ಸಾರಾಂಶ
ಹಾಸನ : ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೋಗಳ ಪೆನ್‌ಡ್ರೈವ್ ವೈರಲ್ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಎಸ್‌ಐಟಿ ಮತ್ತೊಮ್ಮೆ ನಗರದ ಆರ್‌ಸಿ ರಸ್ತೆಯಲ್ಲಿರುವ ಸಂಸದರ ನಿವಾಸವನ್ನು ತಪಾಸಣೆ ನಡೆಸಿ ಪರಿಶೀಲನೆಗೆಂದು ಅಲ್ಲಿನ ದಿಂಬುಗಳು ಹಾಗೂ ಬೆಡ್‌ಶೀಟುಗಳನ್ನು ಕೊಂಡೊಯ್ದಿದ್ದಾರೆ.
ಪೆನ್‌ಡ್ರೈವ್ ಪ್ರಕರಣ ಎಸ್‌ಐಟಿಗೆ ಹಸ್ತಾಂತರವಾದ ಆರಂಭದಲ್ಲಿಯೇ ಎಸ್‌ಐಟಿ ಪೊಲೀಸರು ನಗರದಲ್ಲಿರುವ ಸಂಸದರ ನಿವಾಸ, ಹೊಳೆನರಸೀಪುರದಲ್ಲಿರುವ ಎಚ್.ಡಿ.ರೇವಣ್ಣ ಅವರ ನಿವಾಸ ಹಾಗೂ ಚನ್ನರಾಯಪಟ್ಟಣ ತಾಲೂಕಿನ ಗನ್ನಿಕಡದಲ್ಲಿರುವ ತೋಟದ ಮನೆ ಮೇಲೆ ದಾಳಿ ನಡೆಸಿ ಪರಿಶೀಲನೆ ನಡೆಸಿ ಸಾಕ್ಷ್ಯ ಸಂಗ್ರಹಕ್ಕೆ ಯತ್ನಿಸಿದ್ದರು.
ಆದರೆ, ಮಂಗಳವಾರ ರಾತ್ರಿ ಮತ್ತೊಮ್ಮೆ ಇದೇ ಮೂರು ಸ್ಥಳಗಳ ಮೇಲೆ ಎಸ್‌ಐಟಿ ತಂಡ ಭೇಟಿ ನೀಡಿ ಇನ್ನಷ್ಟು ಸಾಕ್ಷ್ಯಗಳ ಸಂಗ್ರಹಕ್ಕೆ ಮುಂದಾಗಿತ್ತು. ಸುಮಾರು ಹತ್ತು ಗಂಟೆಗಳ ಪರಿಶೀಲನೆ ನಡೆಸಿದ ಎಸ್‌ಐಟಿ ಅಧಿಕಾರಿಗಳು ಸಂಸದರ ನಿವಾಸದ ಮಲಗುವ ಕೋಣೆಯ ದಿಂಬುಗಳು ಹಾಗೂ ಹಾಸಿಗೆ ಮೇಲೆ ಹಾಸುವ ಬೆಡ್‌ಶೀಟುಗಳನ್ನು ವಶಕ್ಕೆ ಪಡೆದು ಕೊಂಡೊಯ್ದಿದ್ದಾರೆ.
ಜೂ.1 ವರೆಗೆ ಎಸ್‌ಐಟಿ ವಶಕ್ಕೆ ನವೀನ್‌ಗೌಡ, ಚೇತನ್
ಹಾಸನ: ಸಂಸದ ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾದ ರಾಸಲೀಲೆ ವಿಡಿಯೋಗಳುಳ್ಳ ಪೆನ್‌ಡ್ರೈವ್ ಹಂಚಿಕೆ ಆರೋಪದಲ್ಲಿ ಬಂಧನಕ್ಕೊಳಗಾಗಿರುವ ನವೀನ್‌ಗೌಡ ಹಾಗೂ ಚೇತನ್ ಗೌಡರನ್ನು ಹಾಸನದ ಎರಡನೇ ಅಧಿಕ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯ ಜೂ.1 ವರೆಗೆ ಎಸ್‌ಐಟಿ ವಶಕ್ಕೆ ನೀಡಿ ಬುಧವಾರ ಆದೇಶಿಸಿದೆ.
ತಮ್ಮ ಮೇಲೆ ಈ ಪ್ರಕರಣ ದಾಖಲಾಗಿ ಜಿಲ್ಲಾ ಮಟ್ಟದ ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ತಿರಸ್ಕೃತವಾದ ನಂತರ ನವೀನ್ ಗೌಡ ಮತ್ತು ಚೇತನ್ ಗೌಡ ಹೈಕೋರ್ಟ್‌ನಲ್ಲಿ ಜಾಮೀನಿಗಾಗಿ ಅರ್ಜಿ ಹಾಕಿದ್ದರು. ಮೇ 28 ರಂದು ಹೈಕೋರ್ಟ್‌ಗೆ ಹೋದ ಸಂದರ್ಭದಲ್ಲಿ ಎಸ್‌ಐಟಿ ಪೊಲೀಸರು ಇವರಿಬ್ಬರನ್ನು ಬಂಧಿಸಿ ರಾತ್ರಿ ವೇಳೆಗೆ ಹಾಸನಕ್ಕೆ ಕರೆತಂದು ಜಿಲ್ಲಾ ಆಸ್ಪತ್ರೆಯಲ್ಲಿ ವೈದ್ಯಕೀಯ ಪರೀಕ್ಷೆ ಮಾಡಿಸಲತಿತು. ನಂತರ ಎರಡನೇ ಅಧಿಕ ಹಿರಿಯ ಸಿವಿಲ್ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಜೂನ್ 1 ರ ಶನಿವಾರ ಸಂಜೆ 4.30 ಕ್ಕೆ ಹಾಜರುಪಡಿಸಲು ನ್ಯಾಯಾಲಯ ತಿಳಿಸಿದೆ.