ಮುಳಗುಂದದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ನಿವೇಶನ ಹಂಚಿಕೆ!

| Published : Oct 25 2025, 01:00 AM IST

ಮುಳಗುಂದದಲ್ಲಿ ಭಾರಿ ಚರ್ಚೆಗೆ ಗ್ರಾಸವಾದ ನಿವೇಶನ ಹಂಚಿಕೆ!
Share this Article
  • FB
  • TW
  • Linkdin
  • Email

ಸಾರಾಂಶ

ನಿವೇಶನಕ್ಕಾಗಿ ಬಂದ 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರು ತಾತ್ಕಾಲಿಕ ಪಟ್ಟಿಯಲ್ಲಿದ್ದು, ಇದರಲ್ಲಿ ಅನರ್ಹರಿಗೂ ಹಂಚಿಕೆಯಾಗಿವೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.

ಮುಳಗುಂದ: ಸ್ಥಳೀಯ ಪಟ್ಟಣ ಪಂಚಾಯಿತಿಯಿಂದ ಕಡು ಬಡವರಿಗೆ ಹಂಚಿಕೆಯಾಗಬೇಕಿದ್ದ ನಿವೇಶನಗಳು ಅನರ್ಹರ ಪಾಲಾಗಿವೆ ಎಂಬ ಆರೋಪ ಸಾರ್ವಜನಿಕರ ವಲಯದಲ್ಲಿ ಕೇಳಿ ಬರುತ್ತಿದೆ.ಕಳೆದ 15 ವರ್ಷಗಳಿಂದ ನನೆಗುದಿಗೆ ಬಿದ್ದಿದ್ದ ನಿವೇಶನ ಹಂಚಿಕೆ, ಸದ್ಯ ಹಂಚಿಕೆಯಾಗಿ ತಾತ್ಕಾಲಿಕ ಪಟ್ಟಿ ಪ್ರಕಟವಾಗಿದ್ದು, ಭಾರಿ ಚರ್ಚೆಗೆ ಗ್ರಾಸವಾಗಿದೆ. ನಿವೇಶನಕ್ಕಾಗಿ ಬಂದ 4000 ಅರ್ಜಿಗಳ ಪೈಕಿ 373 ಫಲಾನುಭವಿಗಳ ಹೆಸರು ತಾತ್ಕಾಲಿಕ ಪಟ್ಟಿಯಲ್ಲಿದ್ದು, ಇದರಲ್ಲಿ ಅನರ್ಹರಿಗೂ ಹಂಚಿಕೆಯಾಗಿವೆ ಎಂಬ ಆರೋಪ ಸಾರ್ವಜನಿಕರದ್ದಾಗಿದೆ.ಹಂಚಿಕೆಯಲ್ಲಿ ತಾರತಮ್ಯ: ಪಪಂ ಸದಸ್ಯರು ನಿವೇಶನ ಹಂಚಿಕೆಯಲ್ಲಿ ತಾರತಮ್ಯವೆಸಗಿದ್ದಾರೆ ಎಂಬ ಆರೋಪ ಕೇಳಿ ಬರುತ್ತಿದೆಯಾದರೂ ಸದ್ಯ ಹಂಚಿಕೆಯಾದ ನಿವೇಶನಗಳು ಮನೆಯಿದ್ದವರಿಗೆ ನಿವೇಶನ, ಎರಡ್ಮೂರು ಅಂತಸ್ತಿನ ಕಟ್ಟಡವಿದ್ದವರಿಗೆ ನಿವೇಶನ, ಒಂದೇ ಮನೆಯಲ್ಲಿ ಎರಡ್ಮೂರು ನಿವೇಶನ ಹೀಗೆ ಸರ್ಕಾರದ ನೀತಿ ನಿಯಮ ಗಾಳಿಗೆ ತೂರಿ ಅವೈಜ್ಞಾನಿಕವಾಗಿ ಹಂಚಿಕೆಯಾಗಿವೆ ಎಂದು ನಿವೇಶನ ಪಡೆಯಬೇಕಿದ್ದ ಬಡವರು ಹಿಡಿಶಾಪ ಹಾಕುತ್ತಿದ್ದಾರೆ.