ಕನ್ನಡಪ್ರಭ ವಾರ್ತೆ ಪಾಂಡವಪುರ

ಪಟ್ಟಣದ ವಿಸಿ ಕಾಲೋನಿ ಸಮೀಪದ ಹಳ್ಳದ ಖರಾಬು ಜಮೀನನ್ನು ಪಕ್ಕದ ಜಮೀನು ಮಾಲೀಕರು ಲಪಟಾಯಿಸಲು ಹುನ್ನಾರ ನಡೆಸುತ್ತಿರುವ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಪುರಸಭೆ ಅಧಿಕಾರಿಗಳು ಹಾಗೂ ಪೊಲೀಸರು ತೆರಳಿ ಎರಡು ಕಡೆಯವರೊಂದಿಗೆ ಮಾತುಕತೆ ನಡೆಸಿ ಸರ್ವೇ ನಡೆಸುವವರೆಗೂ ಯಾವುದೇ ಚಟುವಟಿಕೆ ನಡೆಸದಂತೆ ಸೂಚಿಸಿದರು.

ಕಾಲೋನಿ ಬಳಿ ಸರ್ವೇ ನಂಬರ್ 10/1ರಲ್ಲಿ 22 ಗುಂಟೆ ಜಮೀನನ್ನು ಹಿರೇಮರಳಿ ಗ್ರಾಮದ ಪ್ರಕಾಶ್, ಷಣ್ಮುಗ ಸೇರಿದಂತೆ ಇತರರು ಖರೀದಿಸಿದ್ದರು. ಇದರ ಪಕ್ಕದಲ್ಲಿಯೇ ಹಳ್ಳದ ಖರಾಬು ಜಮೀನಿದ್ದು, ಹಲವು ವರ್ಷಗಳಿಂದಲೂ ಆದಿದ್ರಾವಿಡ ಜನಾಂಗದವರು ವಾಸಿಸುತ್ತಿದ್ದಾರೆ.

ಈ ಹಿಂದೆ ಜಮೀನನ್ನು ಅಳತೆ ಮಾಡಿಸಿದಾಗ ಸರ್ವೇಯರ್ ಭಾಸ್ಕರ್ ಅವರು ಅಳತೆ ವೇಳೆ ಆದಿದ್ರಾವಿಡ ಜನಾಂಗದವರು ವಾಸಿಸುತ್ತಿರುವ ಬಡಾವಣೆಯ ಹಾಗೂ ಹಿರೇಮರಳಿ ನಿವಾಸಿಗಳಾದ ಪ್ರಕಾಶ್, ಷಣ್ಮುಗ ಅವರು ಖರೀದಿಸಿರುವ ಜಮೀನಿನ ಮಧ್ಯೆದಲ್ಲಿ 25 ಅಡಿ ಖರಾಬು ಜಮೀನಿದೆ ಎಂಬುದಾಗಿ ಗುರುತಿಸಿ ಕಲ್ಲನ್ನು ಸಹ ಹಾಕಿ ತೆರಳಿದ್ದರು.

ಆದರೆ, ಇದೀಗ ಅದೇ ಸರ್ವೇಯರ್ ಭಾಸ್ಕರ್ ಅವರು ಮತ್ತೊಮ್ಮೆ ಅಳತೆ ಮಾಡಿ ಇದರ ಮಧ್ಯೆ 25 ಅಡಿ ಖರಾಬು ಜಮೀನಿಲ್ಲ ಎಂದು ಆದಿದ್ರಾವಿಡ ಜನಾಂಗದವರ ಬಡಾವಣೆಯ ಪಕ್ಕಕ್ಕೆ ತಂದು ಹಾಕು ಹಾಕಿದ್ದಾರೆ. ಇದರಿಂದ ಹಲವು ದಶಕಗಳಿಂದ ವಾಸಿಸುತ್ತಿರುವ ಆದಿದ್ರಾವಿಡ ಜನಾಂಗಕ್ಕೆ ಅನ್ಯಾಯವಾಗುತ್ತಿದೆ ಎಂದು ಕಾಲೋನಿ ಆದಿದ್ರಾವಿಡ ಜನಾಂಗದ ನಿವಾಸಿಗಳು ಅಧಿಕಾರಿಗಳಿಗೆ ಮನವಿ ಸಲ್ಲಿಸಿದ್ದರು.


