ಸರ್ಕಾರಿ ಶಾಲೆ ಮಕ್ಕಳಿಗೆ ಸಂಧ್ಯಾಸಂಕಲ್ಪ

| Published : Feb 23 2025, 12:33 AM IST

ಸಾರಾಂಶ

ಕನ್ನಡಪ್ರಭ ವಾರ್ತೆ ವಿಜಯಪುರ ಶಿಕ್ಷಣವೇ ಪ್ರಬಲ ಅಸ್ತ್ರ, ಶಿಕ್ಷಣದ ಮುಂದೆ ಜಗತ್ತಿನ ಬೇರೆ ಅಸ್ತ್ರಗಳು ಶೂನ್ಯ. ಆದ್ದರಿಂದ ಮನಸ್ಸು ಕೊಟ್ಟು ಓದಿ ಸಾಧನೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಕನ್ನಡಪ್ರಭ ವಾರ್ತೆ ವಿಜಯಪುರ

ಶಿಕ್ಷಣವೇ ಪ್ರಬಲ ಅಸ್ತ್ರ, ಶಿಕ್ಷಣದ ಮುಂದೆ ಜಗತ್ತಿನ ಬೇರೆ ಅಸ್ತ್ರಗಳು ಶೂನ್ಯ. ಆದ್ದರಿಂದ ಮನಸ್ಸು ಕೊಟ್ಟು ಓದಿ ಸಾಧನೆ ಮಾಡಿ ಎಂದು ಅಪರ ಜಿಲ್ಲಾಧಿಕಾರಿ ಸೋಮಲಿಂಗ ಗೆಣ್ಣೂರ ಹೇಳಿದರು.

ಬಬಲೇಶ್ವರ ತಾಲೂಕಿನ ಕಂಬಾಗಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಜಿಲ್ಲಾ ಪಂಚಾಯತಿ, ಶಾಲಾ ಶಿಕ್ಷಣ ಇಲಾಖೆ ಹಾಗೂ ವಿಜಯಪುರ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಗ್ರಾಮೀಣ ವಲಯ ಆಶ್ರಯದಲ್ಲಿ ನಡೆದ ಸರ್ಕಾರದ ₹ 2 ಲಕ್ಷ ಅನುದಾನದಲ್ಲಿ ನೂತನ ವಿಜ್ಞಾನ ಪ್ರಯೋಗಾಲಯ ಮತ್ತು ಸಂಧ್ಯಾ ಸಂಕಲ್ಪ-2025 (ನಾನು ಪಾಸಾಗುವೆ) ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಿಮ್ಮ ಸಾಧನೆಗೆ ನೀವೇ ದಾರಿದೀಪ ಎನ್ನುವ ಹಾಗೆ ಬಿಇಒ ವಿಶೇಷ ಕಾಳಜಿಯಿಂದ ಟಾರ್ಗೆಟ್-625 ಎನ್ನುವ ವಿಶಿಷ್ಟ ವಿನೂತನ ಕಾರ್ಯಕ್ರಮದ ಮೂಲಕ ಫಲಿತಾಂಶವನ್ನು ಹೆಚ್ಚಿಸಿಕೊಳ್ಳಬೇಕು. ತಂದೆ ತಾಯಿ ಹಾಗೂ ಶಿಕ್ಷಕರೇ ಈ ದೇಶದ ಹೀರೋಗಳು. ಇವರ ಮಾರ್ಗದರ್ಶನದಲ್ಲಿ ಜೀವನ ನಿರ್ಮಿಸಿಕೊಳ್ಳಬೇಕು. ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ₹ 50 ಸಾವಿರ ಠೇವಣಿ ಇಟ್ಟು ಬರುವ ಬಡ್ಡಿ ಹಣದಿಂದ ಪ್ರೋತ್ಸಾಹ ಧನ ನೀಡಲಾಗುವುದು ಎಂದು ಹೇಳಿದರು.

