂಡ ಉಪವಾಸ ಸತ್ಯಾಗ್ರಹ 100 ದಿನಗಳು ಪೂರೈಸಿದರೂ ಕೇಂದ್ರ ಸರ್ಕಾರ ರೈತರ ಸಮಸ್ಯೆ ಪರಿಹರಿಸುತ್ತಿಲ್ಲ ಎಂದು ಜಿಲ್ಲಾ ಕಬ್ಬು ಬೆಳೆಗಾರರ ಸಂಘಟನೆಯಿಂದ ಮೌನ ಧರಣಿ ಸತ್ಯಾಗ್ರಹ ನಡೆಸಲಾಯಿತು.
ಪಟ್ಟಣದ ತಹಸೀಲ್ದಾರ್ ಕಚೇರಿ ಮುಂದೆ ಬುಧವಾರ 4 ಗಂಟೆಗಳ ಕಾಲ ಧರಣಿ ನಡೆಸಿ, ಆನಂತರ ಗ್ರೇಡ್-2 ತಹಸೀಲ್ದಾರ್ ಬಸವರಾಜ ಹೊಂಕನ್ನದವರ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದರು.ರೈತರ ಸಾಲ ಮನ್ನಾ, ಸ್ವಾಮಿನಾಥ ವರದಿ ಜಾರಿ, 60 ವರ್ಷ ತುಂಬಿದ ರೈತರಿಗೆ ಪಿಂಚಣಿ ಯೋಜನೆ, ಕಬ್ಬಿಗೆ ಎಫ್‌ಆರ್‌ಪಿ ದರ ಹೆಚ್ಚಿಸುವುದು, ಕೃಷಿ ಸಾಲಕ್ಕೆ ಸಿಬಿಲ್ ಸ್ಕೋರ್ ಕೈಬಿಡಬೇಕು, ಕೃಷಿ ಸಾಲ ನಿಯಮ ಬದಲಾಗಬೇಕು ಇನ್ನಿತರ ಬೇಡಿಕೆ ಈಡೇರಿಸಲು ಮನವಿಯಲ್ಲಿ ತಿಳಿಸಿದ್ದಾರೆ.
ದೆಹಲಿಯಲ್ಲಿ ಸಂಯುಕ್ತ ಕಿಸಾನ್ ಮೋರ್ಚಾದ ರೈತ ಸಂಘಟನೆಗಳಿಂದ ನಡೆಯುತ್ತಿರುವ ಹೋರಾಟಕ್ಕೆ ರೈತರ ಬೇಡಿಕೆಗಳ ಬಗ್ಗೆ ಕೇಂದ್ರ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳುತ್ತಿಲ್ಲ, ಕಳೆದ ವರ್ಷ ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ನೇತೃತ್ವದಲ್ಲಿ 5 ಸಭೆ ನಡೆಸಿದರೂ ಸಮಸ್ಯೆ ಪರಿಹರಿಸಿಲ್ಲ. ರೈತರ ಹೋರಾಟಕ್ಕೆ ವರ್ಷ ತುಂಬಿದ ಮೇಲೆ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚವ್ಹಾಣ ಹಾಗೂ ಪ್ರಹ್ಲಾದ ಜೋಶಿ ಎರಡು ಸಂಧಾನ ಸಭೆ ನಡೆಸಿ, ಮತ್ತೆ ಮಾ. 19ರಂದು 3ನೇ ಸಭೆ ನಿಗದಿಯಾಗಿದ್ದು, ಕೇಂದ್ರ ಸರ್ಕಾರ ಕೇವಲ ಸಭೆ ನಡೆಸಿ ವಿಳಂಬ ನೀತಿ ಅನುಸರಿಸುತ್ತಿರುವುದು ಸರಿಯಲ್ಲ ಎಂದರು.ದಕ್ಷಿಣ ಭಾರತದ ತಮಿಳುನಾಡು, ಕೇರಳ, ತೆಲಂಗಾಣ ಹಾಗೂ ವಿವಿಧ ರಾಜ್ಯಗಳ ರೈತ ಮುಖಂಡರು ಕೇಂದ್ರ ಸರ್ಕಾರದ ನೀತಿ ವಿರುದ್ಧ ಬೇಸರ ವ್ಯಕ್ತ ಪಡಿಸಿದ್ದಾರೆ. ಮಾ. 19ರಂದು ನಿಗದಿಯಾದ ಸಭೆಯಲ್ಲಿ ರೈತರ ಸಮಸ್ಯೆ ಬಗೆಹರಿಯಬೇಕು, ಇಲ್ಲದಿದ್ದರೆ ರಾಷ್ಟ್ರಿಯ ರೈತ ನಾಯಕ ಧಲೇವಾಲ್ ಅವರ ಜೀವಕ್ಕೆ ಅಪಾಯವಾದರೆ ಕೇಂದ್ರ ಸರ್ಕಾರವೇ ಹೊಣೆ ಹೊರಬೇಕಾಗುತ್ತದೆ ಎಚ್ಚರಿಕೆ ನೀಡಿದರು.
ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಬೆಳಗಾವ್ಕರ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪರಶುರಾಮ ಎತ್ತಿನಗುಡ್ಡ, ಉಪಾಧ್ಯಕ್ಷ ಉಳವಪ್ಪ ಬಳಿಗೇರ, ಬಸನಗೌಡ ಸಿದ್ದನಗೌಡ, ನಾಗೇಶ ಇಟಗಿ, ಶಿವು ತಡಸ, ಜ್ಯೋತಿಬಾ ಹುಲಕೊಪ್ಪ, ನಿಂಗಪ್ಪ ತಡಸ ಇದ್ದರು.