ಸಾರಾಂಶ
ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಉತ್ತರ ಕನ್ನಡದ ವತಿಯಿಂದ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶ ನಡೆಯಿತು.
ಕನ್ನಡಪ್ರಭ ವಾರ್ತೆ ಹೊನ್ನಾವರ
ತಾಲೂಕಿನ ಮೂಡಗಣಪತಿ ಸಭಾಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಹಾಗೂ ಅಖಿಲ ಕರ್ನಾಟಕ ಜನ ಜಾಗೃತಿ ವೇದಿಕೆ ಟ್ರಸ್ಟ್ ಉತ್ತರ ಕನ್ನಡದ ವತಿಯಿಂದ ಜಿಲ್ಲಾ ಮಟ್ಟದ ಗಾಂಧಿ ಸ್ಮೃತಿ ಮತ್ತು ಜನಜಾಗೃತಿ ಸಮಾವೇಶ ನಡೆಯಿತು.ತಹಸಿಲ್ದಾರ್ ಪ್ರವಿಣ್ ಕರಾಂಡೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಈ ಟ್ರಸ್ಟ್ ಹಾಗೂ ಎಸ್‌ಕೆಡಿಆರ್‌ಡಿಪಿ ಸಮಾಜದ ಹಿಂದುಳಿದವರಿಗೆ, ಮಕ್ಕಳಿಗೆ, ಅಂಗವಿಕಲರಿಗೆ ಸಹಾಯ ಮಾಡುತ್ತಾ ಬಂದಿದೆ. ವ್ಯಸನ ಮುಕ್ತ ಸಮಾಜ ನಿರ್ಮಿಸುವ ಪಣವನ್ನು ತೊಟ್ಟ ದೊಡ್ಡ ಸಂಸ್ಥೆ ಇದಾಗಿದೆ. ಸಾಮಾಜಿಕ ಕಳಕಳಿಯುಳ್ಳ ಕಾರ್ಯಕ್ರಮ ಇದಾಗಿದೆ. ಇದು ಮಹಿಳೆಯರಿಗೆ, ವಿದ್ಯಾರ್ಥಿಗಳಿಗೆ ಬದುಕಲು ಸುಲಭ ಮಾರ್ಗ ತೋರಿಸುತ್ತದೆ ಎಂದರು.
ನಂತರ ಕಾರ್ಯಕ್ರಮದ ಆಶಯ ಮಾತುಗಳನ್ನಾಡಿದ ಪತ್ರಕರ್ತ ಜಿ.ಯು. ಭಟ್ ಮಾತನಾಡಿ, ಈ ಕಾರ್ಯಕ್ರಮದ ಮೂಲಕ ಸಾರಾಯಿಯನ್ನು ಬಿಟ್ಟ ಜನರು ಇನ್ನೆಂದು ಸಾರಾಯಿ ಮುಟ್ಟುವುದಿಲ್ಲ ಎಂದು ಪ್ರಮಾಣ ಮಾಡಬೇಕು. ಗಾಂಧೀಜಿ ಸ್ವದೇಶಿ ಚಳವಳಿಯ ಜೊತೆಗೆ ಮದ್ಯಪಾನ ವಿರೋಧಿಸಿದ್ದರು. ಆತ್ಮನಿರ್ಭರ ಭಾರತದ ಮೂಲ ಚಿಂತನೆ ಗಾಂಧಿಯದ್ದಾಗಿದೆ. ಗಾಂಧೀಜಿ ಹೇಳಿದ ಮಾತನ್ನು ಜಗತ್ತು ಒಪ್ಪಿದೆ. ಶಾಂತಿ, ಪ್ರೀತಿ, ಸತ್ಯಾಗ್ರಹ ಸಾರಿದ್ದಾರೆ. ಜಗಳ, ಯುದ್ಧ ಯಾವುದಕ್ಕೂ ಪರಿಹಾರವಲ್ಲ ಎಂದಿದ್ದಾರೆ. ಎಸ್‌ಕೆಡಿಆರ್‌ಡಿಪಿಯ ಎಲ್ಲಾ ಕಾರ್ಯಕ್ರಮಗಳು ಗಾಂಧಿಯ ಮಾರ್ಗದಲ್ಲಿದೆ ಎನ್ನುತ್ತಾ ಈ ಸಂಸ್ಥೆ ಮಾಡುವ ಜನೋಪಯೋಗಿ ಕೆಲಸಗಳ ಕುರಿತು ವಿವರಿಸಿದರು. ಮಾಜಿ ಶಾಸಕ ಗಂಗಾಧರ್ ಭಟ್ ಮಾತನಾಡಿದರು. ಪಪಂ ಉಪಾಧ್ಯಕ್ಷ ಸುರೇಶ್ ಹೊನ್ನಾವರ, ದೇವಿದಾಸ್ ಮಡಿವಾಳ, ಶಿವರಾಜ್ ಮೇಸ್ತ, ಎಸ್.ಜಿ. ಭಟ್ ಹಾಗೂ ಧರ್ಮಸ್ಥಳ ಸಂಘದ ಸದಾಧಿಕಾರಿಗಳು, ಮುಖ್ಯಸ್ಥರು ಹಾಜರಿದ್ದರು.ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್ ಅಧ್ಯಕ್ಷ ಮಹೇಶ್ ಬಿ. ನಾಯ್ಕ ಅವರ್ಸ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ಸಾರಾಯಿ ಕುಡಿಯುವುದನ್ನು ಬಿಟ್ಟ ಇಬ್ಬರು ತಮ್ಮ ಅಭಿಪ್ರಾಯ ಹಂಚಿಕೊಂಡರು. ಅಲ್ಲದೆ ಇದೇ ವೇಳೆ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.