ಗ್ರಾಮೀಣ ವಲಯದ ಬಿಇಒ ಪ್ರಮೋದಿನಿ ಬಳೋಲಮಟ್ಟಿ ಮಾತನಾಡಿ, ಶಿಕ್ಷಕರ ಪರಿಶ್ರಮದಿಂದ ಮಕ್ಕಳ ಶ್ರೇಯೋಭಿವೃದ್ಧಿಗೆ ಶ್ರಮಿಸುತ್ತಿರುವ ಶಾಲೆಯ ಶಿಕ್ಷಕರಿಗೆ ಧನ್ಯವಾದ ಅರ್ಪಿಸಿದರು. ಪುಸ್ತಕದ ಹುಳುವಾಗಿ, ಎಸ್‌ಡಿಎಂಸಿ ಸದಸ್ಯರ ಸಹಕಾರದಿಂದ ಈ ಶಾಲೆ ದೇಶಕ್ಕೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು.

ಮುಖ್ಯೋಪಾಧ್ಯಾಯ ಮಲ್ಲಿಕಾರ್ಜುನ ಯರಗುದ್ರಿ ಮಾತನಾಡಿ, ಎಸ್ಎಸ್ಎಲ್‌ಸಿ ಫಲಿತಾಂಶ ಸುಧಾರಣೆಗೆ ಶಾಲೆಯಲ್ಲಿ ರಾತ್ರಿ ಸಮಯದಲ್ಲಿ ಸಂಧ್ಯಾ ಸಂಕಲ್ಪ ಎಂಬ ಚಟುವಟಿಕೆ ಹಮ್ಮಿಕೊಳ್ಳಲಾಗಿದೆ. 60 ಮಕ್ಕಳು ರಾತ್ರಿ ಸಮಯದಲ್ಲಿ ಪ್ರತಿ ದಿನ ಪಾಠಕ್ಕೆ ಹಾಜರಾಗುತ್ತಿದ್ದಾರೆ. ಪ್ರತಿ ದಿನ ಒಬ್ಬರು ಶಿಕ್ಷಕರು ನಿಯೋಜನೆ ಮೇಲೆ ಪಾಠ ಹೇಳುತ್ತಿದ್ದಾರೆ. ಪ್ರತಿ ದಿನ ಎಲ್ಲ ಮಕ್ಕಳ ಪಾಲಕರನ್ನು ಭೇಟಿ ನೀಡಿ ತಮ್ಮ ಮಕ್ಕಳಿಗೆ ಓದಲು ಎಲ್ಲ ಸಿಬ್ಬಂದಿ ಪ್ರೇರಣೆ ನೀಡುತ್ತಿದ್ದಾರೆ. ರಾತ್ರಿ ವೇಳೆ ಶಾಂತ ಸಮಯದಲ್ಲಿ ಮಕ್ಕಳು ಹೆಚ್ಚಿನ ಆಸಕ್ತಿಯಿಂದ ಅಭ್ಯಾಸ ಮಾಡುತ್ತಿದ್ದಾರೆ. ಹೀಗಾಗಿ ಹಳ್ಳಿಯ ಮಕ್ಕಳು ಕೂಡ ನಾವಿನ್ಯಯುತ ಪ್ರಯೋಜನ ಆಗಲಿ ಎಂದು ವಿಜ್ಞಾನ ಪ್ರಯೋಗಾಲಯ ನಿರ್ಮಿಸಿದ್ದಾರೆ ಎಂದರು.

ಇಸಿಒ ಪ್ರಭು ಬಿರಾದಾರ, ಗ್ರಾಪಂ ಅಧ್ಯಕ್ಷ ಹಣಮಂತ ಸೊನ್ನದ, ಎಂ.ಪಿ.ಜಾನೋಜಿ, ಮಲ್ಲಪ್ಪ ಸಿಂಗಿ, ಹಣಮಂತ ನಾವಿ, ಪಾಂಡು ದಳವಾಯಿ, ಶ್ರೀಕಾಂತ ತೇಲಿ, ಎಂ.ಎಸ್.ತೊದಲಬಾಗಿ, ಗುರು ಹಿರೇಮಠ, ಎ.ಎಂ.ಬಿರಾದಾರ, ಡಿ.ಜಿ.ಇಮ್ಮನದ, ಜೆ.ಎಸ್.ದೇಶನೂರ ಉಪಸ್ಥಿತರಿದ್ದರು.