ಸಾರಾಂಶ
ಗೋಕರ್ಣ: ಇಲ್ಲಿನ ಮಹಾಬಲೇಶ್ವರ ದೇವಾಲಯದ ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಗಂಗಾವಳಿಯ ಗಂಗಾಮಾತಾ ದೇವಾಲಯದಲ್ಲಿ ಗಂಗಾಷ್ಟಾಮಿಯ ದಿನವಾದ ಗುರುವಾರ ಬೆಳಗಿನ ಜಾವ ಸಂಪನ್ನವಾಯಿತು.
ಬುಧವಾರ ಮಧ್ಯರಾತ್ರಿ ಬಿರುದು- ಬಾವಲಿ, ವಾದ್ಯಗಳೊಂದಿಗೆ ಮಹಾಬಲೇಶ್ವರ ದೇವರ ಉತ್ಸವ ಕಡಲಗುಂಟ ಸುಮಾರು ೫ ಕಿಮೀ ಸಾಗಿ ಗಂಗೆಕೊಳ್ಳ ಗ್ರಾಮ ಪ್ರವೇಶಿಸಿ, ನೇಸರ ಮೂಡುವ ಪೂರ್ವಕಾಲದಲ್ಲಿಯೇ ಗಂಗಾವಳಿ ನದಿಯಲ್ಲಿ ದೇವರು ಸ್ನಾನ ಮಾಡಿ, ಗಂಗಾಮಾತಾ ದೇವಾಲಯಕ್ಕೆ ಉತ್ಸವ ತೆರಳಿತು.ಸಹಸ್ರಾರು ಸಂಖ್ಯೆಯಲ್ಲಿ ಸೇರಿದ್ದ ಭಕ್ತ ಜನರ ಸಮ್ಮುಖದಲ್ಲಿ ಅಂಬಿಗರ ಉರಿಯನ ಮನೆತನದ ಬುಧುವಂತರು ತಾಂಬೂಲ ವಿನಿಮಯದೊಂದಿಗೆ ಪೂಜಾ ವಿಧಿ- ವಿಧಾನಗಳು ನೆರವೇರಿತು.
ಆನಂತರ ಶಿವನ ಉತ್ಸವ ಮಾರ್ಗದುದ್ದಕ್ಕೂ ಆರತಿ ಸ್ವೀಕರಿಸುತ್ತಾ ಮಧ್ಯಾಹ್ನ ದೇವಾಲಯಕ್ಕೆ ಮರಳಿತು. ವೇ. ಗಣಪತಿ ಹಿರೇ ಪೂಜಾ ಕೈಂಕರ್ಯ ನೆರವೇರಿಸಿದರು. ಮೇಲುಸ್ತುವಾರಿ ಸಮಿತಿ ಮಾರ್ಗದರ್ಶನದಲ್ಲಿ ನಡೆದ ರೂಢಿಗತ ಕಾರ್ಯಕ್ರಮದಲ್ಲಿ ಸಮಿತಿ ಸದಸ್ಯ ವೇ. ಸುಬ್ರಹ್ಮಣ್ಯ ಅಡಿ, ಮಂದಿರದ ವ್ಯವಸ್ಥಾಪಕರು, ಸಿಬ್ಬಂದಿ ಉಪಸ್ಥಿತರಿದ್ದರು.ಹತ್ತಾರು ಹಳ್ಳಿಗಳ ಆರಾಧ್ಯ ದೇವರಾದ ಗಂಗಾಮಾತೆಗೆ ಸಾವಿರಾರು ಭಕ್ತರು ಪೂಜೆ ಸಲ್ಲಿಸಿದರು. ನಿಶ್ಚಿತಾರ್ಥದಂತೆ ಆಶ್ವೀಜ ಬಹುಳ ಚತುರ್ಥಿ ಅ. ೩೧ರಂದು ಇಳಿ ಹೊತ್ತಿನಲ್ಲಿ ಗೋಕರ್ಣದ ಸ್ವಲ್ಪ ದೂರದ ಸಮುದ್ರ ದಂಡೆಯಲ್ಲಿ ಶಿವಗಂಗಾ ವಿವಾಹ ನೆರವೇರಲಿದೆ.
