ಎಸ್‌ಐಟಿ ತನಿಖೆ ದಾರಿ ತಪ್ಪಿಸುತ್ತಿರುವ ಎಚ್‌ಡಿಕೆ: ಕಾಂಗ್ರೆಸ್‌ ಮುಖಂಡ

| Published : May 24 2024, 12:56 AM IST / Updated: May 24 2024, 02:18 PM IST

ಎಸ್‌ಐಟಿ ತನಿಖೆ ದಾರಿ ತಪ್ಪಿಸುತ್ತಿರುವ ಎಚ್‌ಡಿಕೆ: ಕಾಂಗ್ರೆಸ್‌ ಮುಖಂಡ
Share this Article
  • FB
  • TW
  • Linkdin
  • Email

ಸಾರಾಂಶ

ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪಿಸಿದರು. ಹಾಸನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

  ಹಾಸನ :  ಪೆನ್‌ಡ್ರೈವ್ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕರ ಹೆಸರು ಹೇಳುವ ಮೂಲಕ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಎಸ್‌ಐಟಿ ತನಿಖೆಯ ದಿಕ್ಕು ತಪ್ಪಿಸುವ ಹುನ್ನಾರ ಮಾಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಬಾಗೂರು ಮಂಜೇಗೌಡ ಆರೋಪಿಸಿದರು.

ಮಾಧ್ಯಮಗೋಷ್ಠಿಯಲ್ಲಿ ಗುರುವಾರ ಮಾತನಾಡಿ, ‘ಲೈಂಗಿಕ ಕುರಿತು ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್‌ಐಟಿ ಈಗಾಗಲೇ ತನಿಖೆ ನಡೆಸುತ್ತಿದೆ. ಆದರೆ ಜವಾಬ್ದಾರಿಯುತ ಸ್ಥಾನದಲ್ಲಿ ಇರುವ ಕುಮಾರಸ್ವಾಮಿ ಅವರು ವಿಡಿಯೋ ಮಾಡಿಕೊಂಡಿರುವ ಪ್ರಜ್ವಲ್ ರೇವಣ್ಣ ಅವರನ್ನು ಕರೆತಂದು ತನಿಖೆಗೆ ಒಳಪಡಿಸುವ ಬದಲು ನಾಮಕಾವಸ್ಥೆಗೆ ಮಾಧ್ಯಮದ ಮುಂದೆ ಕುಳಿತು ಹೇಳಿಕೆ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರಕರಣದಲ್ಲಿ ಪ್ರಮುಖ ದಾಖಲೆಗಳು ಸಿಕ್ಕಿರುವ ಹಾಸನದ ಮಾಜಿ ಶಾಸಕರ ಬೆಂಬಲಿಗರನ್ನು ಸರಿಯಾಗಿ ತನಿಖೆ ನಡೆಸಿದರೆ ನಿಜವಾದ ಸತ್ಯಾಂಶ ಹೊರಬರಲಿದೆ’ ಎಂದು ಹೇಳಿದರು.

‘ಪೆನ್‌ಡ್ರೈವ್‌ ಪ್ರಕರಣದಲ್ಲಿ ಆರೋಪ ಇರುವ ಎಲ್ಲರನ್ನೂ ಬಂಧಿಸಿ ತನಿಖೆ ನಡೆಸಬೇಕು. ಮಾಜಿ ಶಾಸಕರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ಐವರ ಬಗ್ಗೆ ಮಾಜಿ ಸಿಎಂ ಕುಮಾರಸ್ವಾಮಿ ಮಾತನಾಡುವ ಬದಲು ಮೈತ್ರಿ ಮಾಡಿಕೊಂಡಿರುವ ಬಿಜೆಪಿ ಮುಖಂಡರ ಕೈವಾಡದ ಬಗ್ಗೆ ಮಾತನಾಡಲಿ’ ಎಂದು ಸವಾಲು ಹಾಕಿದರು.

‘ದೇವರಾಜಗೌಡನನ್ನ ಮುಂದಿಟ್ಟುಕೊಂಡು ಬಿಜೆಪಿಯ ನಾಯಕರನ್ನು ರಕ್ಷಿಸಲು ಯತ್ನಿಸುತ್ತಿದ್ದಾರೆ. ಆತ ವಿನಾಕಾರಣ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುತ್ತಿದ್ದು, ಇದಕ್ಕೆಲ್ಲಾ ಕುಮಾರಸ್ವಾಮಿ ಕುಮಕ್ಕು ನೀಡಿದ್ದಾರೆ. ಡಿ.ಕೆ.ಶಿವಕುಮಾರ್ ಅವರನ್ನು ತೇಜೋವಧೆ ಮಾಡಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿಯವರಿಗೆ ನಿಜವಾಗಿಯೂ ನೈತಿಕತೆ ಇದ್ದರೆ ನೈಜ ತನಿಖೆಗೆ ಸಹಾಯಕರಿಸಬೇಕು’ ಎಂದು ಆಗ್ರಹಿಸಿದರು.

‘ಪೆನ್‌ಡ್ರೈವ್ ಸೃಷ್ಟಿಯಾಗಿದ್ದು ಹಾಸನದಲ್ಲೇ, ಇಲ್ಲಿಂದಲೇ ಕೇಂದ್ರ ಗೃಹ ಸಚಿವ ಅಮಿತ್ ಶಾ ಮೊದಲಾದವರಿಗೆ ಹೋಗಿದೆ. ಅಮಿತ್ ಶಾ ಪ್ರಜ್ವಲ್ ರೇವಣ್ಣಗೆ ಟಿಕೆಟ್ ಬೇಡ ಎಂದು ಹೇಳಿದಾಗ ಕುಮಾರಸ್ವಾಮಿ ಅವರಿಗೆ ತಿಳಿದಿರಲಿಲ್ಲವೇ, ಈ ಬಗ್ಗೆ ಕೂಲಂಕಷ ತನಿಖೆ ಮಾಡಿಸಿದರೆ ಪೆನ್‌ಡ್ರೈವ್ ಮೂಲ ತಿಳಿಯಲಿದೆ. ಪೆನ್‌ಡ್ರೈವ್ ಹಂಚಿಕೆ ಕಾರಣದಿಂದಲೇ ಮಾಜಿ ಶಾಸಕರ ಇಬ್ಬರು ಆಪ್ತರನ್ನು ಬಂಧಿಸಲಾಗಿದೆ. ಹೀಗಿದ್ದರೂ, ಡಿಕೆಶಿ ಅವರ ಮೇಲೆ ಆರೋಪ ಮಾಡುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.