ಸೌಜನ್ಯ ಕೇಸಲ್ಲಿ ಆರೋಪಿಯಾಗಿದ್ದಮೂವರಿಗೆ ಎಸ್‌ಐಟಿ ತನಿಖೆ ಬಿಸಿ

| Published : Sep 04 2025, 01:00 AM IST

ಸಾರಾಂಶ

2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮೂವರನ್ನು ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ವಿಚಾರಣೆ ನಡೆಸಲು ನಿರ್ಧರಿಸಿದೆ.

ಕನ್ನಡಪ್ರಭ ವಾರ್ತೆ ಮಂಗಳೂರು

2012ರಲ್ಲಿ ನಡೆದಿದ್ದ ಸೌಜನ್ಯ ಅತ್ಯಾಚಾರ, ಹತ್ಯೆ ಪ್ರಕರಣದಲ್ಲಿ ಆರೋಪ ಹೊತ್ತಿದ್ದ ಮೂವರನ್ನು ಬುರುಡೆ ಪ್ರಕರಣದ ತನಿಖೆ ನಡೆಸುತ್ತಿರುವ ಎಸ್‌ಐಟಿ ವಿಚಾರಣೆ ನಡೆಸಲು ನಿರ್ಧರಿಸಿದೆ.

ಸೌಜನ್ಯ ಹತ್ಯೆ ಪ್ರಕರಣದಲ್ಲಿ ಆರೋಪ ಮುಕ್ತರಾಗಿದ್ದ ಉದಯ್ ಜೈನ್, ಧೀರಜ್ ಕೆಲ್ಲಾ ಹಾಗೂ ಮಲ್ಲಿಕ್ ಜೈನ್‌ಗೆ ಎಸ್‌ಐಟಿ ಬುಲಾವ್‌ ನೀಡಿದೆ. ಈ ಹಿನ್ನೆಲೆಯಲ್ಲಿ ಬುಧವಾರ ಉದಯ್‌ ಎಸ್‌ಐಟಿ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ.

ಕಳೆದ ವಾರ ಸೌಜನ್ಯ ಕೇಸ್ ಬಗ್ಗೆ ಪ್ರತ್ಯಕ್ಷದರ್ಶಿ ಎಂದು ಹೇಳುತ್ತಿರುವ ಮಂಡ್ಯದ ಮಹಿಳೆ, ಚಿಕ್ಕಕೆಂಪಮ್ಮ ಎಂಬುವರು ಎಸ್‌ಐಟಿಗೆ ದೂರು ನೀಡಿದ್ದರು. ಆ ದಿನ ನಾನು ಧರ್ಮಸ್ಥಳಕ್ಕೆ ಹೋಗಿದ್ದೆ. ಪೂಜೆ ಬಳಿಕ, ಪ್ರಕೃತಿ ಚಿಕಿತ್ಸಾಲಯದ ಕಡೆಗೆ ಹೊರಟಿದ್ದ ಸಂದರ್ಭದಲ್ಲಿ ಹುಡುಗಿಯೊಬ್ಬಳನ್ನು ಕಿಡ್ನ್ಯಾಪ್ ಮಾಡುತ್ತಿರುವುದನ್ನು ಕಣ್ಣಾರೆ ಕಂಡಿದ್ದೇನೆ ಎಂದಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಕರೆಯಲಾಗಿದೆ ಎನ್ನಲಾಗಿದೆ.

2012ರಲ್ಲಿ ಧರ್ಮಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಸೌಜನ್ಯ ನಾಪತ್ತೆಯಾಗಿದ್ದರು. ಈ ಮೂವರು ಸೌಜನ್ಯ ಮೇಲೆ ಅತ್ಯಾಚಾರ ನಡೆಸಿ ಕೊಲೆ ಮಾಡಿದ್ದಾಗಿ ಸೌಜನ್ಯ ಕುಟುಂಬ ಆರೋಪಿಸಿತ್ತು. ಹೀಗಾಗಿ, ಈ ಮೂವರ ವಿರುದ್ಧ ಆರೋಪ ಹೊರಿಸಲಾಗಿತ್ತು. ಇದರ ಬಗ್ಗೆ ಸಿಐಡಿ, ಸಿಬಿಐ ನಡೆದಿತ್ತು. ಆದರೆ, ಈ ಮೂವರ ವಿರುದ್ಧ ಆರೋಪ ಸಾಬೀತಾಗದೆ, ಆರೋಪದಿಂದ ಮುಕ್ತರಾಗಿದ್ದರು. ಪ್ರಕರಣ ಸಂಬಂಧ ಈ ಮೂವರು ಬ್ರೈನ್ ಮ್ಯಾಪಿಂಗ್‌ಗೆ ಕೂಡ ಒಳಗಾಗಿದ್ದರು.

