ಸಾರಾಂಶ
ಕಾರಟಗಿ: ಪಟ್ಟಣದ ಮಧ್ಯಭಾಗದ ಹಳೇ ಬಸ್ ನಿಲ್ದಾಣದ ಪ್ರದೇಶದಲ್ಲಿಯೇ ಮಿನಿ ವಿಧಾನಸೌಧ, ನ್ಯಾಯಾಲಯ ಕಟ್ಟಡ, ತಾಲೂಕು ಕ್ರೀಡಾಂಗಣ ಸೇರಿದಂತೆ ವಿವಿಧ ಇಲಾಖೆಗಳ ಕಟ್ಟಡಗಳನ್ನು ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಇಲ್ಲಿನ ಹಳೆಯ ಬಸ್ ನಿಲ್ದಾಣದ ಪ್ರದೇಶದಲ್ಲಿ ತಾಲೂಕಿನ ನ್ಯಾಯಾಲಯ ಕಟ್ಟಡ ನಿರ್ಮಾಣಕ್ಕೆ ಜಿಲ್ಲಾ ಸತ್ರ ನ್ಯಾಯಾಧೀಶರಾದ ಸಿ. ಚಂದ್ರಶೇಖರ ಅವರೊಂದಿಗೆ ಸ್ಥಳ ಪರಿಶೀಲನೆ ನಡೆಸಿದ ಬಳಿಕ ವಿವರಿಸಿದರು.ಪಟ್ಟಣದ ಮಧ್ಯಭಾಗದಲ್ಲಿನ ಹಳೆ ಬಸ್ ನಿಲ್ದಾಣದ ಹತ್ತಿರ ಇರುವ ಸುಮಾರು ೩೦ ಎಕರೆ ಪ್ರದೇಶದಲ್ಲಿ ತಾಲೂಕು ಆಡಳಿತ ಸೌಧ, ಕೋರ್ಟ್ ಮತ್ತಿತರ ಸರ್ಕಾರಿ ಕಚೇರಿ, ತಾಲೂಕು ಕ್ರೀಡಾಂಗಣಕ್ಕೆ ಜಾಗ ಮೀಸಲು ಇಡಲಾಗಿತ್ತು. ಆದರೆ, ಹಿಂದಿನ ಶಾಸಕರು ಇಲ್ಲಿ ಯಾವುದೇ ಪೂರ್ವಪರ ಚಿಂತನೆ, ದೂರದೃಷ್ಟಿಯಿಲ್ಲದೇ ಅವೈಜ್ಞಾನಿಕವಾಗಿ ಕೆರೆ ನಿರ್ಮಾಣ ಕಾಮಗಾರಿ ಕೈಗೊಂಡಿದ್ದರು. ಇದರಿಂದ ಈ ಪ್ರದೇಶದಲ್ಲಿ ಕೆಲವು ದಿನಗಳ ಕಾಲ ಸ್ಥಳ ಗುರುತಿಸಲು ತಾಂತ್ರಿಕ ಸಮಸ್ಯೆಯಾಗಿತ್ತು. ಈಗ ನೋಡಲಾಗಿರುವ ಸ್ಥಳದಲ್ಲಿ ಮಿನಿ ವಿಧಾನಸೌಧ, ಕೋರ್ಟ್, ತಾಲೂಕು ಕ್ರೀಡಾಂಗಣ ಮತ್ತಿತರ ಇಲಾಖೆಗಳ ಕಚೇರಿ ಕಟ್ಟಡ ನಿರ್ಮಿಸಲು ನಿರ್ಧರಿಸಿದೆ. ಜಿಲ್ಲಾಧಿಕಾರಿಗಳಿಗೆ ಪ್ರಸ್ತಾವನೆ ಸಲ್ಲಿಸಿದ್ದು, ಜಿಲ್ಲಾ ನ್ಯಾಯಾಧೀಶರು ಕೋರ್ಟ್ ಜಾಗವನ್ನು ಪರಿಶೀಲಿಸುವಂತೆ ಮನವಿ ಮಾಡಿದ್ದರಿಂದ ನ್ಯಾಯಾಧೀಶರು ಸೇರಿದಂತೆ ನ್ಯಾಯಾಂಗ ಇಲಾಖೆಯವರು ಆಗಮಿಸಿ ಪರಿಶೀಲಿಸಿದ್ದಾರೆ. ಅವರು ಅನುಮತಿ ನೀಡಿದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.
ಕಾರಟಗಿ ಪಟ್ಟಣ ದಿನದಿಂದ ದಿನಕ್ಕೆ ವೇಗವಾಗಿ ಬೆಳೆಯುತ್ತಿದೆ. ಬಹುದಿನಗಳ ಜನರ ಆಸೆಯಂತೆ ಪಟ್ಟಣದ ಮಧ್ಯಭಾಗದಲ್ಲಿನ ಸರ್ಕಾರಿ ಜಾಗದಲ್ಲಿಯೇ ಎಲ್ಲ ಸರ್ಕಾರಿ ಕಚೇರಿಗಳನ್ನು ತರುವುದು ಮೂಲ ಉದ್ದೇಶ. ಜನರ ಆಪೇಕ್ಷೆಯಂತೆ ಸರ್ಕಾರ ಈಡೇರಿಸಲಿದೆ ಎಂದರು.ತಹಸೀಲ್ದಾರ್ ಎಂ. ಕುಮಾರಸ್ವಾಮಿ, ಕಂದಾಯ ನಿರೀಕ್ಷಕಿ ಸಂಗಮ್ಮ ಹಿರೇಮಠ, ನ್ಯಾಯವಾದಿಗಳು, ಕಾಂಗ್ರೆಸ್ ವಿವಿಧ ಘಟಕಗಳ ಪದಾಧಿಕಾರಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಇದ್ದರು.