ಕನ್ನಡಪ್ರಭ ವಾರ್ತೆ ವಿಜಯಪುರ ಜಮೀನು ವಿವಾದದ ಹಿನ್ನೆಲೆ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರದ ಜಮೀನೊಂದರಲ್ಲಿ ಮೇ 29ರಂದು ನಡೆದಿದ್ದ 6 ಜನರ ಭೀಕರ ಕಗ್ಗೊಲೆ ಪ್ರಕರಣದಲ್ಲಿ ಗುರುವಾರ ಮತ್ತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಕನ್ನಡಪ್ರಭ ವಾರ್ತೆ ವಿಜಯಪುರ
ಜಮೀನು ವಿವಾದದ ಹಿನ್ನೆಲೆ ಭೀಮಾತೀರದ ಚಡಚಣ ತಾಲೂಕಿನ ಗೋವಿಂದಪುರದ ಜಮೀನೊಂದರಲ್ಲಿ ಮೇ 29ರಂದು ನಡೆದಿದ್ದ 6 ಜನರ ಭೀಕರ ಕಗ್ಗೊಲೆ ಪ್ರಕರಣದಲ್ಲಿ ಗುರುವಾರ ಮತ್ತೆ 6 ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಮಾರ್ಗದರ್ಶನದಲ್ಲಿ ಚಡಚಣ ಹಾಗೂ ಜಿಲ್ಲಾ ಪೊಲೀಸ್ ಅಧಿಕಾರಿಗಳು ಆರೋಪಿಗಳ ಬಂಧನಕ್ಕೆ ವಿಶೇಷ ತಂಡ ರಚಿಸಲಾಗಿತ್ತು. ಪೊಲೀಸ್ ತಂಡ ಕಾರ್ಯಾಚರಣೆ ನಡೆಸಿ ಗೋವಿಂದಪುರ ನಿವಾಸಿಗಳಾದ ಅಪ್ಪುಗೌಡ ಪಾಟೀಲ, ಶಂಕ್ರಪ್ಪ ಅರಕೇರಿ, ಅಪ್ಪಾಸಾಬ ಭೋವಿ, ಸತ್ಯಪ್ಪ ಬಿರಾದಾರ, ಸುಲ್ತಾನ ಬಿರಾದಾರ, ಮಹೇಶ ಬಿರಾದಾರ ಎಂಬುವರನ್ನು ಬಂಧಿಸಿದ್ದಾರೆ. ಈ ಮೂಲಕ ಬಂಧಿತರ ಸಂಖ್ಯೆ 18ಕ್ಕೇರಿದೆ.
ಏನಿದು ಪ್ರಕರಣ..?:ಗೋವಿಂದಪುರದಲ್ಲಿ ವಿವಾದದಲ್ಲಿದ್ದ 25 ಎಕರೆ ಜಮೀನನ್ನು ಖರೀದಿಸಿದ್ದ ನಿರಾಳೆ ಕುಟುಂಬದ ದುಂಡಪ್ಪ ನಿರಾಳೆ, ಚಂದ್ರಕಾಂತ ನಿರಾಳೆ, ಶಿವಪುತ್ರ ನಿರಾಳೆ, ಸಮರ್ಥ ನಿರಾಳೆ, ರಾಹುಲ ನಿರಾಳೆ, ಹಾಗೂ ಶಬ್ಬಿರ್ ಅತ್ತಾರ ಎಂಬುವವರನ್ನು ಭೀಕರವಾಗಿ ಕೊಲೆ ಮಾಡಲಾಗಿತ್ತು. 10-12 ಬೈಕ್‌ಗಳ ಮೇಲೆ ಬಂದಿದ್ದ ದುರುಳರು ನಿರಾಳೆ ಕುಟುಂಬದವರ ಕಣ್ಣಿಗೆ ಖಾರದಪುಡಿ ಎರಚಿ, ಗುಂಡು ಹಾರಿಸಿ ಬಳಿಕ ಮಾರಕಾಸ್ತ್ರಗಳಿಂದ ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದರು. ಆರೋಪಿಗಳ ಪೈಕಿ ಜೂ.1ರಂದು ಪ್ರಮುಖ ಆರೋಪಿ ಕಲ್ಲನಗೌಡ ಪಾಟೀಲ ಸೇರಿ 12 ಜನರನ್ನು ಜಿಲ್ಲಾ ಪೊಲೀಸರು ಬಂಧಿಸಿದ್ದರು.
ತನಿಖೆ ವೇಳೆ ಇನ್ನಷ್ಟು ಆರೋಪಿಗಳ ಪಾತ್ರ ಬೆಳಕಿಗೆ ಬಂದ ಹಿನ್ನೆಲೆ ಗುರುವಾರ ಮತ್ತೆ 6 ಜನರನ್ನು ಬಂಧಿಸಲಾಗಿದೆ. ಇದೀಗ ಪ್ರಕರಣದಲ್ಲಿ 18 ಆರೋಪಿಗಳನ್ನು ಬಂಧಿಸಿದಂತಾಗಿದೆ. ಬಂಧಿತ ಆರೋಪಿಗಳನ್ನು ವೈದ್ಯಕೀಯ ಪರೀಕ್ಷೆ ನಡೆಸಿ, ನ್ಯಾಯಾಲಯಕ್ಕೆ ಪೊಲೀಸರು ಹಾಜರುಪಡಿಸಿದ್ದಾರೆ. ಬಳಿಕ ಹೆಚ್ಚಿನ ವಿಚಾರಣೆಗಾಗಿ ಆರೋಪಿಗಳನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದು, ಇನ್ನಷ್ಟು ಆರೋಪಿಗಳ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.----------ಕೋಟ್......
ಚಡಚಣ ಪೊಲೀಸ್ ಠಾಣೆ ವ್ಯಾಪ್ತಿಯ ಗೋವಿಂದಪುರದಲ್ಲಿ 6 ಜನರ ಕೊಲೆ ಪ್ರಕರಣದ ಕುರಿತು ಚಡಚಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಜೂ.1ರಂದು 12 ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಗುರುವಾರ ಮತ್ತೆ ಗೋವಿಂದಪುರದ 6 ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಈ ಪ್ರಕರಣದಲ್ಲಿ ಇದುವರೆಗೂ ಒಟ್ಟು 18 ಜನ ಆರೋಗಳ ಬಂಧಿನವಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಶೋಧ ನಡೆಸಲಾಗುತ್ತಿದೆ. ಘಟನೆ ಕುರಿತು ಎಲ್ಲಾ ಆಯಾಮಗಳಲ್ಲೂ ತನಿಖೆ ಮುಂದುವರೆದಿದೆ.- ಲಕ್ಷ್ಮಣ ನಿಂಬರಗಿ, ವಿಜಯಪುರ ಎಸ್‌ಪಿ