ಮಳೆ, ಉತ್ಸವಕ್ಕೆ ತೆರೆ: ಪ್ರತಿವರ್ಷ ನಿಶ್ಚಿತಾರ್ಥದ ಹಿಂದಿನ ದಿನದ ರಾತ್ರಿ ಗಂಗಾವಳಿಯಲ್ಲಿ ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಸೇರುತ್ತಾರೆ. ದೇವರ ದರ್ಶನ ಪಡೆದು ಜಾತ್ರೆ ಅಂಗಡಿಗಳಲ್ಲಿ ಮಿಠಾಯಿ, ಸಿಹಿತಿನಿಸು, ಆಟಿಕೆಗಳನ್ನು ಖರೀದಿಸುತ್ತಾರೆ. ಇಲ್ಲಿ ವಿವಿಧ ಅಂಗಡಿಗಳು ಬರುತ್ತದೆ. ಆದರೆ ಈ ವರ್ಷದ ಜಾತ್ರೆಯ ವೇಳೆ ಮಳೆ ಸುರಿದಿದೆ. ಆದರೆ ದೇವಾಲಯದ ಉತ್ಸವ ಮಧ್ಯರಾತ್ರಿಯಲ್ಲಿ ಹೊರಟಾಗ ಮಳೆ ಸಂಪೂರ್ಣ ನಿಂತಿತ್ತು.ಗಂಗಾವಳಿಯಲ್ಲಿ ಸಂಭ್ರಮದ ಗಂಗಾಷ್ಟಮಿ ಜಾತ್ರೆಗೋಕರ್ಣ: ಗಂಗಾಷ್ಟಮಿಯ ದಿನ, ಶಿವಗಂಗಾ ವಿವಾಹ ನಿಶ್ಚಿತಾರ್ಥ ಪ್ರಯುಕ್ತ ಗಂಗಾವಳಿಯ ಗಂಗಾಮತಾ ದೇವಾಲಯದಲ್ಲಿ ಬುಧವಾರ ಸಂಜೆ ಗಂಗೆ ಹಬ್ಬ ಎಂದೇ ಕರೆಯುವ ಜಾತ್ರೆ ಅದ್ಧೂರಿಯಾಗಿ ನಡೆಯಿತು.
ಮುಂಜಾನೆಯಿಂದ ಸಾವಿರಾರು ಜನರು ಗಂಗಾಮಾತೆಯ ದರ್ಶನ ಪಡೆದರು. ದೊಡ್ಡವರಿಂದ ಚಿಕ್ಕ ಮಕ್ಕಳ ವರೆಗೆ ಜಾತ್ರೆಯಲ್ಲಿ ಪಾಲ್ಗೊಂಡು ಎಲ್ಲೆಡೆ ಸುತ್ತಾಡಿ ಸಂಭ್ರಮಿಸಿದರು. ಸುರಿಯುವ ಮಳೆ ಲೆಕ್ಕಿಸದೆ ಜನರು ಕಿಕ್ಕಿರಿದು ತುಂಬಿದ್ದರು. ಒಂದು ತಾಸಿಗೂ ಅಧಿಕ ಸಮಯ ಸುರಿದ ಮಳೆ ಆನಂತರ ಬಿಡುವು ನೀಡಿತ್ತು.ಮಂದಿರದಲ್ಲಿ ಪ್ರದಕ್ಷಿಣೆ ಹಾಕುವ ವೇಳೆ ಹಿಂಬದಿಯ ಗೋಡೆಗೆ ನಾಣ್ಯಗಳನ್ನು ಅಂಟಿಸುವ ವಿಶಿಷ್ಟ ಹರಕೆಯನ್ನು ಭಕ್ತರು ಇಲ್ಲಿ ನೆರವೇರಿಸುತ್ತಾರೆ. ಇಲ್ಲಿ ಅಂಟಿಸಿದ ನಾಣ್ಯ ಗೋಡೆಗೆ ನಿಂತರೆ ಇಷ್ಟಾರ್ಥ ಸಿದ್ಧಿಯಾಗುತ್ತದೆ ಎಂಬ ಪ್ರತೀತಿ ಇದೆ. ವಿಶೇಷವಾಗಿ ವಿವಾಹಕ್ಕೋಸ್ಕರ ನಾಣ್ಯ ಅಂಟಿಸಿ ತಿಳಿದುಕೊಳ್ಳುವುದು ವಾಡಿಕೆಯಾಗಿದ್ದು, ನಾಣ್ಯ ಗೋಡೆಯಲ್ಲಿ ನಿಂತರೆ ಬರುವ ಹಬ್ಬದ ಒಳಗೆ ಮದುವೆಯಾಗುತ್ತದೆ ಎಂಬ ನಂಬಿಕೆ ಇದೆ. ಈ ಹಬ್ಬದಲ್ಲಿ ಮುಸ್ಲಿಂ ಸಮುದಾಯದವರೂ ಪಾಲ್ಗೊಂಡಿದ್ದರು.ಹಿಂದೂ ವಿರಾಟ ಯುವಕ ಸಂಘದವರ ಬೃಹತ್ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ಆಯೋಜಿಸಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ, ಶಾಸಕ ಸತೀಶ ಸೈಲ್ ಅವರನ್ನು ಆಮಂತ್ರಿಸಿದ್ದರು. ಆದರೆ ಅವರು ಬರಲಿಲ್ಲ. ಉಳಿದ ಆಹ್ವಾನಿತರು ಆಗಮಿಸಿದ್ದರೂ ಮಳೆ ಅಬ್ಬರಿಸಿದ್ದರಿಂದ ವೇದಿಕೆ ಕಾರ್ಯಕ್ರಮ ರದ್ದು ಮಾಡಲಾಯಿತು. ಆದರೆ ಆನಂತರ ಸಾಂಸ್ಕೃತಿಕ ಕಾರ್ಯಕ್ರಮ ಬೆಳಗಿನ ಜಾವದ ವರೆಗೂ ನಡೆಯಿತು.