ಮುನಿರತ್ನಗೆ ಎಸ್‌ಐಟಿ ‘ರಿಲೀಫ್’: ಬಿ ರಿಪೋರ್ಟ್ ಸಲ್ಲಿಕೆ

| Published : Apr 30 2025, 12:33 AM IST

ಮುನಿರತ್ನಗೆ ಎಸ್‌ಐಟಿ ‘ರಿಲೀಫ್’: ಬಿ ರಿಪೋರ್ಟ್ ಸಲ್ಲಿಕೆ
Share this Article
  • FB
  • TW
  • Linkdin
  • Email

ಸಾರಾಂಶ

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ಅವರ ಪತಿಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ‘ಬಿ’ ರಿಪೋರ್ಟ್ ಸಲ್ಲಿಸಿದೆ.

ಗಿರೀಶ್ ಮಾದೇನಹಳ್ಳಿ

ಕನ್ನಡಪ್ರಭ ವಾರ್ತೆ ಬೆಂಗಳೂರು

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮಾಜಿ ಸದಸ್ಯೆ ಮಂಜುಳಾ ಅವರ ಪತಿಗೆ ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ರಾಜರಾಜೇಶ್ವರಿನಗರ ಕ್ಷೇತ್ರದ ಬಿಜೆಪಿ ಶಾಸಕ, ಮಾಜಿ ಸಚಿವ ಮುನಿರತ್ನ ವಿರುದ್ಧ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ವಿಶೇಷ ತನಿಖಾ ತಂಡ (ಎಸ್‌ಐಟಿ) ‘ಬಿ’ ರಿಪೋರ್ಟ್ ಸಲ್ಲಿಸಿದೆ.

ತನ್ಮೂಲಕ ಲೈಂಗಿಕ ಹಗರಣದ ಸುಳಿಯಲ್ಲಿ ಸಿಲುಕಿರುವ ಶಾಸಕರಿಗೆ ಬಿಗ್ ರಿಲೀಫ್ ಸಿಕ್ಕಿದ್ದು, ಮುನಿರತ್ನ ಅವರ ವಿರುದ್ಧ ಬಿಬಿಎಂಪಿ ಮಾಜಿ ಸದಸ್ಯೆ ಪತಿ ಲಗ್ಗೆರೆ ನಾರಾಯಣಸ್ವಾಮಿ ಮಾಡಿದ್ದ ಹನಿಟ್ರ್ಯಾಪ್ ಆರೋಪಕ್ಕೆ ಯಾವುದೇ ಪುರಾವೆ ಸಿಕ್ಕಿಲ್ಲವೆಂದು ತನ್ನ ವರದಿಯಲ್ಲಿ ಎಸ್‌ಐಟಿ ಉಲ್ಲೇಖಿಸಿದೆ ಎಂದು ಉನ್ನತ ಮೂಲಗಳು ‘ಕನ್ನಡಪ್ರಭ’ಕ್ಕೆ ಮಾಹಿತಿ ನೀಡಿವೆ.

ಹನಿಟ್ರ್ಯಾಪ್ ಯತ್ನ ಪ್ರಕರಣ ಸಂಬಂಧ ದೂರುದಾರ ನಾರಾಯಣಸ್ವಾಮಿ ಹಾಗೂ ಆರೋಪಿತ ಮುನಿರತ್ನ ಸೇರಿ ಕೆಲವರನ್ನು ವಿಚಾರಣೆ ನಡೆಸಿ ಹೇಳಿಕೆ ಪಡೆಯಲಾಯಿತು. ಆದರೆ ತನಿಖೆಯಲ್ಲಿ ಹನಿಟ್ರ್ಯಾಪ್ ಯತ್ನ ಕೃತ್ಯಕ್ಕೆ ಪೂರಕವಾದ ಸಾಕ್ಷ್ಯಗಳು ಲಭ್ಯವಾಗಿಲ್ಲ. ಹೀಗಾಗಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್‌ ಸಲ್ಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಕಳೆದ ವರ್ಷ ಶಾಸಕ ಮುನಿರತ್ನ ಅವರ ವಿರುದ್ಧ ಹನಿಟ್ರ್ಯಾಪ್ ಮತ್ತು ಅತ್ಯಾಚಾರ ಆರೋಪ ಹೊರಿಸಿ ಆ ಕ್ಷೇತ್ರದ ಸ್ಥಳೀಯ ಬಿಜೆಪಿ ಕಾರ್ಯಕರ್ತೆಯೊಬ್ಬಳು ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಅತ್ಯಾಚಾರ ಪ್ರಕರಣ ದಾಖಲಿಸಿ ಮುನಿರತ್ನ ಅವರನ್ನು ಪೊಲೀಸರು ಬಂಧಿಸಿದ್ದರು. ಇದಾದ ನಂತರ ಮುನಿರತ್ನ ವಿರುದ್ಧ ಆರ್‌.ಆರ್‌.ನಗರ ಕ್ಷೇತ್ರ ವ್ಯಾಪ್ತಿಯ ಲಗ್ಗೆರೆ ವಾರ್ಡ್‌ನ ಮಾಜಿ ಸದಸ್ಯೆ ಮಂಜುಳಾ ಅವರ ಪತಿ ನಾರಾಯಣಸ್ವಾಮಿ ಅವರು ಹನಿಟ್ರ್ಯಾಪ್ ಆರೋಪ ಮಾಡಿದ್ದರು.

ಏನಿದು ಪ್ರಕರಣ?:

2014ರ ಡಿ.1ರಂದು ಶಾಸಕ ಮುನಿರತ್ನ ವಿರುದ್ಧ ಹನಿಟ್ರ್ಯಾಪ್ ಹಾಗೂ ಕಿರುಕುಳ ಆರೋಪ ಮಾಡಿ ನಂದಿನಿ ಲೇಔಟ್‌ ಪೊಲೀಸ್ ಠಾಣೆಗೆ ನಾರಾಯಣಸ್ವಾಮಿ ದೂರು ನೀಡಿದ್ದರು. ಅದರನ್ವಯ ಶಾಸಕರ ವಿರುದ್ಧ ಎಫ್‌ಐಆರ್ ದಾಖಲಾಯಿತು. ಪ್ರಕರಣದ ತನಿಖೆಯನ್ನು ಎಸ್‌ಐಟಿಗೆ ವಹಿಸಿ ಸರ್ಕಾರ ಆದೇಶಿಸಿತ್ತು. ಅಪರಿಚಿತ ಮಹಿಳೆಯರನ್ನು ಮುಂದಿಟ್ಟು ಅಶ್ಲೀಲ ಆಡಿಯೋ ಮಾಡಿಸಿ ತಮಗೆ ಶಾಸಕರು ಕಿರುಕುಳ ಕೊಟ್ಟಿದ್ದಾರೆ ಎಂದು ನಾರಾಯಣಸ್ವಾಮಿ ದೂರಿದ್ದರು. ಈ ಪ್ರಕರಣದ ತನಖೆ ನಡೆಸಿದ್ದ ಎಸ್‌ಐಟಿ, ಕೊನೆಗೆ ಆರೋಪದ ಹುರುಳಿಲ್ಲವೆಂದು ಹೇಳಿ ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದೆ ಎಂದು ವಿಶ್ವಸನೀಯ ಮೂಲಗಳು ಹೇಳಿವೆ. ಶಾಸಕರ ಬೆಂಬಲಿಗರಿಗೆ ರಿಲೀಫ್

ಶಾಸಕ ಮುನಿರತ್ನ ಅವರಿಗೆ ಮಾತ್ರವಲ್ಲ, ಅವರ ಬೆಂಬಲಿಗರಿಗೂ ಎಸ್‌ಐಟಿ ರಿಲೀಫ್ ನೀಡಿದೆ. ತಮ್ಮ ಶಾಸಕರ ವಿರುದ್ಧ ಅತ್ಯಾಚಾರ ಪ್ರಕರಣದ ದೂರುದಾರೆಗೆ ಮುನಿರತ್ನ ಬೆಂಬಲಿಗರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಯಶವಂತಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಈ ಪ್ರಕರಣದಲ್ಲೂ ನ್ಯಾಯಾಲಯಕ್ಕೆ ಎಸ್‌ಐಟಿ ಬಿ ರಿಪೋರ್ಟ್ ಸಲ್ಲಿಸಿದೆ. ಈ ಮೂಲಕ ಮುನಿರತ್ನ ಬೆಂಬಲಿಗರಾದ ಸುನಂದಮ್ಮ ಸೇರಿ ಮತ್ತಿತರರು ಸಂಕಷ್ಟದಿಂದ ಪಾರಾಗಿ ನಿರಾಳರಾಗಿದ್ದಾರೆ.ಐದು ಕೇಸ್‌ನಲ್ಲಿ ಎರಡರಲ್ಲಿ ಸಾಕ್ಷ್ಯವಿಲ್ಲ: ಎಸ್‌ಐಟಿ

ಶಾಸಕ ಮುನಿರತ್ನ ವಿರುದ್ಧ ಅತ್ಯಾಚಾರ, ಜೀವ ಬೆದರಿಕೆ ಹಾಗೂ ಜಾತಿ ನಿಂದನೆ ಸೇರಿ ಐದು ಪ್ರಕರಣಗಳು ದಾಖಲಾಗಿವೆ. ಈ ಎಲ್ಲ ಪ್ರಕರಣಗಳ ಕುರಿತು ಎಸ್‌ಐಟಿ ತನಿಖೆ ನಡೆದಿದ್ದು, ಇದರಲ್ಲಿ ಎರಡು ಪ್ರಕರಣಗಳಲ್ಲಿ ಶಾಸಕರ ವಿರುದ್ಧ ಸಾಕ್ಷ್ಯವಿಲ್ಲ ಎಂದು ಎಸ್ಐಟಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನುಳಿದ ಬಿಬಿಎಂಪಿ ಮಾಜಿ ಸದಸ್ಯ ವೇಲು ನಾಯ್ಕರ್ ಅವರಿಗೆ ಜಾತಿನಿಂದನೆ, ಬಿಜೆಪಿ ಕಾರ್ಯಕರ್ತೆ ಮೇಲೆ ಅತ್ಯಾಚಾರ ಹಾಗೂ ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜ್ ಅವರಿಗೆ ಜೀವ ಬೆದರಿಕೆ ಪ್ರಕರಣಗಳಲ್ಲಿ ಮುನಿರತ್ನ ವಿರುದ್ಧ ಸಾಕ್ಷ್ಯಗಳು ಪತ್ತೆಯಾಗಿದೆ ಎಂದು ಎಸ್‌ಐಟಿ ಹೇಳಿದೆ.