ಸಾರಾಂಶ
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ವೆಂಕಾ ಭೋವಿ ಕಾಲನಿಯಲ್ಲಿ ಪ್ರತಿಷ್ಟಾಪಿಸಿದ್ದ ಗಣೇಶ ಮೂರ್ತಿ ಮೆರವಣಿಗೆ ಚಾಮರಾಜ ವೃತ್ತದ ಕಡೆ ಸಾಗುತ್ತಿದ್ದ ವೇಳೆ ಕಲ್ಲು ತೂರಾಟ ನಡೆದಿದ್ದು, ತಕ್ಷಣ ಪೊಲೀಸ್ ಸಿಬ್ಬಂದಿ ನಿಯಂತ್ರಿಸಿದ್ದಾರೆ. ಪರಿಸ್ಥಿತಿ ಶಾಂತವಾಗಿದ್ದು, ಹಲವಾರು ಡ್ರೋನ್ ಕ್ಯಾಮೆರಾಗಳ ಮೂಲಕವೂ ಕಣ್ಗಾವಲು ಇಡಲಾಗಿದೆ ಎಂದು ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತ ತಿಳಿಸಿದ್ದಾರೆ.ಪ್ರತಿ ವರ್ಷ ವೆಂಕಾ ಭೋವಿ ಕಾಲನಿ ಗಣೇಶ ವಿಸರ್ಜನಾ ಮೆರವಣಿಗೆ ಸಾಗುತ್ತಿದ್ದ ಮಾರ್ಗದಲ್ಲಿ ಹೋಗುವಾಗ ಕಲ್ಲು ತೂರಾಟವಾಗಿದೆ. ಘಟನೆಯಲ್ಲಿ ಒಬ್ಬ ಪೊಲೀಸ್ ಸಿಬ್ಬಂದಿಗೆ ಕಲ್ಲೇಟು ಬಿದ್ದಿದ್ದು, ಇತರರಿಗೂ ಕಲ್ಲೇಟು ಬಿದ್ದಿವೆಯಾ ಎಂಬ ಬಗ್ಗೆ ಪರಿಶೀಲಿಸಲಾಗುತ್ತಿದೆ. ಘಟನೆಯ ಬಗ್ಗೆ ಸಂಪೂರ್ಣವಾಗಿ ಪರಿಶೀಲಿಸುವುದಾಗಿ ಅವರು ಹೇಳಿದ್ದಾರೆ.
ತಮ್ಮನ್ನೂ ಸೇರಿದಂತೆ ಎಲ್ಲಾ ಅಧಿಕಾರಿ, ಸಿಬ್ಬಂದಿ ಹಳೆ ಭಾಗದಲ್ಲಿ ವಿಶೇಷವಾಗಿ ಘಟನಾ ಪ್ರದೇಶದ ಸುತ್ತಮುತ್ತ ಗಸ್ತು ನಡೆಸಿದ್ದೇವೆ. ಸದ್ಯಕ್ಕೆ ಪರಿಸ್ಥಿತಿ ಶಾಂತವಾಗಿದೆ. ಗಣೇಶ ಮೂರ್ತಿಯನ್ನು ವಿಸರ್ಜನೆಗೆ ಕಳಿಸಲಾಗಿದೆ. ಹಳೆ ಭಾಗದಲ್ಲಿ ಪರಿಸ್ಥಿತಿ ಈಗ ಶಾಂತವಾಗಿದ್ದು, ಪೊಲೀಸ್ ಇಲಾಖೆ ಎಲ್ಲಾ ಕಡೆ ನಿಗಾವಹಿಸಿದೆ ಎಂದು ಹೇಳಿದ್ದಾರೆ.ಸಾರ್ವಜನಿಕ ಗಣೇಶೋತ್ಸವ ಸಮಿತಿಗಳ ಒಕ್ಕೂಟದ ನೇತೃತ್ವದಲ್ಲಿ ಬುಧವಾರ ಪ್ರತಿಭಟನೆ ವೇಳೆ ಪ್ರಚೋದನಾಕಾರಿ ಹೇಳಿಕೆ ನೀಡಿರುವ ಬಗ್ಗೆ ಬಡಾವಣೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಕಾನೂನು ಪ್ರಕಾರ ಕ್ರಮ ಕೈಗೊಳ್ಳಲಾಗುವುದು ಎಂದರು.
ಘಟನಾ ಸ್ಥಳಕ್ಕೆ ಐಜಿಪಿ ರಮೇಶ ಭೇಟಿದಾವಣಗೆರೆ ಬೇತೂರು ರಸ್ತೆಯಲ್ಲಿ ಕಲ್ಲು ತೂರಾಟವಾದ ಹಿನ್ನೆಲೆಯಲ್ಲಿ ಬಿಗುವಿನ ಪರಿಸ್ಥಿತಿ ನಿರ್ಮಾಣವಾಗಿದ್ದು, ಘಟನಾ ಸ್ಥಳಕ್ಕೆ ಪೂರ್ವ ವಲಯದ ಪೊಲೀಸ್ ಮಹಾ ನಿರೀಕ್ಷಕ ರಮೇಶ ಭೇಟಿ ನೀಡಿ, ಜಿಲ್ಲಾ ಪೊಲೀಸ್ ಅಧೀಕ್ಷಕಿ ಉಮಾ ಪ್ರಶಾಂತರಿಂದ ಮಾಹಿತಿ ಪಡೆದರು. ಸದ್ಯಕ್ಕೆ ಘಟನೆ ನಡೆದ ಪ್ರದೇಶಗಳಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಹೆಚ್ಚಿಸಲಾಗಿದೆ. ಇಡೀ ರಾತ್ರಿ ಪೊಲೀಸ್ ಇಲಾಖೆ ಅಧಿಕಾರಿ, ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಮಾಡಿದ್ದು, ಗಸ್ತು ಕೈಗೊಂಡಿದ್ದಾರೆ.