ಸರ್ವೇಯರ್ ಭಾಸ್ಕರ್ ಅವರು ಜಮೀನಿನ ಮಾಲೀಕರಿಂದ ಆಮಿಷಕ್ಕೆ ಒಳಗಾಗಿ ಈ ರೀತಿಯಾಗಿ ಗೊಂದಲ ಸೃಷ್ಟಿ ಸುತ್ತಿದ್ದಾರೆ. ಜತೆಗೆ ಅಳತೆ ಮಾಡುವಾಗ ನಿವಾಸಿಗಳು ವಿಡಿಯೋ ಮಾಡಲು ಹೋದರೆ ಜಮೀನಿನ ಮಾಲೀಕರು, ಸರ್ವೇಯರ್ ಅವರು ಹಲ್ಲೆ ಮಾಡಲು ಮುಂದಾಗಿದ್ದಾರೆ. ಖರೀದಿಸಿರುವ ಜಮೀನಿಗೆ ಯಾವುದೇ ಅಲ್ಯುಲೇಷನ್ ಮಾಡಿಸಿಕೊಳ್ಳದೆ ಪುರಸಭೆಯಿಂದ ಖಾತೆ ಮಾಡಿಸಿಕೊಂಡಿದ್ದಾರೆ ಎಂದು ದೂರಿದರು.

ವಿಷಯ ತಿಳಿದ ಪುರಸಭೆ ಅಧಿಕಾರಿ ನಾಗೇಶ್ ಹಾಗೂ ಪೊಲೀಸ್ ಸರ್ಕಲ್ ಇನ್ಸ್‌ಪೆಕ್ಟರ್ ಶರತ್‌ಕುಮಾರ್, ಸಬ್ ಇನ್ಸ್‌ಪೆಕ್ಟರ್ ಉಮೇಶ್ ಅವರು ಸ್ಥಳಕ್ಕೆ ತೆರಳಿ ಪರಿಶೀಲಿಸಿ ಚರ್ಚಿಸಿದರು. ಭೂಮಿ ಮಾಲೀಕರು ನಾವು 22 ಗುಂಟೆ ಜಮೀನಿಗೆ ಪುರಸಭೆಯಿಂದ ಖಾತೆ, ಇ-ಸ್ವತ್ತು ಎಲ್ಲವನ್ನೂ ಮಾಡಿಸಿಕೊಂಡಿದ್ದೇವೆ ಎಂದು ತಿಳಿಸಿದರು.

ಆದಿದ್ರಾವಿಡ ಜನಾಂಗದವರು ಖರಾಬು ಜಮೀನು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಆರೋಪಿಸಿದ ಹಿನ್ನೆಲೆಯಲ್ಲಿ ಮತ್ತೊಮ್ಮೆ ಸರ್ವೇ ಮಾಡಿಸುವವರೆಗೂ ಈ ಸ್ಥಳದಲ್ಲಿ ಯಾವುದೇ ಚಟುವಟಿಕೆ ನಡೆಸದಂತೆ ಎರಡು ಕಡೆಯವರಿಗೂ ತಿಳಿಸಿ ಸಮಾಧಾನಪಡಿಸಿ ಅಲ್ಲಿಂದ ತೆರಳಿದರು.

ಇದೇ ವೇಳೆ ಸಪಾಯಿಕಾರಿ ರಾಜ್ಯ ಸಂಘಟಕ ಸಂಚಾಲಕ ನಂಜುಂಡಮೌರ್ಯ, ಮುರುಗನ್, ಅರ್ಜುನ್, ಆರುಮುಗಂ ಸೇರಿದಂತೆ ಹಲವರು ಇದ್ದರು.

----

18ಕೆಎಂಎನ್ ಡಿ21

ಪಾಂಡವಪುರ ವಿಸಿ ಕಾಲೋನಿ ಪಕ್ಕದಲ್ಲಿ ಇರುವ ಸರ್ವೇ ನಂಬರ್ 10/1ರಲ್ಲಿ ಇರುವ ಹಳ್ಳದ ಖರಾಬು ಜಮೀನಿನ ಸ್ಥಳಕ್ಕೆ ಪೊಲೀಸರು ಹಾಗೂ ಪುರಸಭೆ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದರು.