ಹೊಸ ಶವಾಗಾರ ಕಟ್ಟಡ ನಿರ್ಮಾಣಕ್ಕೆ ಶಾಸಕರಿಂದ ಸ್ಥಳ ಪರಿಶೀಲನೆ

| Published : Oct 28 2024, 12:45 AM IST

ಸಾರಾಂಶ

ಮಳವಳ್ಳಿ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿ ನೂತನ ಶವಗಾರ ಹಾಗೂ ಶೈತ್ಯಾಗಾರ ನಿರ್ಮಾಣಕ್ಕಾಗಿ ಸರ್ಕಾರದಿಂದ ಶಾಸಕ ಪಿ.ಎಂ. ನರೇಂದ್ರಸ್ವಾಮಿ 45 ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹೀಗಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳ ಜತೆ ಚರ್ಚಿಸಿದರು.

ಕನ್ನಡಪ್ರಭ ವಾರ್ತೆ ಮಳವಳ್ಳಿ

ಪಟ್ಟಣದ ಸಾರ್ವಜನಿಕ ಆಸ್ಪತ್ರೆಯ ಹಳೆಯ ಶವಗಾರದ ಕಟ್ಟಡ ಶಿಥಿಲಾವ್ಯವಸ್ಥೆಯಲ್ಲಿದ್ದ ಹಿನ್ನೆಲೆಯಲ್ಲಿ ಹೊಸ ಕಟ್ಟಡ ನಿರ್ಮಾಣಕ್ಕೆ ಮೀಸಲಿಟ್ಟಿರುವ ಸ್ಥಳವನ್ನು ಶಾಸಕ ಪಿ.ಎಂ.ನರೇಂದ್ರಸ್ವಾಮಿ ಪರಿಶೀಲನೆ ನಡೆಸಿದರು.

ಆಸ್ಪತ್ರೆಯ ಆವರಣದಲ್ಲಿ ನೂತನ ಶವಗಾರ ಹಾಗೂ ಶೈತ್ಯಾಗಾರ ನಿರ್ಮಾಣಕ್ಕಾಗಿ ಸರ್ಕಾರದಿಂದ ಶಾಸಕ ಪಿ.ಎಂ. ನರೇಂದ್ರಸ್ವಾಮಿ 45 ಲಕ್ಷ ರು. ಅನುದಾನ ಬಿಡುಗಡೆ ಮಾಡಿಸಿದ್ದಾರೆ. ಹೀಗಾಗಿ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿಗಳ ಜತೆ ಚರ್ಚಿಸಿದರು.

ಸದ್ಯ ಇರುವ ಶವಗಾರ ಹಳೆಯ ಕಟ್ಟಡ ಶಿಥಲಾವ್ಯವಸ್ಥೆ ಇದ್ದು, ಅಪರಿಚಿತ ಶವ, ಅಪರಾಧ ಕೃತ್ಯಗಳ ಮೃತದೇಹಗಳನ್ನು ಸಂರಕ್ಷಿಸಿಡುವಂಥ ಯಾವುದೇ ವ್ಯವಸ್ಥೆಗಳು ಇರಲಿಲ್ಲ. ಹೀಗಾಗಿ ಸ್ಥಳ ಪರಿಶೀಲನೆ ನಡೆಸಿ ಕೆಲ ಬದಲಾವಣೆ ಮಾಡುವಂತೆ ಸಾರ್ವಜನಿಕ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ್ ಅವರಿಗೆ ಸೂಚಿಸಿದರು.

ನಂತರ ಮಾತನಾಡಿ, ಸಾರ್ವಜನಿಕ ಆಸ್ಪತ್ರೆಯಲ್ಲಿ ಜನರಿಗೆ ಉತ್ತಮ ಚಿಕಿತ್ಸೆ ದೊರೆಯುವಂತೆ ಹಲವು ಬದಲಾವಣೆ ಮಾಡಲಾಗಿದೆ. ಕೊರತೆ ಇದ್ದ ಶವಗಾರ ನಿರ್ಮಿಸಿ ಶೈತ್ಯಾಗಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಆಸ್ಪತ್ರೆಯಲ್ಲಿನ ವೈದ್ಯರ ಕಾರ್ಯದಕ್ಷತೆಯನ್ನು ಹಿರಿಯ ಅಧಿಕಾರಿಗಳು ಪರಿಶೀಲಿಸಲಿದ್ದಾರೆ. ಕೊರತೆ ಇರುವ ಸೌಲಭ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಇಲಾಖೆಯೊಂದಿಗೆ ಚರ್ಚಿಸಲಾಗಿದೆ ಎಂದರು.

ಇದೇ ವೇಳೆ ಶಾಸಕರು ಕೆಲ ದಿನಗಳಲ್ಲಿ ಆಸ್ಪತ್ರೆಯಲ್ಲಿ ಹೆರಿಗೆ ಮಾಡಿಸುವಾಗ ಶಿಶು ಸಾವನ್ನಪ್ಪಿದ್ದ ಪ್ರಕರಣದ ಬಗ್ಗೆ ಆಸ್ಪತ್ರೆಯ ಆಡಳಿತಾಧಿಕಾರಿ ಡಾ.ಸಂಜಯ್ ಅವರಿಂದ ಮಾಹಿತಿ ಪಡೆದುಕೊಂಡರು. ಈ ಬಗ್ಗೆ ಡಾ.ಸಂಜಯ್ ಪ್ರತಿಕ್ರಿಯಿಸಿ, ಈಗಾಗಲೇ ಹೆರಿಗೆ ಸಂದರ್ಭದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ವೈದ್ಯರಿಗೆ ನೋಟಿಸ್ ನೀಡಲಾಗಿ ಹಿರಿಯ ಅಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದೆ ಎಂದರು.

ದೂರವಾಣಿಯ ಮೂಲಕ ಆರೋಗ್ಯ ಇಲಾಖೆಯ ಕಾರ್ಯದರ್ಶಿಯ ಅವರೊಂದಿಗೆ ಶಾಸಕರು ಮಾತನಾಡಿ, ಆ ವೈದ್ಯರ ಬಗ್ಗೆ ಸಾರ್ವಜನಿಕರಿಂದ ಸಾಕಷ್ಟು ದೂರುಗಳು ಬಂದಿದ್ದು, ಸೂಕ್ತ ಕ್ರಮ ವಹಿಸುವಂತೆ ಸೂಚಿಸಿದರು. ಆ ವೈದ್ಯರನ್ನು ವರ್ಗಾವಣೆ ಮಾಡಿ ಕಾನೂನು ಕ್ರಮದ ಬಗ್ಗೆ ಪರಿಶೀಲಿಸಲಾಗುವುದು ಎಂದು ಆರೋಗ್ಯ ಇಲಾಖೆಯ ಕಾರ್ಯದರ್ಶಿ ಶಾಸಕರಿಗೆ ಭರವಸೆ ನೀಡಿದರು.

ಕಾನೂನು ತೊಡಕು:

ಶಾಸಕ ಪಿ.ಎಂ.ನರೇಂದ್ರಸ್ವಾಮಿ ಕಳೆದ ವರ್ಷವೇ ಡಾ.ರೇಣುಕಾ ದೇವಿ ಅವರನ್ನು ವರ್ಗಾವಣೆ ಮಾಡಿಸಿದ್ದರು. ಆ ವೈದ್ಯರು ನ್ಯಾಯಾಲಯದಿಂದ ತಡೆಯಾಜ್ಞೆ ತಂದು ಕಳೆದೊಂದು ವರ್ಷದಿಂದ ಕರ್ತವ್ಯ ನಿರ್ವಹಿಸುತ್ತಿದ್ದರು. ಇದೀಗ ಮತ್ತೆ ಅವರನ್ನು ವರ್ಗಾವಣೆ ಮಾಡಿಸಲು ಮುಂದಾಗಿದ್ದು, ಸದ್ಯದಲ್ಲಿಯೇ ಕೌನ್ಸೆಲಿಂಗ್ ನಡೆಯಲಿದೆ ಎಂದು ವೈದ್ಯರು ತಿಳಿಸಿದರು.

ಪುರಸಭೆ ಸದಸ್ಯ ಎಂ.ಎನ್.ಶಿವಸ್ವಾಮಿ, ಲೋಕೋಪಯೋಗಿ ಇಲಾಖೆಯ ಎಂಜಿನಿಯರ್ ಸೋಮಶೇಖರ್, ಮುಖಂಡರಾದ ಆರ್.ಎನ್.ಶಿವಸ್ವಾಮಿ, ಸಿ.ಮಾಧು, ಚೇತನ್ ನಾಯಕ್ ಇದ್ದರು.