ಅಲ್ಲದೆ, ಬುರುಡೆ ಕೇಸಿನ ಆರೋಪಿ ಚಿನ್ನಯ್ಯ ಕೂಡ ಈ ಹಿಂದೆ ಸೌಜನ್ಯ ಕೇಸಿನಲ್ಲಿ ಆಕೆಯ ಶವ ವಿಲೇವಾರಿ ಮಾಡಿದ ಬಗ್ಗೆ ನನಗೆ ಗೊತ್ತಿದೆ ಎಂದಿದ್ದ. ಅಲ್ಲದೆ ಸೌಜನ್ಯ ಪರ ಹೋರಾಟಗಾರರಾದ ಮಹೇಶ್‌ ಶೆಟ್ಟಿ ತಿಮರೋಡಿ ಮತ್ತು ಗಿರೀಶ್‌ ಮಟ್ಟಣ್ಣವರ್‌ ಕೂಡ ಅನಾಥ ಶವಗಳ ಹೂತ ಬಗ್ಗೆ ಪಂಚಾಯ್ತಿ ದಾಖಲೆಗಳು ಸರಿಯಿಲ್ಲ, ಮತ್ತೆ ಸೌಜನ್ಯ ಕೇಸಿನ ಮರು ತನಿಖೆ ನಡೆಸುವಂತೆ ಕೋರಿ ಎಸ್‌ಐಟಿ ಕಚೇರಿಗೆ ದೂರು ನೀಡಿದ್ದರು. ಸೌಜನ್ಯ ತಾಯಿ ಕುಸುಮಾವತಿ ಕೂಡ ಇತ್ತೀಚೆಗೆ ಎಸ್‌ಐಟಿ ಕಚೇರಿಗೆ ತೆರಳಿ ಚಿನ್ನಯ್ಯನ ತನಿಖೆ ನಡೆಸುವಂತೆ ಕೋರಿ ದೂರು ನೀಡಿದ್ದರು. ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಮಂಗಳವಾರ ಈ ಮೂರು ಮಂದಿಗೆ ವಿಚಾರಣೆಗೆ ಹಾಜರಾಗಲು ಸೂಚಿಸಿದ್ದರು.

ಅದರಂತೆ ಉದಯ್‌ ಜೈನ್‌ ಅವರು ಬುಧವಾರ ಬೆಳಗ್ಗೆ ಎಸ್‌ಐಟಿ ಕಚೇರಿಗೆ ಆಗಮಿಸಿದ್ದರು. ಸಂಜೆವರೆಗೂ ಕಚೇರಿಯಲ್ಲಿ ತನಿಖಾಧಿಕಾರಿಗಳು ಅವರ ವಿಚಾರಣೆ ನಡೆಸಿದರು.ಯಾವುದೇ ತನಿಖೆಗೆ ಸಿದ್ಧ:

ವಿಚಾರಣೆ ಬಳಿಕ ಮಾತನಾಡಿದ ಜೈನ್‌, ಮಂಗಳವಾರ ರಾತ್ರಿ ಎಸ್ಐಟಿ ಕರೆ ಮಾಡಿ ಬುಧವಾರ ಬರುವಂತೆ ಹೇಳಿದರು. ನಾನು ಯಾವುದೇ ವಿಚಾರಣೆಗೆ ಸಿದ್ಧನಿದ್ದೇನೆ. ಇನ್ನೊಮ್ಮೆ ನನ್ನ ಬ್ರೈನ್ ಮ್ಯಾಪಿಂಗ್ ಮಾಡಿದರೂ ಸಿದ್ದನಿದ್ದೇನೆ. ಆವತ್ತು ಸಿಐಡಿ, ಸಿಬಿಐ ಎಲ್ಲವೂ ನಮ್ಮನ್ನು ಆರೋಪ ಮುಕ್ತ ಮಾಡಿದೆ. ಸಿಬಿಐ ಕೋರ್ಟ್ ಎದುರು ನಾವೇ ಬ್ರೈನ್ ಮ್ಯಾಪಿಂಗ್ ನಡೆಸುವಂತೆ ಹೇಳಿದ್ದೆವು. ಕೋರ್ಟ್ ಅನುಮತಿ ಕೊಟ್ಟ ಬಳಿಕ ಬ್ರೈನ್ ಮ್ಯಾಪಿಂಗ್ ಆಗಿದೆ. ಚೆನ್ನೈ ಸಿಬಿಐ ಕಚೇರಿಯಲ್ಲಿ ವಿಚಾರಣೆ ನಡೆದು ಬೆಂಗಳೂರಿನಲ್ಲಿ ಬ್ರೈನ್ ಮ್ಯಾಪಿಂಗ್ ನಡೆಸಲಾಗಿದೆ. ಎಲ್ಲದರಲ್ಲೂ ನಮ್ಮ‌ ಯಾವುದೇ ತಪ್ಪಿಲ್ಲ ಎಂದು ಬಂದಿದೆ. ಮುಂದೆಯೂ ಯಾವುದೇ ವಿಚಾರಣೆಗೆ ನಾವು ಸಿದ್ದರಿದ್ದೇವೆ. ಬುರುಡೆ ಪ್ರಕರಣದ ದಿಕ್ಕು ಬದಲಿಸುವ ಹುನ್ನಾರ ಇದು ಎಂದು ಹೇಳಿದರು.ಮೇಲ್ಮನವಿ ಬಗ್ಗೆ ಸೌಜನ್ಯ ತಾಯಿ ನಿರ್ಧರಿಸಲಿ: ಸಿದ್ದುಸುಪ್ರೀಂ ಕೋರ್ಟ್‌ಗೆ ಸೌಜನ್ಯ ಪ್ರಕರಣದ ಮೇಲ್ಮನವಿ ಸಲ್ಲಿಸಬೇಕೇ ಅಥವಾ ಬೇಡವೇ ಎನ್ನುವ ಕುರಿತು ಅವರ ತಾಯಿ ನಿರ್ಧರಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.ಸೌಜನ್ಯ ಪ್ರಕರಣದ ಮೇಲ್ಮನವಿಯನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿದರೆ ಅದರ ವೆಚ್ಚವನ್ನು ಭರಿಸುವುದಾಗಿ ಬಿಜೆಪಿ ರಾಜ್ಯಾದ್ಯಕ್ಷ ಬಿ.ವೈ.ವಿಜಯೇಂದ್ರ ಹೇಳಿಕೆ ನೀಡುವ ಕುರಿತ ಸುದ್ದಿಗಾರರ ಪ್ರಶ್ನೆಗೆ ಬುಧವಾರ ಪ್ರತಿಕ್ರಿಯಿಸಿದ ಅವರು, ಸಿಬಿಐ ಕೇಂದ್ರ ಸರ್ಕಾರ ಅಧೀನದಲ್ಲಿದೆ. ಈಗಾಗಲೇ ಆರೋಪಿಯನ್ನು ಖುಲಾಸೆ ಮಾಡಿದೆ. ಈಗ ಸುಪ್ರೀಂ ಕೋರ್ಟಿನ ವೆಚ್ಚ ಭರಿಸುವುದಾಗಿ ಹೇಳುತ್ತಿದ್ದಾರೆ. ಮೇಲ್ಮನವಿಗೆ ಪ್ರಕರಣ ಸೂಕ್ತವಾಗಿದೆಯೇ ಎಂಬುದನ್ನು ಸೌಜನ್ಯ ತಾಯಿ ನಿರ್ಧರಿಸಬೇಕು ಎಂದರು.

ಧರ್ಮಸ್ಥಳಕ್ಕೆ ಬಿಜೆಪಿ ಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಇದೊಂದು ಬಿಜೆಪಿಯ ರಾಜಕೀಯ ಪ್ರೇರಿತ ಯಾತ್ರೆ. ಇದು ಧರ್ಮಸ್ಥಳ ಚಲೋ ಅಲ್ಲ, ರಾಜಕೀಯ ಚಲೋ ಎಂದು ವ್ಯಂಗ್ಯವಾಡಿದರು.ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರಲು ದೋಸ್ತಿಗಳ ಒಳ ಒಪ್ಪಂದ: ಡಿಕೆಸು ಆರೋಪಧರ್ಮಸ್ಥಳ ಶ್ರೀಕ್ಷೇತ್ರ ರಾಜಕೀಯ ಮಾಡುವ ವಿಷಯವಲ್ಲ. ಆದರೂ ಧರ್ಮಸ್ಥಳಕ್ಕೆ ಕೆಟ್ಟ ಹೆಸರು ತರುವಂತಹ ರಾಜಕೀಯ ಒಳ ಒಪ್ಪಂದವನ್ನು ಬಿಜೆಪಿ-ಜೆಡಿಎಸ್‌ ಪಕ್ಷಗಳು ಮಾಡಿಕೊಂಡಿದ್ದು, ಅದನ್ನು ವಿಫಲಗೊಳಿಸಲು ಕಾಂಗ್ರೆಸ್‌ ಸರ್ಕಾರ ಎಸ್‌ಐಟಿ ತನಿಖೆ ನಡೆಸಿದೆ ಎಂದು ಬಮುಲ್‌ ಅಧ್ಯಕ್ಷ ಡಿ.ಕೆ.ಸುರೇಶ್‌ ಹೇಳಿದರು. ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್‌, ಧರ್ಮಸ್ಥಳ ವಿಚಾರದಲ್ಲಿ ವಿರೋಧ ಪಕ್ಷಗಳು ರಾಜಕೀಯ ನಾಟಕ ಮಾಡುತ್ತಿವೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ವಿಪಕ್ಷಗಳು ರಕ್ತದಾಹ ನಿಲ್ಲಿಸಲಿ. ಶ್ರೀಕ್ಷೇತ್ರದ ಪಾವಿತ್ರ್ಯತೆ ಉಳಿಸಲಿ ಎಂದರು.

ಇನ್ನು, ಧರ್ಮಸ್ಥಳ ಯಾತ್ರೆಯಲ್ಲಿ ಅಲ್ಲಿನ ಜನಪ್ರತಿನಿಧಿಗಳು ಶ್ರೀಕ್ಷೇತ್ರವನ್ನು ಒಪ್ಪಿ ಮಾತನಾಡಿಲ್ಲ. ಕೇವಲ ಸ್ವಾಮಿ ಮಂಜುನಾಥನ ಬಗ್ಗೆ ಮಾತನಾಡಿದ್ದಾರೆ. ಆಗ ಸುಖಾಸುಮ್ಮನೆ ಆರೋಪಗಳನ್ನು ಮಾಡಿ, ಈಗ ಕೊಳಕು ರಾಜಕಾರಣದಿಂದ ಹೊರಬರಲು ಧರ್ಮಸ್ಥಳದ ಯಾತ್ರೆ ಮಾಡಲಾಗಿದೆ. ಇದು ಕ್ಷೇತ್ರದ ಮೇಲೆ ಇರುವ ಗೌರವದಿಂದ ಮಾಡಿರುವ ಯಾತ್ರೆಯಲ್ಲ ಎಂದರು.ಬುರುಡೆ ಕೇಸ್‌: ಚಿನ್ನಯ್ಯಗೆ ಕಸ್ಟಡಿ 3 ದಿನ ವಿಸ್ತರಣೆಧರ್ಮಸ್ಥಳ ಬುರುಡೆ ಪ್ರಕರಣದ ಆರೋಪಿ ಚಿನ್ನಯ್ಯನ ಎಸ್ಐಟಿ ಕಸ್ಟಡಿ 3 ದಿನ ವಿಸ್ತರಣೆ ಆಗಿದೆ. ಆತನ ಕಸ್ಟಡಿ ಬುಧವಾರಕ್ಕೆ ಕೊನೆಗೊಂಡ ಹಿನ್ನೆಲೆಯಲ್ಲಿ ಎಸ್‌ಐಟಿ ತನಿಖಾಧಿಕಾರಿ ಜಿತೇಂದ್ರ ದಯಾಮ ಅವರು ಮತ್ತೆ ಆತನನ್ನು ಬೆಳ್ತಂಗಡಿ ಕೋರ್ಟ್‌ಗೆ ಹಾಜರುಪಡಿಸಿದ್ದರು. ಈ ವೇಳೆ, ನ್ಯಾಯಾಧೀಶರು ಚಿನ್ನಯ್ಯನ ಕಸ್ಟಡಿ ವಿಸ್ತರಿಸಿದ್ದಾರೆ. ಚಿನ್ನಯ್ಯ ವಾಸವಿದ್ದ ಮಂಡ್ಯ ಹಾಗೂ ತಮಿಳುನಾಡಿನ ಮನೆ ಹಾಗೂ ಮತ್ತಿತರ ಕಡೆಗಳ ಸ್ಥಳ ಮಹಜರು ಪ್ರಕ್ರಿಯೆ ಇನ್ನೂ ನಡೆದಿಲ್ಲ. ಈ ಕಾರಣಕ್ಕೆ ಎಸ್ಐಟಿ ಅಧಿಕಾರಿಗಳು ಸೆ.6ರ ವರೆಗೆ ಚಿನ್ನಯ್ಯನನ್ನು ಕಸ್ಟಡಿಗೆ ಪಡೆದಿದ್ದಾರೆ.