ಹಣ ಪಡೆದು ನಿವೇಶನ ಹಂಚಿಕೆ: ಕೆಲ ಸದಸ್ಯರು ಹಣ ಪಡೆದು ನಿವೇಶನ ಹಂಚಿಕೆ ಮಾಡಿದ್ದಾರೆ ಎಂಬ ಆರೋಪ ಪಟ್ಟಣದಲ್ಲಿ ಹೊಗೆಯಾಡುತ್ತಿದೆ. ಇದರಿಂದ ದಿನನಿತ್ಯ ಮುಖ್ಯಾಧಿಕಾರಿಯೊಂದಿಗೆ ಸಾರ್ವಜನಿಕರ ವಾದ ವಿವಾದ ನಡೆಯುತ್ತಿದ್ದು, ಮುಖ್ಯಾಧಿಕಾರಿಗೆ ಕೆಲಸವೇ ಬೇಡ ಎನ್ನುವಂತಾಗಿದೆ.ಈ ಹಿಂದೆ ಮನೆಯಾರಿಗಿಲ್ಲ, ಯಾರಿಗಿದೆ ಎಂಬ ಬಗ್ಗೆ ಮುಖ್ಯಾಧಿಕಾರಿಗಳು ಸರ್ವೇ ಮಾಡಿಸಿ ನಂತರ ಹಂಚಿಕೆ ಮಾಡಿದ ಅಧಿಕಾರಿಗಳು ಚುನಾಯಿತ ಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಾತ್ಕಾಲಿಕ ಪಟ್ಟಿಗೆ ಸಹಿ ಮಾಡಿದ್ದಾರೆ ಎಂಬ ಕೂಗು ಸಾರ್ವಜನಿಕ ವಲಯಗಳಲ್ಲಿ ಕೇಳಿ ಬರುತ್ತಿದೆ. ಇದು ಬಡ ಕುಟುಂಬ ಹಾಗೂ ನಿರ್ಗತಿಕರ ನಿದ್ದೆಗೆಡಿಸುವಂತೆ ಮಾಡಿದೆ.2012ರಿಂದ ಅರ್ಜಿ ಸಲ್ಲಿಕೆ: ಈ ನಿವೇಶನಗಳಿಗೆ 2012ರಲ್ಲಿ, 2017ರಲ್ಲಿ 2024ರಲ್ಲಿ ಹೀಗೆ ಅರ್ಜಿ ಸಲ್ಲಿಕೆಯಾಗಿವೆ. ಹೀಗೆ ಅನೇಕ ಬಾರಿ ಅರ್ಜಿ ಸಲ್ಲಿಸಿ ಸಾವಿರಾರು ರು. ಖರ್ಚು ಮಾಡಿಕೊಂಡ ಅನೇಕರಿಗೆ ನಿವೇಶನ ಸಿಗದೇ ನಿರಾಸೆಯಾಗಿದೆ. ಅಂತಹವರನ್ನು ಸಮಾಧಾನಪಡಿಸುವುದು ಮುಖ್ಯಾಧಿಕಾರಿಗಳಿಗೆ ನಿತ್ಯದ ಕೆಲಸವಾಗಿದೆ.ಅ. 30ರ ವರೆಗೆ ಆಕ್ಷೇಪಣೆ ಸಲ್ಲಿಸುವುದಕ್ಕೆ ಅವಧಿ ಇದ್ದು, ಈವರೆಗೆ 20ಕ್ಕೂ ಅಧಿಕ ಆಕ್ಷೇಪಣಾ ಅರ್ಜಿಗಳು ಸಲ್ಲಿಕೆಯಾಗಿವೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಆಕ್ಷೇಪಣಾ ಅರ್ಜಿಗಳು ಬರಬಹುದು ಎನ್ನುತ್ತಾರೆ ಪಪಂ ಸಿಬ್ಬಂದಿ.

ಕ್ರಮ ಜರುಗಿಸುತ್ತೇವೆ: ನಿವೇಶನ ಹಂಚಿಕೆಯಲ್ಲಿ ತಾರತಮ್ಯವಾದ ಬಗ್ಗೆ ಜಿಲ್ಲಾಧಿಕಾರಿಗಳಿಗೆ ಪರಿಶೀಲಿಸುವಂತೆ ತಿಳಿಸಿದ್ದೇನೆ. ಅವುಗಳ ಹಂಚಿಕೆ ಕಡು ಬಡವರಿಗೆ, ನಿರ್ಗತಿಕರಿಗೆ ಸರಿಯಾಗಿ ಹಂಚಿಕೆಯಾಗುವಂತೆ ತಿಳಿಸಿದ್ದೇನೆ. ಉಳ್ಳವರ ಪಾಲಾಗದಂತೆ ಕ್ರಮ ಜರುಗಿಸುತ್ತೇವೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಚ್.ಕೆ. ಪಾಟೀಲ ತಿಳಿಸಿದರು.