ರಾಮನಗರ: ಮಹರ್ಷಿ ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ದುರುಪಯೋಗ ಆರೋಪ ಹೊತ್ತಿರುವ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 2ನೇ ದಿನವೂ ಮುಂದುವರಿದಿದೆ

ರಾಮನಗರ: ಮಹರ್ಷಿ ವಾಲ್ಮೀಕಿ ನಿಗಮದ ಕೋಟ್ಯಂತರ ಹಣ ದುರುಪಯೋಗ ಆರೋಪ ಹೊತ್ತಿರುವ ಬಿ.ನಾಗೇಂದ್ರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಆಗ್ರಹಿಸಿ ಬಿಜೆಪಿ ನಡೆಸುತ್ತಿರುವ ಅನಿರ್ದಿಷ್ಟಾವಧಿ ಧರಣಿ 2ನೇ ದಿನವೂ ಮುಂದುವರಿದಿದೆ.

ಜಿಲ್ಲಾಧಿಕಾರಿ ಕಚೇರಿ ಎದುರು ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ನೇತೃತ್ವದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ ನೂರಾರು ಕಾರ್ಯಕರ್ತರು ಭಾಗವಹಿಸಿದ್ದರು. ಕಾಂಗ್ರೆಸ್ ಸರ್ಕಾರ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹಾಗೂ ಸಚಿವ ಬಿ.ನಾಗೇಂದ್ರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಜಿಲ್ಲಾಧ್ಯಕ್ಷ ಆನಂದಸ್ವಾಮಿ ಮಾತನಾಡಿ, ಪರಿಶಿಷ್ಟ ಪಂಗಡದ ಜನರ ಅನುಕೂಲ ಮತ್ತು ಅಭ್ಯುದಯಕ್ಕೆ ಮೀಸಲಿಟ್ಟ ಹಣವನ್ನು ಕಾಂಗ್ರೆಸ್ ಸರ್ಕಾರ ಹೇಗೆಲ್ಲ ದುರ್ಬಳಕೆ ಮಾಡಿಕೊಂಡಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ತುಳಿತಕ್ಕೊಳಗಾದ ಜನರ ಅಭಿವೃದ್ಧಿಗೆ ಇಟ್ಟಿದ್ದ ಹಣವನ್ನು ಲೂಟಿ‌ ಹೊಡೆದ ನಾಗೇಂದ್ರ ಸಚಿವ ಸ್ಥಾನಕ್ಕೆ ಅನರ್ಹ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲಿ ಇಲ್ಲವಾದಲ್ಲಿ ಅವರನ್ನು ಸಂಪುಟದಿಂದ ಸಿಎಂ ಡಿಕೆಶಿ ಸಮರ್ಥಿಸಿಕೊಳ್ಳುವುದನ್ನು ಬಿಟ್ಟು, ನೈತಿಕ ಹೊಣೆ ಹೊತ್ತು ಅವರಿಂದ ರಾಜೀನಾಮೆ ಪಡೆಯಬೇಕು ಎಂದು ಒತ್ತಾಯಿಸಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಬಸವನಪುರ ಮಾತನಾಡಿ, ಸಚಿವ ನಾಗೇಂದ್ರ 187 ಕೋಟಿ ಹಗರಣದಲ್ಲಿ ಜೈಲಿಗೆ ಹೋಗಿ ಬಂದಿದ್ದಾರೆ. ಅವರನ್ನು ಮತ್ತೆ ಮಂತ್ರಿ ಮಾಡಿದ್ದಾರೆ. ಇದು ಕಾಂಗ್ರೆಸ್ ಭಂಡ ಸರ್ಕಾರ ಎನ್ನುವುದಕ್ಕೆ ಸ್ಪಷ್ಟ ನಿದರ್ಶನ. ಅವರನ್ನು ತಕ್ಷಣವೇ ಸಂಪುಟದಿಂದ ವಜಾಗೊಳಿಸಬೇಕು. ನಾಗೇಂದ್ರ ರಾಜೀನಾಮೆ ಕೊಡದಿದ್ದಲ್ಲಿ ತಾಲೂಕು ಮತ್ತು ಹೋಬಳಿ ಮಟ್ಟದಲ್ಲಿ ಹೋರಾಟ ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಪ್ರತಿಭಟನೆಯಲ್ಲಿ ರಾಜ್ಯ ಪರಿಷತ್ ಸದಸ್ಯ ಆರ್.ವಿ.ಸುರೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ರಾಮನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಎಸ್.ಆರ್.ನಾಗರಾಜ್, ಮುರುಳಿ, ಜಿಲ್ಲಾ ಎಸ್‌ಸಿ ಮೋರ್ಚಾ ಅಧ್ಯಕ್ಷ ಕಾಳಯ್ಯ, ಜಿಲ್ಲಾ ಕಾರ್ಯಾಲಯ ಕಾರ್ಯದರ್ಶಿ ಚನ್ನಪ್ಪ,

ಚನ್ನಪಟ್ಟಣ ಮಂಡಳ ಅಧ್ಯಕ್ಷ ಚೇತನ್, ರಾಮನಗರ ನಗರ ಘಟಕದ ಅಧ್ಯಕ್ಷ ಚಂದನ್ ಮೋರೆ, ಮಾಧ್ಯಮ ಪ್ರಮುಖ್ ಸಿದ್ದರಾಜು, ನಗರಸಭೆ ಮಾಜಿ ಸದಸ್ಯ ನಾಗೇಶ್ ಮುಖಂಡರಾದ ಪದ್ಮನಾಭ್, ವಿಶಾಲ್ ಜೈನ್, ಶಿವಮುತ್ತು, ರವಿಕುಮಾರ್, ಪಾರ್ಥ, ಶೇಖರ್, ಕಿಶನ್, ರಂಜನ್, ಲಕ್ಷ್ಮೀ, ನಾಗಮ್ಮ, ಮಮತಾ, ಹೇಮಾ, ಅಶ್ವಥ್, ಟೆಂಪೋ ಶಿವಣ್ಣ, ನಿಂಗರಾಜು, ನಾರಾಯಣ್, ವೀರಭದ್ರಯ್ಯ ಮತ್ತಿತರರು ಭಾಗವಹಿಸಿದ್ದರು.

18ಕೆಆರ್ ಎಂಎನ್ 9.ಜೆಪಿಜಿ

ರಾಮನಗರದ ಜಿಲ್ಲಾಧಿಕಾರಿಗಳ ಕಚೇರಿ ಬಳಿ ಬಿಜೆಪಿ ಕಾರ್ಯಕರ್ತರು ಎರಡನೇ ದಿನವೂ ಅನಿರ್ದಿಷ್ಟಾವಧಿ ಧರಣಿ ಮುಂದುವರೆಸಿದರು.