ಸಾರಾಂಶ
ಸರ್ವರ ಹಿತವನ್ನು ಬಯಸುವ ಉಪ್ಪಾರ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯವಾದ ನಿವೇಶನ ದೊರಕಿಸಲಾಗುವುದು. ದಿನನಿತ್ಯ ದುಡಿದು ತಿನ್ನುವ ಉಪ್ಪಾರ ಜನಾಂಗ ಸ್ವಾಭಿಮಾನದ ಬದುಕಿನ ಜನಾಂಗವಾಗಿದೆ. ಈ ಜನಾಂಗದ ಏಳಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ.
ಕನ್ನಡಪ್ರಭ ವಾರ್ತೆ ಮದ್ದೂರು
ಸರ್ವರ ಹಿತವನ್ನು ಬಯಸುವ ಉಪ್ಪಾರ ಜನಾಂಗದ ಸಮುದಾಯ ಭವನ ನಿರ್ಮಾಣಕ್ಕೆ ಸರ್ಕಾರದಿಂದ ಅಗತ್ಯವಾದ ನಿವೇಶನ ದೊರಕಿಸಿ ಕೊಡುವುದಾಗಿ ಶಾಸಕ ಕೆ.ಎಂ.ಉದಯ್ ಭರವಸೆ ನೀಡಿದರು.ಪಟ್ಟಣದ ತಾಪಂ ಸಭಾಂಗಣದಲ್ಲಿ ಮಂಗಳವಾರ ತಾಲೂಕು ಆಡಳಿತ ಮತ್ತು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯಿಂದ ನಡೆದ ಶ್ರೀಭಗೀರಥ ಮಹರ್ಷಿ ಜಯಂತಿಯಲ್ಲಿ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಮಾತನಾಡಿದರು.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಉಪ್ಪಾರ ಜನಾಂಗ ನನಗೆ ಹೆಚ್ಚಿನ ಮತ ನೀಡಿ ಆಶೀರ್ವದಿಸುವ ಮೂಲಕ ಗೆಲುವಿಗೆ ಸಹಕಾರ ನೀಡಿದ್ದಾರೆ. ಈ ಕೃತಜ್ಞತೆಗಾಗಿ ಜನಾಂಗದ ವಿವಾಹ, ಸಭೆ ಸಮಾರಂಭಗಳ ಅನುಕೂಲಕ್ಕಾಗಿ ಸಮುದಾಯ ಭವನ ನಿರ್ಮಾಣಕ್ಕೆ ಅಗತ್ಯ ನಿವೇಶನ ದೊರಕಿಸುವ ಜೊತೆಗೆ ಭವನ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡುವುದಾಗಿ ಆಶ್ವಾಸನೆ ನೀಡಿದರು.ದಿನನಿತ್ಯ ದುಡಿದು ತಿನ್ನುವ ಉಪ್ಪಾರ ಜನಾಂಗ ಸ್ವಾಭಿಮಾನದ ಬದುಕಿನ ಜನಾಂಗವಾಗಿದೆ. ಈ ಜನಾಂಗದ ಏಳಿಗೆಗೆ ಎಲ್ಲಾ ರೀತಿಯ ಸಹಕಾರ ನೀಡುತ್ತೇನೆ ಎಂದರು.
ಉಪ್ಪಾರ ಸಂಘದ ಜಿಲ್ಲಾಧ್ಯಕ್ಷೆ ನಾಗರತ್ನಮ್ಮ ಮಾತನಾಡಿ, ಜಿಲ್ಲೆಯಲ್ಲಿ 42 ಸಾವಿರ ಉಪ್ಪಾರ ಸಮುದಾಯದ ಜನಸಂಖ್ಯೆ ಇದೆ. ಆರ್ಥಿಕವಾಗಿ ಹಿಂದುಳಿದ ಜನಾಂಗವನ್ನು ಗುರುತಿಸುವ ಮೂಲಕ ಶೈಕ್ಷಣಿಕವಾಗಿ ಅಭಿವೃದ್ಧಿಪಡಿಸುವ ಕಾರ್ಯ ನಡೆಯಬೇಕಿದೆ ಎಂದರು.ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ಸಮುದಾಯದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಗ್ರೇಟ್ ಟು ತಹಸೀಲ್ದಾರ್ ಸೋಮಶೇಖರ್, ತಾಪಂ ಇಒ ರಾಮಲಿಂಗಯ್ಯ, ಬಿಇಒ ಧನಂಜಯ, ಡಿಸಿಸಿ ಬ್ಯಾಂಕ್ ನಿರ್ದೇಶಕ ಪಿ.ಸಂದರ್ಶ, ಚಾಮನಹಳ್ಳಿ ಗ್ರಾಪಂ ಅಧ್ಯಕ್ಷ ಸಿದ್ದರಾಜು, ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ವೇದಿಕೆ ಜಿಲ್ಲಾಧ್ಯಕ್ಷ ಎಲ್.ಸಂದೇಶ ಮತ್ತು ಉಪ್ಪಾರ ಸಮುದಾಯದ ಮುಖಂಡರು ಭಾಗವಹಿಸಿದ್ದರು.
ವೇದಿಕೆ ಕಾರ್ಯಕ್ರಮದ ಮುನ್ನ ಪಟ್ಟಣದ ಶ್ರೀಉಗ್ರ ನರಸಿಂಹ ಸ್ವಾಮಿ ದೇವಾಲಯದ ಆವರಣದಿಂದ ಪ್ರಮುಖ ಬೀದಿಗಳ ಮೂಲಕ ತಾಪಂ ಕಚೇರಿವರೆಗೆ ಜಾನಪದ ಕಲಾತಂಡಗಳ ಆಕರ್ಷಕ ಪ್ರದರ್ಶನದೊಂದಿಗೆ ಬೆಳ್ಳಿರಥದ ಮೂಲಕ ಶ್ರೀ ಭಗೀರಥ ಮಹರ್ಷಿ ಭಾವಚಿತ್ರದ ಮೆರವಣಿಗೆ ನಡೆಸಲಾಯಿತು.