ವಾಲ್ಮೀಕಿ ಕೇಸ್‌: 1.79 ಕೋಟಿ ರು. ನಗದು, 270 ಗ್ರಾಂ ಚಿನ್ನ ಜಪ್ತಿ

| Published : Jun 18 2024, 12:46 AM IST

ಸಾರಾಂಶ

ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಆರೋಪಿಗಳಾದ ನಾಗೇಶ್ವರ ರಾವ್‌ ಮತ್ತು ಚಂದ್ರಮೋಹನ್‌ ಬಳಿ 1.79 ಕೋಟಿ ರು. ನಗದು ಹಾಗೂ 270 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.

ನಾಗೇಶ್ವರ್‌ ರಾವ್‌, ಚಂದ್ರಮೋಹನ್ ಬಳಿಯಿಂದ ನಗದು, ಚಿನ್ನ ವಶಕನ್ನಡಪ್ರಭ ವಾರ್ತೆ ಬೆಂಗಳೂರುಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಪ್ರಕರಣದ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡದ (ಎಸ್‌ಐಟಿ) ಅಧಿಕಾರಿಗಳು ಆರೋಪಿಗಳಾದ ನಾಗೇಶ್ವರ ರಾವ್‌ ಮತ್ತು ಚಂದ್ರಮೋಹನ್‌ ಬಳಿ 1.79 ಕೋಟಿ ರು. ನಗದು ಹಾಗೂ 270 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ.ಇದರೊಂದಿಗೆ ಈ ಪ್ರಕರಣದಲ್ಲಿ ಈವರೆಗೆ ಎಸ್ಐಟಿ ಅಧಿಕಾರಿಗಳು ಒಟ್ಟು 13.92 ಕೋಟಿ ರು. ನಗದು ಹಾಗೂ 270 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದಂತಾಗಿದೆ.ವಿಚಾರಣೆ ವೇಳೆ ಆರೋಪಿಗಳು ನೀಡಿದ ಮಾಹಿತಿ ಮೇರೆಗೆ ಎಸ್‌ಐಟಿ ಅಧಿಕಾರಿಗಳು ಆರೋಪಿ ನಾಗೇಶ್ವರ ರಾವ್‌ ಮನೆಯಲ್ಲಿ 1.49 ಕೋಟಿ ರು. ನಗದು ಮತ್ತು ಆರೋಪಿ ಚಂದ್ರಮೋಹನ್‌ ಮನೆಯಲ್ಲಿ 30 ಲಕ್ಷ ರು. ನಗದು ಮತ್ತು 270 ಗ್ರಾಂ ಚಿನ್ನಾಭರಣ ಜಪ್ತಿ ಮಾಡಿದ್ದಾರೆ. ಈ ಹಿಂದೆ ಆರೋಪಿಗಳಾದ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭನ ಬಳಿ 3.62 ಕೋಟಿ ರು. ಹಾಗೂ ಆತನ ಆಪ್ತನ ಬಳಿ 30 ಲಕ್ಷ ರು. ನಗದು ಜಪ್ತಿ ಮಾಡಿದ್ದರು. ಅಂತೆಯೇ ಹೈದರಾಬಾದ್‌ ಗ್ಯಾಂಗ್‌ನ ಬಳಿಕ 8.21 ಕೋಟಿ ರು. ನಗದು ಜಪ್ತಿ ಮಾಡಿದ್ದರು.ನಿಗಮದ ಖಾತೆಯಿಂದ ಹಣ ಅಕ್ರಮ ವರ್ಗಾವಣೆ ಸಂಬಂಧ ಎಸ್ಐಟಿ ಅಧಿಕಾರಿಗಳು ಈಗಾಗಲೇ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್‌ ದುರ್ಗಣ್ಣನವರ್‌, ಹೈದರಾಬಾದ್‌ ಗ್ಯಾಂಗ್‌ನ ಸತ್ಯನಾರಾಯಣ, ಸತ್ಯನಾರಾಯಣ ವರ್ಮಾ, ಚಂದ್ರಮೋಹನ್‌, ಜಗದೀಶ್‌, ನೆಕ್ಕುಂಟಿ ನಾಗರಾಜ್‌, ನಾಗೇಶ್ವರ್‌ ರಾವ್‌ ಸೇರಿ ಒಟ್ಟು ಎಂಟು ಮಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.

ಹೈದರಾಬಾದ್‌ನ ಫಸ್ಟ್‌ ಫೈನಾನ್ಸ್‌ ಕೋ ಆಪರೇಟಿವ್‌ ಬ್ಯಾಂಕ್‌ನಲ್ಲಿ ತೆರೆದಿದ್ದ 18 ನಕಲಿ ಖಾತೆಗಳಿಂದ ಹೈದರಾಬಾದ್‌, ಬೆಂಗಳೂರಿನ ಮದ್ಯದಂಗಡಿ, ಚಿನ್ನಾಭರಣ ಮಾರಾಟ ಮಳಿಗೆಗಳು, ಬಾರ್‌ಗಳು ಸೇರಿದಂತೆ ನೂರಕ್ಕೂ ಅಧಿಕ ಖಾತೆಗಳಿಗೆ ಹಣ ವರ್ಗಾವಣೆಯಾಗಿದೆ. ಬಳಿಕ ಆರೋಪಿಗಳು ಈ ಹಣವನ್ನು ಡ್ರಾ ಮಾಡಿ ಮಾಡಿಕೊಂಡಿರುವುದು ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಹೀಗಾಗಿ ವರ್ಗಾವಣೆಯಾದ ಹಣ ಯಾರಿಗೆಲ್ಲಾ ಹಂಚಿಕೆಯಾಗಿದೆ ಎಂಬುದರ ಬಗ್ಗೆ ಎಸ್ಐಟಿ ಅಧಿಕಾರಿಗಳು ತನಿಖೆ ನಡೆಸಿ, ಆ ಹಣವನ್ನು ಜಪ್ತಿ ಮಾಡುತ್ತಿದ್ದಾರೆ.